Site icon Vistara News

Fraud Case:‌ ವೇದಿಕ್‌ ಆಯುರ್‌ ದೋಖಾ ಪ್ರಕರಣ; ಮಾಹಿತಿ ಪಡೆದು ಸಮಗ್ರ ತನಿಖೆಗೆ ಅದೇಶ ಎಂದ ಪರಮೇಶ್ವರ್

Vedic Ayur Cure

ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಮಂದಿಯನ್ನು ಮೋಸದ ಬಲೆಗೆ (Fraud Case) ಸಿಲುಕಿಸಿ ವಂಚಿಸಿರುವ ವೇದಿಕ್‌ ಆಯುರ್‌ ಹಗರಣದ (Vedic Ayur scam) ಬಗ್ಗೆ ಇನ್ನಷ್ಟು ಮಾಹಿತಿ ಪಡೆದು ತನಿಖೆಗೆ ಆದೇಶ (Order for investigation) ನೀಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister G parameshwar) ಹೇಳಿದರು.

ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಆಯುರ್ವೇದಿಕ್‌ ಉತ್ಪನ್ನಗಳನ್ನು (Ayurvedic products) ಕಡಿಮೆ ದರದಲ್ಲಿ ಮಾರಾಟ ಮಾಡುವ ಫ್ರಾಂಚೈಸಿಗಳನ್ನು ತೆರೆಯಲು ಅಥವಾ ಬ್ಯುಸಿನೆಸ್‌ ಮಾಡಲು ಅವಕಾಶ ಒದಗಿಸುವ ಭರವಸೆಯೊಂದಿಗೆ ಈ ಮೋಸ ನಡೆದಿದ್ದು, ಇದು 800 ಕೋಟಿಗಿಂತಲೂ ಮಿಗಿಲಾದ ಬೃಹತ್‌ ಹಗರಣ ಎನ್ನುವುದು ಬಯಲಾಗುತ್ತಿದೆ. ಚೈನ್‌ಲಿಂಕ್‌ (Chain Link Business) ಮೂಲಕ ರಾಜ್ಯದ ಸಾವಿರಾರು ಮಂದಿ ಈ ಮೋಸದ ಜಾಲಕ್ಕೆ ಸಿಲುಕಿದ್ದಾರೆ.

“ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌”, “ಕಾರ್ಪ್‌ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ” ಹಾಗೂ “ಇ ಸ್ಟೋರ್ ಇಂಡಿಯಾ ಸೂಪರ್ ಮಾರ್ಕೆಟ್ ಸ್ಟೋರ್ ಫ್ರಾಂಚೈಸಿ” ಹೆಸರಿನಲ್ಲಿ ಈ ಮಹಾ ವಂಚನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕಂಪನಿ ಇದಾಗಿದ್ದು, ಆಯರ್ವೇದಿಕ್‌ ಉತ್ಪನ್ನ (Ayurvedic Product), ಉದ್ಯಮದ ಹೆಸರಿನಲ್ಲಿ ಜನರನ್ನು ನಂಬಿಸಿ ವಂಚನೆ ಮಾಡಲಾಗಿದೆ.

ಮಹಮ್ಮದ್‌ ಫೈಜಾನ್‌ ಪ್ರಮುಖ ಆರೋಪಿಯಾಗಿದ್ದು, ಈತ ಆರ್ಯವೇದಿಕ್‌ ಕಂಪನಿಯ ಸಿಎಂಡಿ ಎಂದು ಹೇಳಿಕೊಂಡಿದ್ದಾನೆ. ಉಳಿದಂತೆ ಉಮೇಶ್‌ ಕುಮಾರ್‌ ತ್ಯಾಗಿ, ಉರೋಜ್‌ ಅಲಿ ಖಾನ್‌, ಶಂಶಾದ್‌ ಅಹ್ಮದ್‌, ನಾಜಿಮಾ ಖಾನ್‌, ಅನಿಲ್‌ ಜಾದವ್‌ ಮೇಲೆ ಈಗ ಎಫ್‌ಐಆರ್‌ ದಾಖಲಾಗಿದೆ. ಇವರೆಲ್ಲರೂ ಕಂಪನಿಯ ನಿರ್ದೇಶಕರಾಗಿದ್ದಾರೆ.

ಸಿ-3, ಸಿ-4, ಸೆಕ್ಟರ್‌ 6, ನೋಯ್ಡಾ, ಗೌತಮ ಬುದ್ಧ ನಗರ, ಉತ್ತರ ಪ್ರದೇಶ -201301 ಇಲ್ಲಿನ ವಿಳಾಸದಲ್ಲಿ ನೋಂದಣಿ ಆಗಿರುವ ಈ ಕಂಪನಿಯನ್ನು ನಂಬಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜನರು ಹಣ ಹೂಡಿಕೆ ಮಾಡಿದ್ದು, ಈಗ ವಂಚನೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ವಂಚನೆಯ ಜಾಲದ ಇಂಚಿಂಚು ಮಾಹಿತಿಗಳನ್ನು ವಿಸ್ತಾರ ನ್ಯೂಸ್‌ ಪ್ರಸಾರ ಮಾಡುತ್ತಿದ್ದು, ನ್ಯಾಯ ಸಿಗುವವರೆಗೆ ಸಂತ್ರಸ್ತರ ಪರ ಹೋರಾಟ ನಡೆಸುವುದಾಗಿ ಘೋಷಿಸಿದೆ.

ವೇದಿಕೆ ಆಯುರ್‌ ಹಗರಣದ ನಿರಂತರ ವರದಿ: ವಿಸ್ತಾರ ನ್ಯೂಸ್‌

ಗೃಹ ಸಚಿವ ಜಿ. ಪರಮೇಶ್ವರ್‌ ಹೇಳುವುದೇನು?

ಈ ವಂಚನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್‌ ಅವರು, ನಾನು ಈಗ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ. ವಂಚಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಪೊಲೀಸ್‌ ಇಲಾಖೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನಷ್ಟು ಮಾಹಿತಿ ತೆಗೆದುಕೊಂಡು ಏನು ಆದೇಶ ಮಾಡಬೇಕು, ನಿರ್ದೇಶನ ಮಾಡಬೇಕು ಮಾಡುತ್ತೇನೆ ಎಂದು ವಿಸ್ತಾರ ನ್ಯೂಸ್‌ಗೆ ಪರಮೇಶ್ವರ್‌ ತಿಳಿಸಿದರು.

ʻʻಓಟಿಪಿ ಕೊಟ್ಟು ಆನ್ ಲೈನ್ ನಲ್ಲಿ ಮೋಸ ಮಾಡುವುದು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿದೆ. ಅದರ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಲು, ಕಾನೂನಿನಲ್ಲಿ ಏನಾದರೂ ಬದಲಾವಣೆ ಅಗತ್ಯ ಇದ್ರೆ ಮಾಡಬೇಕು ಎಂದು ಚರ್ಚೆ ಮಾಡ್ತಾ ಇದ್ದೇವೆʼʼ ಎಂದು ಹೇಳಿರುವ ಜಿ. ಪರಮೇಶ್ವರ್‌ ಅವರು, ʻʻಒಟ್ಟಾರೆ ಇಂತಹ ಹಗರಣಗಳನ್ನು ನಿಲ್ಲಿಸೋದು, ಕಷ್ಟ ಇದ್ರೂ ಪ್ರಯತ್ನ ಮಾಡ್ತಾ ಇದ್ದೇವೆʼʼ ಎಂದರು.

ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಲಾಗುತ್ತದೆ. ಈ ಪ್ರಕರಣ ನಮ್ಮ ಕಾನೂನು ಔಕಟ್ಟಿನಲ್ಲಿ ಬರುವುದಿಲ್ಲ ಅಂತಾದರೆ, ಅವರ ಮೇಲೆ ಕೇಸ್ ಮಾಡಿಕೊಂಡು ಮುಂದುವರಿಯುತ್ತೇನೆ. ಅಗತ್ಯ ಬಿದ್ದರೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರು.

ಇದನ್ನೂ ಓದಿ: Fraud Case : 800 ಕೋಟಿ ರೂ. ವಂಚನೆಯ ʼಆಯುರ್ವೇದʼ ಚೈನ್‌ಲಿಂಕ್ ದೋಖಾ‌ ನಡೆದಿದ್ದು ಹೀಗೆ!

Exit mobile version