Site icon Vistara News

Fraud Case : ಮಾಜಿ ಪ್ರಿಯಕರನ ವಶೀಕರಣ ಮಾಡಲು ಹೋಗಿ 8.36 ಲಕ್ಷ ಕಳೆದುಕೊಂಡ ಮುಸ್ಲಿಂ ಯುವತಿ!

Fake Astrologer

ಬೆಂಗಳೂರು: ಇತ್ತೀಚಿನವರೆಗೂ ಅವರಿಬ್ಬರೂ ಪ್ರೇಮಿಗಳಾಗಿದ್ದರು. ಅಲ್ಲಿ ಇಲ್ಲಿ ಸುತ್ತಾಡುತ್ತಾ ಖುಷಿಯಾಗಿದ್ದರು. ಅದ್ಯಾರ ಕಣ್ಣು ಬಿತ್ತೋ ಅವನು ಅವಳಿಂದ ದೂರವಾದ. ಅವನನ್ನೇ ನಂಬಿಕೊಂಡಿದ್ದ ಆಕೆ ಈಗ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಳು. ಅದರ ಜತೆಗೆ ಅವನು ದೂರವಾದ ವಿಷಯದಲ್ಲಿ ಮನೆಯಲ್ಲೂ ಜಗಳಗಳಾದವು. ಈ ಹೊತ್ತಿನಲ್ಲಿ ಕಳೆದುಹೋದ ಪ್ರೇಮಿಯನ್ನು ಮರಳಿ ಪಡೆಯಲು ಆಕೆ ಮುಂದಾಗಿದ್ದು ವಶೀಕರಣಕ್ಕೆ (Attracting Technique). ಆ ತಂತ್ರ ಬಳಸಲು ಹೋಗಿ ಈಗ ಆಕೆ 8.36 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಅವನೊಬ್ಬ ಕಪಟ ಜ್ಯೋತಿಷಿ (Fake Astrologer) ಆಕೆಯನ್ನು ಚೆನ್ನಾಗಿ ಮುಂಡಾ ಮೋಚಿದ್ದಾನೆ (Fraud Case)!

ಜಾಲಹಳ್ಳಿ ನಿವಾಸಿಯಾಗಿರುವ ಮುಸ್ಲಿಂ ಯುವತಿಯೇ ಹೀಗೆ ವಂಚನೆಗೆ ಒಳಗಾದವಳು. ಅವಳನ್ನು ಮೋಸ ಮಾಡಿ, ಮರುಳುಗೊಳಿಸಿ ಹಣ ಪಡೆದು ಮೋಸ ಮಾಡಿದವನು ಕಪಟ ಜ್ಯೋತಿಷಿ ಅಹಮದ್‌ ದೆಲ್ವಿ ಎಂಡ್‌ ಟೀಮ್‌!

ಕಳೆದುಹೋದ ಪ್ರಿಯಕರನನ್ನು ಮರಳಿ ಪಡೆಯಲು ಮಾತುಕತೆಯ ಹಲವು ದಾರಿಗಳನ್ನು ಆ ಯುವತಿ ಬಳಸಿದ್ದಳು. ಆದರೆ ಯುವಕ ಜಗ್ಗಿರಲಿಲ್ಲ. ಹೀಗಾಗಿ ವಶೀಕರಣದ ಮೂಲಕ ಪ್ರಯತ್ನಿಸೋಣ ಎಂದು ಯುವತಿ ಈ ರೀತಿ ಮಾಡುತ್ತಾರೆ ಎಂದು ಹೇಳಲಾಗುವ ಜ್ಯೋತಿಷಿಗಳನ್ನು ಆನ್‌ಲೈನ್‌ನಲ್ಲಿ ಹುಡುಕಿದ್ದಳು.

ಹೀಗೆ ಹುಡುಕುವಾಗ ಆನ್‌ಲೈನ್‌ನಲ್ಲಿ ಸಿಕ್ಕಿದ ನಂಬರೇ ಅಹಮದ್‌ ದೆಲ್ವಿಯದ್ದು. ಆತ ತಾನೊಬ್ಬ ಮಹಾನ್‌ ಜ್ಯೋತಿಷಿ, ಮಾಟ ಮಂತ್ರ ತೆಗೆಯುತ್ತೇನೆ ಎಂದೆಲ್ಲ ಬರೆದುಕೊಂಡಿದ್ದ. ಜತೆಗೆ ವಶೀಕರಣ ತನ್ನ ವಿಶೇಷತೆ ಎಂದಿದ್ದ. ಹೇಗೂ ಮುಸ್ಲಿಂ ಆಗಿರುವುದರಿಂದ ಸಂಪರ್ಕಕ್ಕೆ ಸುಲಭ ಎಂದು ಈ ಯುವತಿ ಅವನನ್ನೇ ಆಯ್ಕೆ ಮಾಡಿಕೊಂಡಿದ್ದಳು.

ಯುವತಿ ಆತನನ್ನು ಭೇಟಿಯಾದಾಗ ʻನಿಮ್ಮ ಕುಟುಂಬದವರ ಮೇಲೆ ಯಾರೋ ಮಾಟ ಮಾಡಿದ್ದಾರೆ. ಹೀಗಾಗಿ ಈ ರೀತಿ ಆಗಿದೆ. ಒಂದು ಪೂಜೆ ಮಾಡಿಸಿದರೆ ಎಲ್ಲವೂ ಸರಿ ಹೋಗುತ್ತದೆʼʼ ಎಂದು ಧೈರ್ಯ ತುಂಬಿದ್ದ. ಮೊದಲ ಭೇಟಿಯಲ್ಲಿ ಅವನು ತೆಗೆದುಕೊಂಡದ್ದು ಕೇವಲ 501 ರೂ. ಮಾತ್ರ!

ಕಷ್ಟ ಕಾಲದಲ್ಲಿ ಒಂದು ಸಾಂತ್ವನ ಸಿಕ್ಕಿತು ಎಂದು ಸ್ವಲ್ಪ ನೆಮ್ಮದಿಯಾದಳು ಯುವತಿ. ಆತನ ಸಲಹೆಯ ಮೇರೆಗೆ ತನ್ನ ಪ್ರಿಯಕರ ಮತ್ತು ಕುಟುಂಬದ ಸದಸ್ಯರ ಫೋಟೊಗಳನ್ನು ಕಳುಹಿಸಿದ್ದಳು. ಇತ್ತ ಅಹಮದ್‌ ತನ್ನ ವಶೀಕರಣ, ಮಾಟ ಮಂತ್ರ ನಿವಾರಣೆಯ ಪೂಜೆಗಳನ್ನು ಆರಂಭಿಸಿದ್ದಾಗಿ ಹೇಳಿದ್ದ. ಆರಂಭಿಕ ಹಂತದಲ್ಲಿ ಸ್ವಲ್ಪ ಹಣವನ್ನು ಆತ ಕೇಳಿದ್ದ. ಯುವತಿ ಅದನ್ನು ಆನ್‌ಲೈನ್‌ ಮೂಲಕ ಕಳುಹಿಸಿದ್ದಳು. ಇದಾದ ಬಳಿಕ ಯುವತಿಗೆ ಇನ್ನಷ್ಟು ಹಣದ ಬೇಡಿಕೆ ಶುರುವಾಯಿತು.

ಬಿಇಎಲ್‌ ಸರ್ಕಲ್‌ಗೆ ಅಬ್ದುಲ್‌ ರಹಿಮಾನ್‌ ಎಂಬಾತನನ್ನು ಕಳುಹಿಸುತ್ತೇನೆ. ಅವನ ಕೈಗೆ 2.34 ಲಕ್ಷ ಕೊಡು ಎಂದಿದ್ದ. ಮತ್ತೆ ಹೆಬ್ಬಾಳದಲ್ಲಿ 1.45 ಲಕ್ಷ ರೂ. ಕೊಡಲಾಯಿತು. ಮುಂದೆ ಮತ್ತೆ ಮತ್ತೆ ಬೇಡಿಕೆ ಹೆಚ್ಚಾಯಿತು. ಈಗ ಮುಸ್ಲಿಂ ಯುವತಿಗೆ ಅನುಮಾನ ಹೆಚ್ಚಾಯಿತು.

ಆರಂಭದಲ್ಲಿ ಮನವಿ, ಬೇಡಿಕೆಯ ರೂಪದಲ್ಲಿ ಹಣ ಕೇಳುತ್ತಿದ್ದರೆ ಮುಂದೆ ಬೆದರಿಕೆ ರೂಪವನ್ನು ಪಡೆದುಕೊಂಡಿತು. ಹಣ ಕೊಡದಿದ್ದರೆ ನೀನು ಮಾಟ ಮಂತ್ರ ಮಾಡಿಸುತ್ತಿದ್ದಿ ಎಂದು ಹುಡುಗನ ಮನೆಯವರಿಗೆ ಹೇಳುವುದಾಗಿ ಬೆದರಿಕೆ ಒಡ್ಡಲಾಯಿತು. ನೀನು ಕೊಟ್ಟಿರುವ ಫೋಟೊಗಳನ್ನು, ಆತ್ಮೀಯ ಕ್ಷಣಗಳನ್ನು ಬಯಲು ಮಾಡುತ್ತೇನೆ ಎನ್ನಲಾಯಿತು. ಅರೆಬರೆ ಪೂಜೆ ಮಾಡಿದರೆ ನಿನ್ನ ಪ್ರಿಯಕರ ರಕ್ತ ಕಾರಿ ಸಾಯ್ತಾನೆ, ಇಲ್ಲವೇ ನಾವೇ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಯಿತು. ಹೀಗೆ ಬೆದರಿಕೆ ತಂತ್ರದಿಂದಲೇ ಅಹಮದ್‌ ದಲ್ವಿ ಒಟ್ಟು 8.36 ಲಕ್ಷ ರೂ. ಪೀಕಿಸಿ ಆಗಿತ್ತು.

ಈ ನಡುವೆ, ತಮ್ಮ ಮಗಳು ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಎಂಬುದು ಆಕೆಯ ಪೋಷಕರಿಗೆ ಅರಿವಾಯಿತು. ಅವರು ಮಗಳ ಬೆಂಬಲಕ್ಕೆ ನಿಂತರು. ಕೊನೆಗೆ ಪೊಲೀಸರಿಗೆ ದೂರು ನೀಡಲಾಯಿತು. ಅವರೀಗ ಅಹಮದ್‌, ಲಿಯಾಖತ್‌ ಉಲ್ಲಾ ಖಾನ್‌, ಅಬ್ದುಲ್‌ ರಹಿಮಾನ್‌ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾರೆ.

Exit mobile version