ಬೆಂಗಳೂರು: ಆಂಧ್ರಪ್ರದೇಶ ಅಥವಾ ತೆಲಂಗಾಣ ರಾಜ್ಯದವರು ನನ್ನನ್ನು ರಾಜ್ಯಪಾಲನನ್ನಾಗಿ ನೇಮಿಸಲಿದ್ದಾರೆಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬ ನಿವೃತ್ತ ಯೋಧರೊಬ್ಬರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ (Fraud Case) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಂತಕುಮಾರ್ ಜಟ್ಟೂರ ಎಂಬಾತನೇ ವಂಚನೆ ಮಾಡಿದಾತ. ಕಲಬುರಗಿ ಮೂಲದ ಮಾರುತಿ ಘೋಡಕೆ ಎಂಬುವವರು ಮೋಸಹೋದವರು.
ಮಾರುತಿ ಘೋಡಕೆ ಅವರು ಸೇನೆಯಿಂದ ನಿವೃತ್ತಿಯಾದ ಬಳಿಕ ಸ್ನೇಹಿತನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಶಾಂತಕುಮಾರ್ ಮನೆಗೆ ಏಜೆನ್ಸಿ ಮೂಲಕ ಭದ್ರತೆಗಾಗಿ ಮಾರುತಿ ಅವರು ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಕಾಲಕ್ರಮೇಣ ವಂಚಕ ಶಾಂತಕುಮಾರ್ ಮಾರುತಿ ಅವರನ್ನು ಏಜೆನ್ಸಿಯಿಂದ ಬಿಡಿಸಿ, ಭದ್ರತಾ ಅಧಿಕಾರಿಯಾಗಿ ನೇಮಿಸಿಕೊಂಡು ನಾನೇ ನಿಮಗೆ ನೇರವಾಗಿ ಸಂಬಳ ಪಾವತಿಸುತ್ತೇನೆ ಎಂದು ಹೇಳಿದ್ದಾನೆ.
ಮಾರುತಿ ಅವರನ್ನು ನಂಬಿಸುವ ಉದ್ದೇಶದಿಂದ ಶಾಂತಕುಮಾರ್ ತಾನು ಭಾರತೀಯ ರಿಸರ್ವ್ ಬ್ಯಾಂಕ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಎಂದು ನಂಬಿಸಿದ್ದಾನೆ. ಜತೆಗೆ ಕೆಲವೇ ದಿನಗಳಲ್ಲಿ ಆಂಧ್ರಪ್ರದೇಶ ಅಥವಾ ತೆಲಂಗಾಣ ರಾಜ್ಯದ ರಾಜ್ಯಪಾಲರನ್ನಾಗಿ ತನ್ನನ್ನು ನೇಮಿಸಲಿದ್ದಾರೆ ಎಂದು ವೆಬ್‌ಸೈಟ್‌ವೊಂದರಲ್ಲಿ ಬಂದಿದ್ದ ಸುದ್ದಿ ತೋರಿಸಿ ನಂಬಿಸಿದ್ದಾನೆ. ಜತೆಗೆ ಅಲ್ಲಿನ ಸರ್ಕಾರ ಈಗಾಗಲೇ ಶಾಂತಕುಮಾರ್ ಜಟ್ಟೂರ ಎಂಬ ನಾಮಫಲಕ ಇರುವ ಕಾರು ಕೊಟ್ಟಿದೆ ಎಂದು ನಂಬಿಸಿದ್ದಾನೆ.
ಈ ವೇಳೆ ನನ್ನ ಅಕೌಂಟ್‌ನಲ್ಲಿ 23 ಲಕ್ಷ ರೂ. ಇದೆ. ಅದನ್ನು ಡ್ರಾ ಮಾಡಲು ಪ್ರೋಟೋಕಾಲ್ ಅಡ್ಡಿ ಬರುತ್ತಿದೆ. ಹೀಗಾಗಿ ತುರ್ತು ಹಣದ ಅವಶ್ಯಕತೆ ಇದೆ ಎಂದು ಮಾರುತಿ ಘೋಡಕೆ ಬಳಿ ಹಂತ ಹಂತವಾಗಿ 27 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾನೆ. ಈ ಮಧ್ಯೆ ಶಾಂತಕುಮಾರ್ ಮೇಲೆ ಅನುಮಾನಗೊಂಡ ಮಾರುತಿ ಅವರು ಕೊಟ್ಟ ಹಣ ಕೇಳಲು ಶುರು ಮಾಡಿದ್ದಾರೆ.
ಅಷ್ಟರಲ್ಲಿ ಡ್ರಾಮಾ ಶುರು ಮಾಡಿದ ವಂಚಕ ಶಾಂತಕುಮಾರ್ ನನಗೆ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದೆಲ್ಲ ಸಬೂಬು ನೀಡಿದ್ದಾನೆ. ಬಳಿಕ ತನ್ನ ವಂಚನೆ ಆಟ ನಡೆಯುವುದಿಲ್ಲ ಎಂದು ತಿಳಿದಾಗ ಹಣ ಹಿಂತಿರುಗಿಸುವುದಾಗಿ ಹೇಳಿ ಅಗ್ರಿಮೆಂಟ್ ಮಾಡಿಕೊಟ್ಟು ಪರಾರಿ ಆಗಿದ್ದಾನೆ. ಸದ್ಯ ವಂಚಕ ಶಾಂತಕುಮಾರ್‌ನಿಂದ ಲಕ್ಷ ಲಕ್ಷ ಹಣ ಕಳೆದುಕೊಂಡ ನಿವೃತ್ತ ಯೋಧ ಮಾರುತಿ ನ್ಯಾಯಕ್ಕಾಗಿ ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಲಬುರಗಿ ಎಂ.ಬಿ.ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | IND VS NZ | ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಕಿವೀಸ್ಗೆ ಬ್ಯಾಟಿಂಗ್ ಆಹ್ವಾನ