ಬೆಂಗಳೂರು: ರೈಲ್ವೆ ಹಾಗೂ ಸಿಆರ್‌ಪಿಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ (Fraud Case) ನಿವೃತ್ತ ಸೇನಾಧಿಕಾರಿಗೆ ವಂಚಿಸಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋಪಾಲ್ ಎಂಬ ನಿವೃತ್ತ ಸೇನಾಧಿಕಾರಿ ಸೇರಿ ಒಂಬತ್ತು ಜನರಿಂದ 28 ಲಕ್ಷಕ್ಕೂ ಹೆಚ್ಚು ಹಣವನ್ನು ಶ್ರೇಯಸ್ ಬೋಗಾರ್ ಎಂಬಾತ ತೆಗೆದುಕೊಂಡು ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನ್ ಟ್ರೈನಿಂಗ್ ಮ್ಯಾನೇಜರ್ ಆಗಿದ್ದ ವೇಳೆ ಶ್ರೇಯಸ್ ಬೋಗಾರ್ ಎಂಬಾತ ಪರಿಚಯವಾಗಿದ್ದ. ಗೋಪಾಲ್ ಸೇನೆಯಿಂದ ನಿವೃತ್ತರಾದ ಬಳಿಕ ಶ್ರೇಯಸ್ ತನಗೆ ಗಣ್ಯರು, ಪ್ರಭಾವಿಗಳು ಗೊತ್ತು. ಅವರಿಂದಲೇ ಕೆಲಸ ಕೊಡಿಸುವೆ. ಆದರೆ, ಪೋಸ್ಟಿಂಗ್‌ಗೆ 9 ಲಕ್ಷ ಖರ್ಚಾಗಲಿದೆ ಎಂದು ಹೇಳಿದ್ದ.
ಇದನ್ನು ನಂಬಿದ ಗೋಪಾಲ್ ಅವರು ಈ ವಿಷಯವನ್ನು ತಮ್ಮ ಸ್ನೇಹಿತರಿಗೂ ಹೇಳಿ ಅವರಿಗೂ ಕೆಲಸ ಸಿಗಲಿ ಎಂಬ ಕಾರಣಕ್ಕೆ ಶ್ರೇಯಸ್ ಬೋಗಾರ್ ಅವರನ್ನು ಪರಿಚಯ ಮಾಡಿಸಿದ್ದಾರೆ. ಕೆಲ ದಿನಗಳ ಬಳಿಕ ಹಣವನ್ನು ನೀಡಲು ಶ್ರೇಯಸ್ ಬೋಗಾರ್‌ಗೆ ಕರೆ ಮಾಡಿದಾಗ ಆತ ಅಶೋಕ ಹೋಟೆಲ್‌ಗೆ ಬರಲು ಹೇಳಿ. ಅಲ್ಲಿ ಮಾತುಕತೆ ನಡೆದು ಗೋಪಾಲ್ ಹಾಗೂ ಅವರ ಸ್ನೇಹಿತರು ಹಣವನ್ನು ನೀಡಿದ್ದಾರೆ.
ಶ್ರೇಯಸ್‌ಗೆ ಕರೆ ಮಾಡಿದಾಗ ನೇರವಾಗಿ ನೇಮಕಾತಿ ಮಾಡಿಸುವುದಾಗಿ ಕಾಲಹರಣ ಮಾಡಿದ್ದಾನೆ. ಹಣ ನೀಡಿ ತಿಂಗಳು ಕಳೆದರೂ ಯಾವುದೇ ಹುದ್ದೆಯ ಬಗ್ಗೆ ಮಾಹಿತಿ ಸಿಗದೆ ಇದ್ದಾಗ, ಆತನ ನಡೆಯ ಬಗ್ಗೆ ಅನುಮಾನಗೊಂಡ ಗೋಪಾಲ್ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಶ್ರೇಯಸ್ ಹಾಗೂ ಆತನ ಸ್ನೇಹಿತರಾದ ಅಜಿತ್, ಅರುಣ್ ಹಾಗೂ ವಿಠಲ್ ಸೇರಿ ಗೋಪಾಲ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕೊಟ್ಟು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಗೋಪಾಲ್ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಂಚಕರ ಬೇಟೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ | Fraud | ಪ್ರಶಸ್ತಿ ಆಮಿಷ, ಅಧಿಕಾರಿಯೆಂದು ನಂಬಿಸಿ ರಾಜಭವನದಲ್ಲೇ ವಂಚನೆ!