ಬೆಂಗಳೂರು: ಇತ್ತೀಚೆಗೆ ಸ್ವಾಮೀಜಿಗಳು ಹೆಣ್ಣಿನ ಪಾಶಕ್ಕೆ ಸಿಲುಕುತ್ತಿರುವ ಪ್ರಕರಣಗಳು ಆಗಾಗ ಕೇಳಿ ಬರುತ್ತಿವೆ. ಈಗ ಅದರ ಸಾಲಿಗೆ ಪ್ರಭಾವಿ ಮಠವಾದ ಕಬ್ಬಾಳ ಮಹಾಸಂಸ್ಥಾನದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಿಲುಕಿದ್ದಾರೆ. ತಾವು ಯುವತಿಯೊಬ್ಬಳನ್ನು ನಂಬಿ 35 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಗಿ (Fraud Case) ಶ್ರೀಗಳು ದೂರು ನೀಡಿದ್ದಾರೆ. ಒಂದು ತಿಂಗಳು ರಹಸ್ಯವಾಗಿಯೇ ಇದ್ದ ಈ ಮಾಹಿತಿ ಈಗ ಬಹಿರಂಗವಾಗಿದೆ.
ವಿಡಿಯೊ ಕಾಲಿಂಗ್‌ನಲ್ಲೇ ನಂಬಿ ಮೋಸ ಹೋಗಿದ್ದಾಗಿ ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದು, ಮೂರ್ನಾಲ್ಕು ವರ್ಷದ ರಹಸ್ಯ ಈಗ ಬಯಲಾಗಿದೆ. ವಿಚಿತ್ರವೆಂದರೆ ಆಕೆಯ ಪರಿಚಯವೇ ತಮಗಿಲ್ಲ, ಕೇವಲ ವಿಡಿಯೊ ಕಾಲ್ ಸಂಪರ್ಕ ಮಾತ್ರ ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ಆದರೆ, ಆಕೆಯ ಮಾತನ್ನು ನಂಬಿ ಅನಾಮಿಕ ಯುವತಿಯ ಅಕೌಂಟ್‌ಗೆ ಲಕ್ಷ ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಪೊಲೀಸರಿಂದ ರಹಸ್ಯ ತನಿಖೆ
ಕಬ್ಬಾಳ ಮಹಾಸಂಸ್ಥಾನದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿಯವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಪೊಲೀಸರು ರಹಸ್ಯವಾಗಿಯೇ ತನಿಖೆ ನಡೆಸುತ್ತಿದ್ದರು. ಈ ವೇಳೆ ಸ್ವಾಮೀಜಿ ಆಡಿಯೊ, ವಿಡಿಯೊ, ಬ್ಯಾಂಕ್ ಖಾತೆ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Bengaluru Suburban: ಮೈಸೂರು, ಗೌರೀಬಿದನೂರು, ಕೋಲಾರಕ್ಕೆ ಉಪನಗರ ರೈಲು ಯೋಜನೆ ವಿಸ್ತರಣೆ!
ಸ್ವಾಮೀಜಿಯ ದೂರಿನಲ್ಲೇನಿದೆ?
ಆಧ್ಯಾತ್ಮಿಕವಾಗಿ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದ ವರ್ಷ ಎಂಬ ಹೆಸರಿನ ಯುವತಿಯು ನನಗೆ ಫೇಸ್‌ಬುಕ್ ಮೂಲಕ 2020ರಲ್ಲಿ ಪರಿಚಯವಾಗಿದ್ದಳು. ಬಳಿಕ ಆಕೆ ತನ್ನ ಮೊಬೈಲ್ ನಂಬರ್ ನೀಡಿ ಸ್ವಾಮೀಜಿಯ ನಂಬರ್ ಅನ್ನು ಸಹ ಪಡೆದುಕೊಂಡಿದ್ದಳು. ಅಲ್ಲಿಂದ ತಿಂಗಳುಗಳ ಕಾಲ ವಿಡಿಯೊ ಕಾಲಿಂಗ್ ಮೂಲಕ ಸಂಪರ್ಕದಲ್ಲಿದ್ದಳು. ಆದರೆ ಯಾವತ್ತೂ ಆಕೆ ತನ್ನ ಮುಖವನ್ನು ಸ್ವಾಮೀಜಿಗೆ ತೋರಿಸಿರಲಿಲ್ಲ. ಅಲ್ಲದೆ, ತನಗೆ ತಂದೆ, ತಾಯಿ ಯಾರೂ ಇಲ್ಲ ಎಂದು ಸ್ವಾಮೀಜಿಯನ್ನು ನಂಬಿಸಿದ್ದಳು.
ನಾನು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುತ್ತಿದ್ದೇನೆ. ನನಗೆ ಹಣದ ಸಹಾಯ ಮಾಡಿ ಎಂದು ಒಮ್ಮೆ ಯುವತಿ ಕೇಳಿಕೊಂಡಿದ್ದಳು. ಮೊದಲು ತನ್ನ ಸ್ನೇಹಿತೆ ಮಂಜುಳಾ ಎಂಬಾಕೆಯ ಅಕೌಂಟಿಗೆ ದುಡ್ಡನ್ನು ಹಾಕಿಸಿಕೊಂಡಿದ್ದಾಳೆ. ಆಕೆಯ ಮಾತು ನಂಬಿ 2 ಲಕ್ಷ ರೂಪಾಯಿಯನ್ನು ಸ್ವಾಮೀಜಿ ವರ್ಗಾಯಿಸಿದ್ದಾರೆ. ನಂತರ ಆಕೆ ಕೇಳಿದಾಗಲೆಲ್ಲ ಲಕ್ಷ ಲಕ್ಷ ಹಣವನ್ನು ಸ್ವಾಮೀಜಿ ನೀಡಿದ್ದರು. ಅಲ್ಲದೆ, ಈ ಮಧ್ಯೆ ತನ್ನ ಹೆಸರಲ್ಲಿ ಎಕರೆಗಟ್ಟಲೆ ಜಮೀನಿದೆ ಎಂದು ಸಹ ಯುವತಿ ನಂಬಿಸಿದ್ದಳು. ಅದನ್ನು ಮಠದ ಹೆಸರಿಗೆ ಬರೆಯುವುದಾಗಿಯೂ ಹೇಳಿದ್ದಳು ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿಯ ಎಲ್ಲ ಮಾತಿಗೆ ಮರುಳಾಗಿ ಸುಮಾರು 35 ಲಕ್ಷಕ್ಕೂ ಹೆಚ್ಚು ಹಣವನ್ನು ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹಾಕಿದ್ದಾರೆ. ಇದಾದ ಮೇಲೆ ಒಂದು ದಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೇನೆ. ಜಾಗದ ಡಾಕ್ಯುಮೆಂಟ್ ತರಲು ಹೋದ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಆಸ್ಪತ್ರೆಗೆ ಕಟ್ಟಲು ಹಣ ಬೇಕು ಎಂದು ವರ್ಷ ಮತ್ತೆ ದುಡ್ಡು ಕೇಳಿದ್ದಾಳೆ. ಈ ವೇಳೆ ಸ್ವಾಮೀಜಿಗೆ ಅನುಮಾನ ಬಂದು ತಾರಾ ಎಂಬುವವರನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ವರ್ಷ ಎಂಬ ಯುವತಿ ಆಸ್ಪತ್ರೆಗೆ ದಾಖಲಾಗಿರುವ ಯಾವುದೇ ಮಾಹಿತಿ ಸಿಕ್ಕಿಲ್ಲ. ಅನುಮಾನ ಮತ್ತಷ್ಟು ಹೆಚ್ಚಾಗಿ ಹಣ ಹಾಕಿಸಿಕೊಂಡಿದ್ದ ಆಕೆಯ ಸ್ನೇಹಿತೆ ಮಂಜುಳಾಗೆ ಸ್ವಾಮೀಜಿ ಕರೆ ಮಾಡಿದ್ದಾರೆ. ತಮ್ಮ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಮಂಜುಳಾ, ತಾನು 55 ಲಕ್ಷ ರೂಪಾಯಿ ಸಾಲ ಮಾಡಿ ವರ್ಷಳನ್ನು ಡಿಶ್ಚಾರ್ಜ್ ಮಾಡಿಸಿದ್ದೇನೆ. ಆ ಹಣವನ್ನು ನೀವು ಕೊಡಬೇಕೆಂದು ಹೇಳಿ ಗಲಾಟೆ ಮಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಠಕ್ಕೆ ತೆರಳಿದ್ದ ಮಂಜುಳಾ
ಏಪ್ರಿಲ್ 23ಕ್ಕೆ ಮಠಕ್ಕೆ 6 ಜನರ ಜತೆ ತೆರಳಿದ್ದ ಮಂಜುಳಾ ಗಲಾಟೆ ಮಾಡಿದ್ದಾಳೆ. ಸಂಘಟನೆಯ ಅವನಿಕಾ, ಕಾವೇರಿ, ಪ್ರದೀಪ್ ನಾಯಕ್, ರಶ್ಮಿ, ಮೀನಾಕ್ಷಿ, ಪ್ರೇಮಾ ಜತೆ ತೆರಳಿದ್ದಳು. ಕೊನೆಗೆ ಅವರ ದುಡ್ಡನ್ನು ವಾಪಸ್ ಕೊಡಿ ಎಂದು ಕೂಗಾಡಿದ್ದರು. ಮಂಜುಳಾ ದಾಖಲೆ ಕೊಟ್ಟರೆ ಮಾತ್ರ ಕೊಡಿ ಎಂದು ಅವನಿಕಾ ಮತ್ತು ತಂಡದವರು ಹೇಳಿದ್ದರು. ಈ ವೇಳೆ ತನ್ನ ತಪ್ಪನ್ನು ಸ್ವಾಮೀಜಿ ಒಪ್ಪಿಕೊಂಡಿದ್ದರು. ನಾನು ದುಡುಕಿ ತಪ್ಪು ಮಾಡಿದ್ದೇನೆ ಎಂದು ನೀಡಿದ್ದ ಹೇಳಿಕೆಯನ್ನು ಅವರು ರೆಕಾರ್ಡ್ ಮಾಡಿಕೊಂಡು ತೆರಳಿದ್ದರು.
ಇದನ್ನೂ ಓದಿ: ರಾಜ್ಯಪಾಲರು ರಾಜಭವನದಲ್ಲಿ ಎಲ್ಲ ಆಟಗಳನ್ನೂ ಆಡಿದ್ದಾರೆ: ಹಳೆಯ ಕಥೆಗಳನ್ನು ಬಿಚ್ಚಿಟ್ಟ ಎಸ್.ಎಂ. ಕೃಷ್ಣ
ವಾರದ ಬಳಿಕ ಸ್ವಾಮೀಜಿ ದೂರು
ಈ ಘಟನೆ ನಡೆದು ಒಂದು ವಾರದ ಬಳಿಕ (ಏಪ್ರಿಲ್ 30) ಠಾಣೆಗೆ ಖುದ್ದು ಬಂದಿದ್ದ ಸ್ವಾಮೀಜಿ ದೂರು ನೀಡಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಆಕೆ ಇದುವರೆಗೂ ಮಠಕ್ಕೆ ಬಂದಿಲ್ಲ. ತಾವೂ ಸಹ ಆಕೆಯ ಮುಖವನ್ನು ನೋಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.