ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ಜಾರಿ ಮಾಡಿದ, ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಉಚಿತ ಬಸ್ ಪ್ರಯಾಣ ಯೋಜನೆಗೆ ಎರಡನೇ ದಿನ ಉತ್ತಮ ಸ್ಪಂದನ ವ್ಯಕ್ತವಾಯಿತು.
ನಿನ್ನೆ ರಜಾದಿನವಾಗಿದ್ದ ಕಾರಣ ಬಸ್ಸುಗಳಲ್ಲಿ ಹೆಚ್ಚಿನ ಜನರ ಓಡಾಟ ಕಂಡುಬಂದಿರಲಿಲ್ಲ. ಆದರೆ ಇಂದು ಮುಂಜಾನೆ ಕೆಲಸಕ್ಕೆ ತೆರಳುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸು ನಿಲ್ದಾಣಗಳತ್ತ ಆಗಮಿಸಿದ್ದಾರೆ. ಮೆಟ್ರೋ ಹಾಗೂ ಆಟೋ ಮೂಲಕ ಪ್ರಯಾಣಿಸುವ ಹಲವು ಮಹಿಳೆಯರೂ ಉಚಿತ ಬಸ್ ಪ್ರಯಾಣದ ಲಾಭ ಪಡೆಯಲು ಮುಂದಾದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಇದಕ್ಕೆ ಉತ್ಸಾಹದ ಸ್ಪಂದನ ವ್ಯಕ್ತವಾಯಿತು.
ʼʼನಾವು ದುಡಿಯುವ ಹಣದಲ್ಲಿ ಎರಡು ಸಾವಿರ ರೂಪಾಯಿ ಬಸ್ ಟಿಕೆಟ್‌ಗೇ ಹೋಗುತ್ತಿತ್ತು. ಈಗ ಅದನ್ನು ಇತರ ಖರ್ಚುಗಳಿಗೆ ಸರಿದೂಗಿಸಬಹುದು, ಖುಷಿಯಾಗ್ತಿದೆʼʼ ಎಂದು ಉದ್ಯೋಗಿ ಮಹಿಳೆಯೊಬ್ಬರು ಸಂತಸಪಟ್ಟರು.
ಹಾಸನ: ಹಾಸನ ಜಿಲ್ಲೆಯಲ್ಲಿ, ಊರಿಗೆ ಬಂದು ಬೆಂಗಳೂರಿಗೆ ವಾಪಸ್ಸು ಹೊರಟಿದ್ದ ಮಹಿಳೆಯರು ಎರಡನೇ ದಿನ ಶಕ್ತಿ ಯೋಜನೆಯ ಲಾಭ ಪಡೆದರು. ಬರುವಾಗ ಬಸ್ಸಿನಲ್ಲಿ ದುಡ್ಡು ಕೊಟ್ಟು ಬಂದಿದ್ದ ಎಲ್ಲಾ ಮಹಿಳೆಯರು ಎರಡನೇ ದಿನ ಉಚಿತ ಪ್ರಯಾಣದ ಸಂತೋಷ ಅನುಭವಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದರು.
ಬೆಳಗಾವಿ: ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಬಸ್ ನಿಲ್ದಾಣದತ್ತ ಮಹಿಳೆಯರು ಆಗಮಿಸಿದ್ದು, ನಗರ ಸಾರಿಗೆ ಹಾಗೂ ರಾಜ್ಯ ಸಾರಿಗೆ ಬಸ್ಸುಗಳು ಎಂದಿನಂತೆ ಬಸ್ ಸಂಚಾರ ಪ್ರಾರಂಭ ಮಾಡಿವೆ. ಬಸ್ ಫುಲ್ ತುಂಬಿಕೊಂಡಿರುವ ಮಹಿಳೆಯರು ಹಾಗೂ ಯುವತಿಯರು ನಗರ ಸಾರಿಗೆ ಬಸ್ಸುಗಳನ್ನು ಬಳಸಿ ತಮ್ಮ ಕೆಲಸಕ್ಕೆ ತೆರಳಿದರು. ಕಾಲೇಜು ವ್ಯಾಸಂಗ ಮಾಡುವವರಿಗೂ ಬಸ್ ಸಂಚಾರ ಪ್ರೀ ಆಗಿದ್ದು ಸಂತೋಷ. ವರ್ಷಕ್ಕೆ ನಾವು 1050 ರೂಪಾಯಿ ಪಾಸ್‌ಗೆ ಪಾವತಿಸಬೇಕಿತ್ತು. ಬಸ್ ಪಾಸ್‌ಗೆ ಹಣ ಇಲ್ಲ ಅಂತ ವಿದ್ಯಾರ್ಥಿಗಳು ಕಾಲೇಜು ಬಿಡುವ ಸ್ಥಿತಿ ಇತ್ತು. ಈಗ ಬಸ್ ಫ್ರೀ ಮಾಡಿರೋದು ಅನುಕೂಲ ಆಗಿದೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡರು.
ವಿಜಯಪುರ: ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದಕ್ಕೆ ಮಹಿಳೆಯರು, ವಿದ್ಯಾರ್ಥಿನಿಯರು ಖುಷಿ ವ್ಯಕ್ತಪಡಿಸಿದರು. ಹೆಚ್ಚಿನವರು ಆಧಾರ ಕಾರ್ಡ್ ಸೇರಿದಂತೆ ಗುರುತಿನ ಚೀಟಿ ಸಮೇತ ಆಗಮಿಸಿದ್ದರು.
ಯಾದಗಿರಿ: ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ನೀಡಿರುವುದರಿಂದ ಆಟೋದಲ್ಲಿ ಮಹಿಳೆಯರ ಪ್ರಯಾಣ ಇಳಿಮುಖವಾಗಿದೆ. ಇದರಿಂದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಮಕ್ಕಳನ್ನು ಶಾಲೆ ಓದಿಸಲು ಕಷ್ಟವಾಗುತ್ತಿದೆ. ಲೋನ್ ತೆಗೆದುಕೊಂಡ ನಾವು ಲೋನ್ ಹೇಗೆ ಕಟ್ಟಬೇಕು ಎಂದು ಆಟೋ ಚಾಲಕರು ನೋವು ತೋಡಿಕೊಂಡಿದ್ದಾರೆ.
ರಾಮನಗರ: ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಚನ್ನಪಟ್ಟಣ – ರಾಮನಗರದಲ್ಲಿ ಪ್ರಯಾಣಿಕರು ಪರದಾಟ ಅನುಭವಿಸಿದರು. ಮಹಿಳೆಯರಿಗೆ ಉಚಿತ ಪ್ರಯಾಣದಿಂದಾಗಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆಯ ದೆಸೆಯಿಂದ, ಚನ್ನಪಟ್ಟಣ KSRTC ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಹತ್ತಲು ಜಾಗ ಸಿಗದೇ ಪರದಾಟ ಉಂಟಾಯಿತು. ಸರ್ಕಾರ ಉಚಿತ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಆಗ್ರಹಿಸಿದರು. ರೈಲಿನಲ್ಲಿ ಹೋಗುವ ಮಹಿಳೆಯರು ಸಹ ಬಸ್ಸಿಗೆ ಬಂದಿದ್ದಾರೆ, ಇದರಿಂದಾಗಿ ನಮಗೆ ತೀವ್ರವಾಗಿ ಸಮಸ್ಯೆ ಆಗುತ್ತಿದೆ ಎಂದರು.
ಕೋಲಾರ: ಶಕ್ತಿ ಯೋಜನೆಯ ಎರಡನೇ ದಿನ ಉಚಿತ ಪ್ರಯಾಣಕ್ಕೆ ಮಹಿಳೆಯರ ನೂಕು ನುಗ್ಗಲು ಕಂಡುಬಂತು. ಅಂತಾರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿಲ್ಲದುದರಿಂದ, ತಿರುಪತಿಯಿಂದ ಬೆಂಗಳೂರಿಗೆ ಹಾಗೂ ಕೋಲಾರದಿಂದ ಪಾವಗಡ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿಲ್ಲ. ಅಂತಾರಾಜ್ಯ ಬಸ್‌ಗಳಲ್ಲಿ ಕೋಲಾರದಿಂದ ಬೆಂಗಳೂರು ಹಾಗೂ ಕೋಲಾರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ಸಾರಿಗೆ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಹೀಗಾಗಿ ಅಂತಾರಾಜ್ಯ ಬಸ್‌ಗಳಲ್ಲೂ ರಾಜ್ಯದೊಳಗಿನ ಓಡಾಟಕ್ಕೆ ಉಚಿತವಾಗಿ ಅನುಕೂಲ ಮಾಡಿಕೊಡಲು ಮಹಿಳೆಯರು ಒತ್ತಾಯಿಸಿದರು.
ಇದನ್ನೂ ಓದಿ: DK shivkumar: ‘ಶಕ್ತಿ’ ಉದ್ಘಾಟನೆಯಲ್ಲಿ ಗಮನ ಸೆಳೆದ ಡಿಕೆಶಿ ಪೇಟಾ-ಶಾಲು; ಏನಿದರ ಗುಟ್ಟು?