ಬೆಂಗಳೂರು: ಚುನಾವಣೆ ಸಮಯವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಯೊಬ್ಬ ಚಿನ್ನದ ವ್ಯಾಪಾರಿಗೆ 3 ಕೆ.ಜಿ.ಗೂ ಅಧಿಕ ಚಿನ್ನ ಮತ್ತು 85 ಲಕ್ಷ ರೂಪಾಯಿಯನ್ನು (Fraud Case) ವಂಚಿಸಿದ್ದಾನೆ. ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಶಾಲ್ ಜೈನ್ ಎಂಬ ಚಿನ್ನದ ವ್ಯಾಪಾರಿಗೆ ಅಭಯ್ ಜೈನ್, ಕಿರಣ್, ಸಂಕೇತ್, ನವೀನ್ ಮತ್ತು ಚರಣ್ ಎಂಬುವವರು ವಂಚಿಸಿದ್ದಾರೆ. ಐವರಲ್ಲಿ ಎ1 ಆರೋಪಿಯಾಗಿರುವ ಅಭಯ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಂಚಕ ಅಭಯ್ ಈ ಎಲೆಕ್ಷನ್ ಟೈಮ್ ಅನ್ನು ಗೋಲ್ಡನ್ ಟೈಮ್ ಎಂದುಕೊಂಡು ಚೀಟಿಂಗ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದ. ಆರೋಪಿ ಅಭಯ್ ಜೈನ್ ತನ್ನ ದೂರದ ಸಂಬಂಧಿಯಾಗಿದ್ದ ವಿಶಾಲ್ ಜೈನ್‌ಗೆ ಕರೆ ಮಾಡಿ, ದೊಡ್ಡ ದೊಡ್ಡ ರಾಜಕಾರಣಿಗಳಿಂದ ಗಿಫ್ಟ್ ಕೊಡಲು ಚಿನ್ನದ ಆರ್ಡರ್‌ವೊಂದು ಬಂದಿದೆ. ಎಷ್ಟು ಚಿನ್ನ ಇದ್ದರೂ ನಿಮ್ಮ ಬಳಿಯೇ ಖರೀದಿ ಮಾಡುತ್ತೇನೆ ಎಂದು ನಂಬಿಸಿದ್ದ.
ದೂರದ ಸಂಬಂಧಿ ಎಂದು ನಂಬಿದ್ದ ವಿಶಾಲ್, ಚಿನ್ನದಂಗಡಿ ಮತ್ತು ಶಾಂಗ್ರೀಲಾ ಹೋಟೆಲ್‌ನಲ್ಲಿ ಎರಡು ಹಂತದಲ್ಲಿ 3.5 ಕೆ.ಜಿ ಚಿನ್ನವನ್ನು ನೀಡಿದ್ದಾರೆ. ಚಿನ್ನ ಪಡೆದುಕೊಂಡ ಆರೋಪಿ ಅಭಯ್, ರಾಜಕಾರಣಿಗಳಿಂದ ಇನ್ನೂ ಆರ್ಡರ್ ಇದೆ. ಒಟ್ಟಿಗೆ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ಖಾಲಿ ಕೈನಲ್ಲಿ ಕಳಿಸಿದ್ದ.
ಚಿನ್ನ ಕೈಗೆ ಬಂದಿದ್ದೇ ತಡ ಅಭಯ್ ತನ್ನ ಆಟ ಶುರು ಮಾಡಿದ್ದ. ಮತ್ತೊಮ್ಮೆ ವಿಶಾಲ್‌ಗೆ ಕರೆ ಮಾಡಿ 3.5 ಕೆ.ಜಿ ಚಿನ್ನದ ಆರ್ಡರ್ ಅನ್ನು ರಾಜಕಾರಣಿಗಳು ಕ್ಯಾನ್ಸಲ್ ಮಾಡಿದ್ದಾರೆ. ನಮ್ಮ ಬಳಿ ಒಟ್ಟು 8 ಕೆ.ಜಿ ಚಿನ್ನ ಇದೆ. ಎಲ್ಲವನ್ನೂ ನಿಮಗೆ ಕೊಡುತ್ತೇವೆ, ನಮಗೆ 85 ಲಕ್ಷ ರೂ. ಮಾತ್ರವಷ್ಟೇ ಕೊಡಿ ಸಾಕು ಎಂದಿದ್ದ.
ಚಿನ್ನದ ಬದಲಿಗೆ ಕಬ್ಬಿಣ ಕೊಟ್ಟ
ಅಭಯ್‌ನಿಂದ ಈ ಮಾತು ಕೇಳಿದ ವಿಶಾಲ್ ಹೇಗಿದ್ದರೂ ಡಬಲ್ ಚಿನ್ನ ಸಿಗುತ್ತದೆ ಎಂದು ನಂಬಿದರು. ಆರೋಪಿಗಳಿಂದ ಚಿನ್ನದ ಬ್ಯಾಗ್‌ವೊಂದನ್ನು ಪಡೆದುಕೊಂಡು, 85 ಲಕ್ಷ ರೂ. ಕೊಟ್ಟು ಬಂದಿದ್ದರು. ಆ ಬ್ಯಾಗ್ ತೆಗೆದು ನೋಡಿದಾಗ ಅದರಲ್ಲಿ ಕಬ್ಬಿಣ ಇರುವುದು ನೋಡಿ ಶಾಕ್‌ಗೆ ಒಳಗಾದರು. ತಾವು ಮೋಸ ಹೋಗಿದ್ದು ತಿಳಿಯುತ್ತಿದ್ದಂತೆ ಅಭಯ್‌ಗೆ ಕರೆ ಮಾಡಿ ಕೇಳಿದರೆ, ಆದರೆ ಆತ ಉಲ್ಟಾ ಹೊಡೆದಿದ್ದಾನೆ. ಅದು ರಾಜಕಾರಣಿಗಳು ಕೊಟ್ಟಿರುವ ಚಿನ್ನ, ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ಕಿಡಿಕಾರಿದ್ದಾನೆ.
ನೀನೇನಾದರೂ ದೊಡ್ಡವರನ್ನು ಎದುರು ಹಾಕಿಕೊಂಡರೆ, ನಿಮಗೂ ನಿಮ್ಮ ಕುಟುಂಬಕ್ಕೂ ತೊಂದರೆ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಜತೆಗೆ ಬೇರೆ ಬೇರೆ ವ್ಯಕ್ತಿಗಳ ಮೂಲಕವೂ ಬೆದರಿಕೆ ಹಾಕಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿಶಾಲ್, ವಿವಿ ಪುರಂ ಠಾಣೆಗೆ ಹೋಗಿದ್ದಾರೆ. ಆದರೆ, ಅಲ್ಲಿ ಕಾಂಪ್ರಮೈಸ್ ಲೆವೆಲ್‌ಗೆ ಹೋದಾಗ ಆರೋಪಿಗಳು ಮತ್ತೆ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ: Karnataka Election 2023: ಈ ಜನಸಾಗರ ನೋಡಿದ್ರೆ ಬಿಜೆಪಿಯದ್ದೇ ಗೆಲುವು ಖಚಿತ; ಸಮೀಕ್ಷೆಗಳಿಗೆ ಪಿಎಂ ಮೋದಿ ಟಾಂಗ್
ಬಳಿಕ ಈ ಕೇಸ್ ಸಿಸಿಬಿಗೆ ವರ್ಗಾವಣೆ ಆಗಿದ್ದು, ತನಿಖೆಗಿಳಿದ ತಂಡ ಮುಖ್ಯ ಆರೋಪಿ ಅಭಯ್‌ನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.