Site icon Vistara News

Fraud Case: ಷೇರು ಮಾರ್ಕೆಟ್‌ನಲ್ಲಿ ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿ ದಂಪತಿ ಪರಾರಿ!

fraud case

ಕಲಬುರಗಿ: ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿ, ದಂಪತಿ ಪರಾರಿಯಾಗಿರುವುದು ನಗರದಲ್ಲಿ ನಡೆದಿದೆ. ಕ್ಯಾಪಿಟಲ್‌ ಗ್ರೋ ಲರ್ನ್ ಟ್ರೇಡಿಂಗ್ ಕಂಪನಿಯ ಮಾಲೀಕ ಉತ್ಕರ್ಷ ವರ್ಧಮಾನೆ ಮತ್ತು ಪತ್ನಿ ಸಾವಿತ್ರಿ ವರ್ಧಮಾನೆ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ (Fraud Case) ಆರೋಪ ಕೇಳಿಬಂದಿದ್ದು, ವಂಚನೆ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಕಿಲಾಡಿ ದಂಪತಿ ಪರಾರಿಯಾಗಿದ್ದಾರೆ.

ಕಲಬುರಗಿ ತಾಲೂಕಿನ ಕುರಿಕೋಟಾ ಗ್ರಾಮದ ಶಿಕ್ಷಕ ವೀರೇಶ ಭೀಮಾಶಂಕರ ಭಾಗೋಡಿ (24) ಎಂಬುವವರು ನೀಡಿದ ದೂರಿನ ಮೇರೆಗೆ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ಕರ್ಷ ವರ್ಧಮಾನೆ ಮತ್ತು ಪತ್ನಿ ಸಾವಿತ್ರಿ ವರ್ಧಮಾನೆ ಅವರು ನಗರದ ಗಾಂಧಿ ನಗರದ ಬಿ.ಎಲ್.ಕಾಂಪ್ಲೆಕ್ಸ್‌ನಲ್ಲಿ ಒಂದು ಆಫೀಸ್ ಮಾಡಿಕೊಂಡು 1 ಲಕ್ಷ ತುಂಬಿದರೆ ಒಂದು ವರ್ಷದಲ್ಲಿ 2 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು. ಇದನ್ನು ನಂಬಿ ಹಂತ ಹಂತವಾಗಿ ವೀರೇಶ ಭೀಮಾಶಂಕರ ಭಾಗೋಡಿ ಅವರು 5.5 ಲಕ್ಷ ರೂ. ನೀಡಿದ್ದರು. ಇವರಂತೆ ಮಹ್ಮದ್ ಇಬ್ರಾಹಿಂ, ಗುಂಡಪ್ಪ ವಾರದ, ಚಂದ್ರಕಾಂತ ರಾಠೋಡ್, ಸುನಿತಾ, ಶರಣು ಎಂಬುವವರು ಸೇರಿ ಇತರರು ಸುಮಾರು 30 ಕೋಟಿಗೂ ಹೆಚ್ಚು ಹಣವನ್ನು ಉತ್ಕರ್ಷ ವರ್ಧಮಾನೆ ಅವರಿಗೆ ನೀಡಿದ್ದಾರೆ. ಈ ಹಣವನ್ನು ಉತ್ಕರ್ಷ ವರ್ಧಮಾನೆ ಮತ್ತು ಅವರ ಪತ್ನಿ ಸಾವಿತ್ರಿ ವರ್ಧಮಾನೆ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಈ ಪ್ರಕರಣದಲ್ಲಿ ವರ್ಧಮಾನೆ ದಂಪತಿಗೆ ಪರಾರಿಯಾಗಲು ಸಹಕರಿಸಿದ ಸಂಬಂಧಿಕರಾದ ಸುಧಾ ಠಾಕೂರ್ ಮತ್ತು ವಿಜಯಸಿಂಗ್ ಹಜಾರೆ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಬಗ್ಗೆ ರೋಜಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ಇದನ್ನೂ ಓದಿ: Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version