ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿ ಎಂದು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಅವಾಂತರಗಳು ನಿಲ್ಲುವಂತೆ ಕಾಣುತ್ತಿಲ್ಲ. ಬಸ್‌ಗಳಲ್ಲಿ ಹೆಣ್ಣುಮಕ್ಕಳು ಜಗಳವಾಡುತ್ತಿರುವ, ಬಾಗಿಲು ಮುರಿದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ದಾವಣಗೆರೆಯಲ್ಲಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಜಗಳವಾಡಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾವಣಗೆರೆ ತಾಲೂಕಿನ ಕತ್ತಲಗೆರೆ ಕ್ರಾಸ್‌ನಲ್ಲಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಒಂದೇ ಸಮಯಕ್ಕೆ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಬಂದ ಕಾರಣ ಮಹಿಳೆಯರು ಸರ್ಕಾರಿ ಬಸ್ ಹತ್ತಿದ್ದಾರೆ. ಇದರಿಂದ ಕೆರಳಿದ ಖಾಸಗಿ ಬಸ್ ಚಾಲಕನು ಸರ್ಕಾರಿ ಬಸ್ ಚಾಲಕ ಜತೆ ವಾಗ್ವಾದ ನಡೆಸಿದ್ದಾರೆ.
ಸರ್ಕಾರಿ ಬಸ್ ಮುಂದೆ ಖಾಸಗಿ ಬಸ್ ನಿಲ್ಲಿಸಿ, ಸರ್ಕಾರಿ ಬಸ್ ಚಾಲಕನನ್ನು ಖಾಸಗಿ ಬಸ್ ಚಾಲಕ ತರಾಟೆಗೆ ತೆಗೆದುಕೊಂಡಿದ್ದಾನೆ. ಖಾಸಗಿ ಬಸ್ ಬರುವ ಸಮಯಕ್ಕೇ ಏಕೆ ಬಸ್ ತಂದೆ ಎಂದು ಪ್ರಶ್ನಿಸಿದ್ದಾನೆ. ಖಾಸಗಿ ಬಸ್ ಚಲಿಸುವ ಸಮಯಕ್ಕೆ ಬರಬಾರದು ಎಂದು ಆಗ್ರಹಿಸಿದ್ದಾನೆ. ಹೆಣ್ಣುಮಕ್ಕಳು ಖಾಸಗಿ ಬಸ್ ಹತ್ತುತ್ತಿಲ್ಲ ಎಂಬ ಕಾರಣಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ. ಬಳಿಕ ಸಾರ್ವಜನಿಕರು ಎರಡೂ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರನ್ನು ಸಮಾಧಾನ ಪಡಿಸಿದ್ದಾರೆ.
ಬಸ್‌ನಲ್ಲಿ ಸ್ತ್ರೀʼಶಕ್ತಿʼ ಪ್ರದರ್ಶನ
ಅದು ಯಾವ ಸಮಯದಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಗೆ ಶಕ್ತಿ ಯೋಜನೆ ಎಂದು ಹೆಸರಿಟ್ಟರೋ, ಬಸ್‌ಗಳಲ್ಲಿ ಹೆಣ್ಣುಮಕ್ಕಳ ಜಗಳ ಅತಿಯಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ರಾಯಚೂರಿನಲ್ಲಿ ಬಸ್‌ನಲ್ಲಿ ಮಹಿಳೆಯರ ಮಾರಾಮಾರಿ ನಡೆದಿದೆ. ಸಿರವಾರ ಮಾರ್ಗವಾಗಿ ರಾಯಚೂರಿಗೆ ಹೊರಟ ಬಸ್‌ನಲ್ಲಿ ಹೆಣ್ಣುಮಕ್ಕಳು ಕೈ ಕೈ ಮಿಲಾಯಿಸಿಕೊಂಡು ಜಗಳವಾಡಿದ್ದಾರೆ. ಇದರ ವಿಡಿಯೊ ವಿಡಿಯೊ ಕೂಡ ವೈರಲ್ ಆಗಿದೆ.