Site icon Vistara News

Fraud Case : ಎನ್ವಿ ಗ್ರೀನ್ ಕಂಪನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್‌ ಹೆಗ್ಡೆ?

ENVI Green Biotic

ಬೆಂಗಳೂರು: ಆರ್ಗಾನಿಕ್ ಚೀಲದ ಹೆಸರಲ್ಲಿ ಕೋಟಿ ಕೋಟಿ ವಂಚನೆ (Fraud Case) ಮಾಡಿರುವ ಆರೋಪದ ಮೇಲೆ ಎನ್ವಿ ಗ್ರೀನ್ ಕಂಪೆನಿ (ENVI Green) ಮಾಲೀಕನ ವಿರುದ್ಧ ಎಫ್ಐಆರ್ ದಾಖಲು (FIR Registered) ಮಾಡಲಾಗಿದೆ.

ಎನ್ವಿ ಗ್ರೀನ್ ಮಾಲೀಕ ಅಶ್ವತ್ಥ್ ಹೆಗ್ಡೆ (Ashwath Hegde) ವಿರುದ್ಧ ಈಗ ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶ್ವಥ್ ಹೆಗ್ಡೆ ವಿರುದ್ಧ ಉದ್ಯಮಿ ನಿಲಿಮಾ ಅವರು ದೂರು ನೀಡಿದ್ದಾರೆ.

ಪ್ಲಾಸ್ಟಿಕ್ ಬದಲು ಆರ್ಗಾನಿಕ್ ಬ್ಯಾಗ್ (Organic bag) ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದ ಅಶ್ವತ್ಥ್ ಹೆಗ್ಡೆ ಈ ಬಗ್ಗೆ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿದ್ದರು. ಅಲ್ಲದೆ, ಕೇಂದ್ರ ಸಚಿವರು, ರಾಜ್ಯ ಸಚಿವರು ಸೇರಿದಂತೆ ಅನೇಕ ರಾಜಕಾರಣಿಗಳು ಹಾಗೂ ಗಣ್ಯರ ಜತೆ ಉತ್ತಮ ಒಡನಾಟವನ್ನು ಹೊಂದಿದ್ದರು. ಆದರೆ, ಈಗ ಉದ್ಯಮಿಯೊಬ್ಬರಿಗೆ ಯಂತ್ರ ಕೊಡುವುದಾಗಿ ಹೇಳಿ ವಂಚನೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

ಬಿಸಿ ನೀರಲ್ಲಿ ಕರಗುವ‌ ಕ್ಯಾರಿ ಬ್ಯಾಗ್‌

ಬಿಸಿ ನೀರಿನಲ್ಲಿ ಕರಗುವ ಪ್ರಕೃತಿ ಸ್ನೇಹಿ ಕೈ ಚೀಲ (ಹ್ಯಾಂಡ್‌ ಕವರ್‌) ಅನ್ನು ತಯಾರು ಮಾಡುತ್ತಿದ್ದ ಅಶ್ವತ್ಥ್ ಹೆಗ್ಡೆ ಅವರು, ಅದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಿದ್ದರು. ತಾವು ತಯಾರಿಸುವ ಈ ಹ್ಯಾಂಡ್‌ ಕವರ್‌ ಪ್ರಕೃತಿ ಸ್ನೇಹಿಯಾಗಿದ್ದು, ಪ್ಲಾಸ್ಟಿಕ್‌ಗೆ ಪರ್ಯಾಯವಾದ ಉತ್ಪನ್ನವಾಗಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಇದು ನೀರಿನಲ್ಲಿ ಕರಗುವುದರಿಂದ ತ್ಯಾಜ್ಯ ಸಹ ಉಳಿಯುವುದಿಲ್ಲ ಎಂದು ಹೇಳಿಕೊಂಡಿದ್ದರು.

1.26 ಕೋಟಿ ರೂಪಾಯಿಗೆ ಯಂತ್ರ ಖರೀದಿ ಒಪ್ಪಂದ

ಉದ್ಯಮಿ ನಿಲಿಮಾ ಅವರಿಗೂ ಈ ಹ್ಯಾಂಡ್‌ ಕವರ್‌ ಬಗ್ಗೆ ಹೇಳಿದ್ದಾರೆ. ಅಲ್ಲದೆ, ಇದು ಪರಿಸರ ಸ್ನೇಹಿ ಎಂದೂ ತಿಳಿಸಿದ್ದಾರೆ. ಇದರ ಜತೆಗೆ ಈ ಹ್ಯಾಂಡ್‌ ಕವರ್‌ ಅನ್ನು ತಯಾರಿಸಲು ತಾವೇ ಯಂತ್ರ ಮತ್ತು ಕಾರ್ಮಿಕರನ್ನು ಒದಗಿಸಿ ಕೊಡುವುದಾಗಿ ಅಶ್ವತ್ಥ್ ಹೆಗ್ಡೆ ಭರವಸೆ ನೀಡಿದ್ದರು. ಈ ಮಾತುಕತೆಯಂತೆ ಒಟ್ಟು 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರವನ್ನು ಕೊಡುವುದಾಗಿ ನಿಲಿಮಾ ಅವರ ಜತೆಗೆ ಅಶ್ವತ್ಥ್ ಹೆಗ್ಡೆ ಒಪ್ಪಂದವನ್ನೂ ಮಾಡಿದ್ ದರು. ಅದಕ್ಕೆ ಮುಂಗಡವಾಗಿ 74 ಲಕ್ಷ ರೂಪಾಯಿ ಹಣವನ್ನು ನಿಲಿಮಾ ಅವರು ಅಶ್ವತ್ಥ್ ಹೆಗ್ಡೆಗೆ ಕೊಟ್ಟಿದ್ದರು.

ಕೊಟ್ಟಿದ್ದು 5 ಲಕ್ಷ ರೂ. ಮೌಲ್ಯದ ಯಂತ್ರ!

ಇನ್ನು ದುಡ್ಡು ಪಡೆದುಕೊಂಡಿರುವ ಅಶ್ವತ್ಥ್ ಹೆಗ್ಡೆ 5 ಲಕ್ಷ ರೂಪಾಯಿ ಬೆಲೆ ಬಾಳುವ ಯಂತ್ರವನ್ನು ಕೊಟ್ಟು ಮೋಸ ಮಾಡಿದ್ದಾರೆ ಎಂದು ನಿಲಿಮಾ ಆರೋಪ ಮಾಡಿದ್ದಾರೆ. ಇದರ ಜತೆಗೆ ತಯಾರಿಕಾ‌ ಜ್ಞಾನವೇ ಇಲ್ಲದ ಕಾರ್ಮಿಕರನ್ನು ನೀಡಿದ್ದಾರೆ. ಅಲ್ಲದೆ, ಚೀಲ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಸಹ ಕೊಟ್ಟಿಲ್ಲ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಇನ್ನು ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಯಂತ್ರ ಕೊಡಿಸುವುದಾಗಿ ಮತ್ತೆ ಅಶ್ವತ್ಥ್‌ ನಂಬಿಸಿದ್ದರು. ಅದೇ ಯಂತ್ರವನ್ನು ಅವರದೇ ಮತ್ತೊಂದು ಕಂಪನಿ ಹೆಸರಲ್ಲಿ ಅಶ್ವತ್ಥ್ ವಾಪಸ್ ಪಡೆದುಕೊಂಡಿದ್ದು, ನಂತರ ಯಂತ್ರವೂ ಕೊಡದೇ ಹಣವೂ ಕೊಡದೆ ವಂಚನೆ ಮಾಡಿದ್ದಾರೆ. ಒಟ್ಟು 1.30 ಕೋಟಿ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ನಿಲಿಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Karnataka Weather : ಕರಾವಳಿ, ದಕ್ಷಿಣ ಒಳನಾಡಲ್ಲಿ ಮಳೆ ಸಾಧ್ಯತೆ; ಉತ್ತರದಲ್ಲಿ ಒಣ ಹವೆ

ಹೊರ ರಾಜ್ಯದಲ್ಲೂ ಪ್ರಕರಣ ದಾಖಲು

ಸದ್ಯ ಅಶ್ವತ್ಥ್ ಹೆಗ್ಡೆ ವಿರುದ್ಧ 406, 420 ಸೆಕ್ಷನ್ ಅಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಇದಲ್ಲದೆ, ದೇಶದ ಹಲವು ಕಡೆ ಈತನ ವಿರುದ್ಧ ಎಂಟಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಾಗ್ಪುರ, ಛತ್ತಿಸ್‌ಗಡ-ಹೈದರಾಬಾದ್‌ಗಳಲ್ಲಿ ಪ್ರಕರಣಗಳಿವೆ. ದೇಶ – ವಿದೇಶಗಳಲ್ಲಿ ಈ ಕ್ಯಾರಿ ಬ್ಯಾಗ್‌ ಹೆಸರಲ್ಲಿ ಕೋಟಿಗಟ್ಟಲೆ ಫಂಡ್ ಕಲೆಕ್ಷನ್ ಮಾಡಿರುವ ಆರೋಪ ಇವರ ಮೇಲಿದೆ ಎಂದು ತಿಳಿದುಬಂದಿದೆ.

Exit mobile version