ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi), ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಸೇರಿದಂತೆ ಹಲವು ಗಣ್ಯರ ಹೆಸರು ಬಳಸಿಕೊಂಡು ಮಠಗಳಿಗೆ, ಉದ್ಯಮಿಗಳಿಗೆ ವಂಚನೆ ಮಾಡುತ್ತಿದ್ದ ಮಹಾ ವಂಚಕನೊಬ್ಬನನ್ನು (Fraud Case) ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ, ಸಿಎಂ, ಕೇಂದ್ರ ಸಚಿವರ ಕಚೇರಿಯ ಹೆಸರಲ್ಲಿ ಕರೆ ಮಾಡಿ ತಾನೊಬ್ಬ ಗಣ್ಯ ವ್ಯಕ್ತಿ ಎಂಬಂತೆ ವಿಐಪಿ ಟ್ರೀಟ್‌ಮೆಂಟ್ ಪಡೆಯುವುದಲ್ಲದೆ, ಹಲವು ಉದ್ಯಮಿಗಳಿಗೆ ವಂಚನೆಯನ್ನೂ ನಡೆಸಿದ ಸಂತೋಷ್ ರಾವ್ (Fraudster Santhosh Rao) ಎಂಬಾತನನ್ನು ಬಂಧಿಸಲಾಗಿದೆ. ಈಗ ಉತ್ತರಾದಿ ಮಠ, ಉಡುಪಿ ಮಠಗಳಿಗೆ ವಂಚನೆ ಮಾಡಿದ್ದಲ್ಲದೆ, ಉದ್ಯಮಿಗಳಿಗೂ ಮೋಸ ಮಾಡಿದ್ದಾರೆ.
ಎಂಜಿನಿಯರಿಂಗ್ ಪದವೀಧರನಾಗಿರುವ ಸಂತೋಷ್ ರಾವ್ ಅತ್ಯಂತ ಸುಭಗನ ವೇಷ ತೊಟ್ಟು, ಪ್ರಧಾನಿ, ಸಿಎಂ ಕಚೇರಿಗಳ ಹೆಸರಿನಲ್ಲಿ ಸಂಘ ಸಂಸ್ಥೆಗಳಿಗೆ ಫೋನ್ ಮಾಡುತ್ತಿದ್ದ, ಇಡೀ ಆಡಳಿತ ವ್ಯವಸ್ಥೆಯಿಂದ ಅತ್ಯಂತ ಗೌರವಾದರದ ವಿಐಪಿ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಿದ್ದ ಎಂಬುದು ಈಗ ಬಯಲಾಗಿದೆ. ದೊಡ್ಡವರ ಹೆಸರು ಬಳಸಿಕೊಂಡು ಕುಳಿತಲ್ಲೇ ದೊಡ್ಡ ಪ್ರಮಾಣದಲ್ಲಿ ದುಡ್ಡು ಮಾಡಿದ್ದಾನೆ ಸಂತೋಷ್ ರಾವ್.
ಉಡುಪಿ, ಉತ್ತರಾದಿ ಮಠಗಳಲ್ಲಿ ರಾಜ ಸನ್ಮಾನ!
ಇವನು ಕ್ರಿಮಿನಲ್ ಮೈಂಡ್‌ನ ವ್ಯಕ್ತಿಯಾಗಿದ್ದು, ಮಠಗಳು, ದೇವಸ್ಥಾನಗಳಿಗೆ ಮೋಸ ಮಾಡಿ ಭರ್ಜರಿ ಸನ್ಮಾನವನ್ನು ಮಾಡಿಸಿಕೊಂಡಿದ್ದ. ಉತ್ತರಾದಿ ಮಠಕ್ಕೆ ಕರೆ ಮಾಡಿ ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ. ನಿಮ್ಮಲ್ಲಿಗೆ ಇಂದು ಸಂತೋಷ್ ರಾವ್ ಎಂಬವರು ಬರುತ್ತಿದ್ದಾರೆ ಎಂದು ಹೇಳುತ್ತಿದ್ದ. ಕೇಂದ್ರ ಸಚಿವರ ಧ್ವನಿಯನ್ನೇ ಅನುಕರಣೆ ಮಾಡಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ.
ಹೀಗೆ ಉತ್ತರಾದಿ ಮಠಕ್ಕೆ ಕರೆ ಬಂದಿತ್ತು. ಉತ್ತರಾದಿ ಮಠದವರು ತಮ್ಮ ವಾಹನಗಳ ಮೂಲಕವೇ ಆತನನ್ನು ಕರೆಸಿಕೊಂಡಿದ್ದರು. ಸಭಾ ಮಂಟಪ ಉದ್ಘಾಟನೆ ಕಾರ್ಯಕ್ರಮಕ್ಕೆ ಆತನನ್ನು ಭರ್ಜರಿ ಸ್ವಾಗತ ನೀಡಿ ಕರೆ ತರಲಾಗಿತ್ತು. ಜತೆಗೆ ಸ್ವಾಮೀಜಿಗಳಿಂದ ಆತನಿಗೆ ಸನ್ಮಾನವನ್ನು ಕೂಡಾ ಮಾಡಿಸಲಾಗಿತ್ತು.
ಸಚಿವರ ಕಚೇರಿಯಿಂದ ಕರೆ ಮಾಡಿ ಒಂದೋ ನಮ್ಮ ಪಿಎ ಬರುತ್ತಾರೆ ಎಂದೋ, ಇಲ್ಲವೇ ಗಣ್ಯ ವ್ಯಕ್ತಿ ಬರುತ್ತಾರೆ ಎಂಬ ಸಂದೇಶ ನೀಡಲಾಗುತ್ತಿತ್ತು. ಸಂತೋಷ್ ಕೂಡಾ ಪರಮ ದೈವಭಕ್ತನಂತೆ ಅಲ್ಲಿಗೆ ಮಡಿಯುಟ್ಟಂತೆ ಬರುತ್ತಿದ್ದ!
ಉಡುಪಿ ಮಠ ಭೇಟಿಗೆ ಜಿಲ್ಲಾಧಿಕಾರಿಯೇ ಉಸ್ತುವಾರಿ
ಉತ್ತರಾದಿ ಮಠಕ್ಕೆ ತಾನೇ ನೇರವಾಗಿ ಕರೆ ಮಾಡಿದ್ದರೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲು ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನೇ ಬಳಸಿಕೊಂಡಿದ್ದ! ಪ್ರಧಾನಿ ಕಚೇರಿಯಿಂದ ಮಾತನಾಡುವಂತೆ ಉಡುಪಿ ಜಿಲ್ಲಾಧಿಕಾರಿಗೇ ನೇರವಾಗಿ ಆತ ಕರೆ ಮಾಡಿದ್ದ. ʻʻʻನಮ್ಮ ಪಿಎ ಬರ್ತಾರೆ ಅವರಿಗೆ ಬೇಕಾದ ವ್ಯವಸ್ಥೆ ಮಾಡಿʼʼ ಎಂದು ಸೂಚನೆ ನೀಡಲಾಗಿತ್ತು.
ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಬಂದಿದೆ ಅಂದ ಕೂಡಲೇ ಪ್ರೋಟೋಕಾಲ್ ನಂತೆ ಆರೋಪಿಗೆ ಕಾರು, ಎಸ್ಕಾರ್ಟ್ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆ. ಉಡುಪಿ ಮಠಕ್ಕೆ ಭೇಟಿ ನೀಡುವುದು, ಸ್ವಾಮೀಜಿಗಳ ಭೇಟಿಯ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಿತ್ತು. ಜತೆಗೆ ಅವನು ಉಳಿದುಕೊಳ್ಳುವುದು, ಓಡಾಟಕ್ಕೂ ವ್ಯವಸ್ಥೆ ಮಾಡಲಾಗಿತ್ತು!
ಇನ್ನೂ ಅದೆಷ್ಟು ಮಠ ಮಂದಿರಗಳಿಗೆ ಆತ ಹೋಗಿದ್ದಾನೆ ಎನ್ನುವುದು ಇನ್ನೂ ಲೆಕ್ಕ ಸಿಕ್ಕಿಲ್ಲ.
ಇದನ್ನೂ ಓದಿ: Fraud Case : ಭಾವಿ ಯೋಧರಿಗೆ ನೇಮಕ ಹೆಸರಲ್ಲಿ ವಂಚನೆಯ ಬಾವಿ ತೋಡಿದ ಆಸಾಮಿ!
ಈ ಸಂಬಂಧ ಬಳಸಿಕೊಂಡು ಮೋಸ!
ಸಂತೋಷ್ ರಾವ್ ತಾನು ಮಠಗಳಿಗೆ ಭೇಟಿ ನೀಡಿ ವಿಐಪಿ ಎಂಬಂತೆ ಪೋಸ್ ಕೊಟ್ಟು ಚಿತ್ರಗಳನ್ನು, ವಿಡಿಯೊಗಳನ್ನು ತೆಗೆಸಿಕೊಳ್ಳುವಲ್ಲಿಗೆ ನಿಲ್ಲಿಸುತ್ತಿರಲಿಲ್ಲ. ತನಗೆ ಈ ರೀತಿಯ ದೊಡ್ಡ ಮಟ್ಟದ ಕಾಂಟ್ಯಾಕ್ಟ್‌ಗಳು ಇವೆ ಎಂದು ತೋರಿಸಿಕೊಂಡು ಉದ್ಯಮಿಗಳನ್ನು ಅಪ್ರೋಚ್ ಮಾಡುತ್ತಿದ್ದ! ಪ್ರಧಾನಿ, ಸಿಎಂ, ಕೇಂದ್ರ ಮಂತ್ರಿಗಳ ಕಚೇರಿ ಕಥೆ ಹೇಳಿ ಗಣ್ಯರು ಮತ್ತು ಉದ್ಯಮಿಗಳನ್ನು ಸಂಪರ್ಕ ಮಾಡುತ್ತಿದ್ದ ಮತ್ತು ಈ ಮೂಲಕ ಕೋಟಿ ಕೋಟಿ ರೂ. ಲೂಟಿ ಮಾಡುತ್ತಿದ್ದ ಎನ್ನಲಾಗಿದೆ.
ತಾನು ಸಿಎಂ, ಪಿಎಂ, ಮಿನಿಸ್ಟರ್‌ಗಳಿಗೆ ಆಪ್ತ ಎಂದು ಹೆಸರು ಹೇಳಿ ಉದ್ಯಮಿಗಳಿಗೆ ದೋಖಾ ಮಾಡಿದ್ದಾನೆ ಸಂತೋಷ್ ರಾವ್. ಈ ಸಂಬಂಧದ ಹೆಸರು, ಫೋಟೋಗಳನ್ನು ಬಳಸಿಕೊಂಡು ಹೂಡಿಕೆದಾರರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಸಂತೋಷ್, ಉದ್ಯಮಿಗಳಿಗೆ ಪಿಎಂ ಸಿಎಂ ಕಚೇರಿಯಿಂದ ಉದ್ಯಮಿಗಳಿಗೆ ಫೇಕ್ ಕಾಲ್ ಮಾಡುತ್ತಿದ್ದ!
ಈತನೇ ಕಾಲ್ ಮಾಡಿ ಪಿಎಂ ಕಚೇರಿಯಿಂದ ಮಾತನಾಡುತ್ತಿದ್ದೇವೆ ಎಂದು ನಂಬಿಸುತ್ತಿದ್ದ. ಇದನ್ನು ನಂಬಿದ ಹಲವಾರು ಉದ್ಯಮಿಗಳು ಸಂತೋಷ್ ಹೇಳಿದಂತೆ ಕೇಳುತ್ತಿದ್ದರು. ಆತನ ಜೊತೆಗೂಡಿ ಕೋಟಿ ಕೋಟಿ ಹಣ ಹೂಡಿಕೆ ಮಾಡಿದವರೂ ಇದ್ದಾರೆ. ಅಂತಿಮವಾಗಿ ಕಂಪನಿಯ ಹಣವನ್ನು ತನ್ನ ಅಕೌಂಟ್ ಗೆ ವರ್ಗಾಯಿಸಿಕೊಳ್ಳುತ್ತಿದ್ದ ಸಂತೋಷ್.