ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಬಸ್ ಪ್ರಯಾಣದ (Free Bus service) ಶಕ್ತಿ ಯೋಜನೆ (Shakti scheme) ಭಾರಿ ಜನಪ್ರಿಯತೆ ಪಡೆದಿರುವುದೇ ಸರ್ಕಾರಕ್ಕೆ ತಲೆನೋವಾಗಿದೆ. ಇದು ತಾನು ವೆಚ್ಚ ಮಾಡುವುದಕ್ಕೆ ಸಂಬಂಧಿಸಿದ ತಲೆಬಿಸಿಯಲ್ಲ, ವೀಕೆಂಡ್‌ನಲ್ಲಿ ಉಂಟಾಗುವ ರಷ್ ತಡೆಯಲು ಏನು ಮಾಡಬೇಕು ಎನ್ನುವುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ವೀಕೆಂಡ್ಸ್ ರೂಲ್ಸ್ (Weekend rules) ಜಾರಿಗೆ ಪ್ಲ್ಯಾನ್ ಮಾಡುತ್ತಿದೆ.
ವಾರಾಂತ್ಯಗಳಲ್ಲಿ ಮಹಿಳೆಯರು ಸ್ನೇಹಿತೆಯರ ಬಳಗವನ್ನು ಕಟ್ಟಿಕೊಂಡು ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗುವುದರಿಂದ ಭಾರಿ ನೂಕುನುಗ್ಗಲು ಉಂಟಾಗುತ್ತಿದೆ. ಬಸ್‌ಗಳಲ್ಲಿ ಬೇರೆಯವರಿಗೆ ಸಂಚರಿಸಲೇ ಸಾಧ್ಯವಿಲ್ಲದಷ್ಟು ಒತ್ತಡ ಉಂಟಾಗುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಚಿಂತನೆ ನಡೆದಿದೆ.
ಅವಸರ ಮಾಡಬೇಡಿ ಎಂದು ಸಚಿವರ ಮನವಿ
ಶಕ್ತಿಯ ಯೋಜನೆಯ ಆರಂಭದಿಂದಲೂ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ಮಹಿಳೆಯರು ಗುಂಪಾಗಿ ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲರೂ ಒಂದೇ ಸಲ ಹೋಗಬೇಡಿ, ಅವಸರ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ʻʻಈ ಕಾರ್ಯಕ್ರಮದ ಐದು ವರ್ಷ ಕಾಲ ಇರುತ್ತದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಆಮೇಲೆ ಮತ್ತೆ ಚುನಾವಣೆ ನಡೆದ ಬಳಿಕ ಇನ್ನೂ 10 ವರ್ಷ ಇರುತ್ತದೆʼʼ ಎಂದು ಹೇಳಿದ ಅವರು, ʻʻಕೆಲವು ಬಿಜೆಪಿ ನಾಯಕರು ಈಗಲೇ ಹೋಗಿ, ಈಗಲೇ ಹೋಗಿ ಪ್ರಚೋದನೆ ಮಾಡ್ತಾರೆ. ಅವರ ಮಾತುಗಳಿಗೆ ಕಿವಿಗೊಡಬೇಡಿʼʼ ಎಂದು ಹೇಳಿದರು.
ಕಳೆದ ಒಂದು ವಾರದ ಅವಧಿಯಲ್ಲಿ ಪ್ರಯಾಣವೆಚ್ಚವೇ 70 ಕೋಟಿ ರೂ. ಆಗಿದೆ ಎಂಬ ಲೆಕ್ಕಾಚಾರಕ್ಕೆ ಪ್ರತಿಯಿಸಿದ ಅವರು, ʻʻಪ್ರಾರಂಭದಲ್ಲಿ ಈ ರೀತಿಯ ರಷ್ ಇರುತ್ತದೆ. ಒಂದೇ ದಿನ ಧರ್ಮ ಕ್ಷೇತ್ರಗಳಿಗೆ ಹೋಗುತ್ತಾರೆ. ಅವರೆಲ್ಲ ಪ್ರತಿದಿನ ಹೋಗಲ್ಲ. ಆರಂಭದಲ್ಲಿ ಉತ್ಸಾಹದಿಂದ ಹೆಚ್ಚು ಪ್ರಯಾಣ ಮಾಡಿದ್ದಾರೆ. ಇನ್ಮೇಲೆ ಆರು ತಿಂಗಳ ನಂತರ ಪ್ರಯಾಣ ಮಾಡ್ತಾರೆʼʼ ಎಂದು ಹೆಳಿದ ಅವರು, ಈ ರೀತಿಯ ಪ್ರಯಾಣದಿಂದ ಬೇರೆ ಪ್ರಯಾಣಕರಿಗೆ ತೊಂದರೆ ಆಗಬಾರದು ಎಂದರು.
15 ದಿನಕ್ಕೆ ಕಾದು ನೋಡಿ ಅಂತ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ವೀಕೆಂಡ್ ಸಂಚಾರಕ್ಕೆ ಹೊಸ ರೂಲ್ಸ್ ಜಾರಿಗೆ ತರುವ ಸುಳಿವು ನೀಡಿದ್ದಾರೆ.
ವೀಕೆಂಡ್‌ನಲ್ಲಿ ಮಹಿಳೆಯರ ಪ್ರಯಾಣದಿಂದ ನೂಕುನುಗ್ಗಲು ಉಂಟಾಗುತ್ತಿರುವುದರಿಂದ ರಷ್ ನಿಯಂತ್ರಿಸಲು ಸಾರಿಗೆ ಇಲಾಖೆ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಇದರಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಳವೂ ಸೇರಿದಂತೆ ಹಲವು ಸಂಗತಿಗಳಿವೆ ಎಂಬ ಮಾಹಿತಿ ಇದೆ.
ಹಾಗಿದ್ದರೆ ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?
-KSRTCಯಲ್ಲಿ ಪುರುಷರಿಗೆ ಮೀಸಲಿಟ್ಟ ಆಸನಗಳನ್ನ ನಿರ್ವಾಹಕರು ಪುರುಷರಿಗೆ ಸಿಗುವಂತೆ ಮೇಲ್ವಿಚಾರಣೆ ನೀಡೋ ಸಾಧ್ಯತೆ.
-ವೀಕೆಂಡ್ ನಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಿಸುವ ಸಾಧ್ಯತೆ
-ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ಬಸ್ ಹತ್ತುವ ವ್ಯವಸ್ಥೆ ಮಾಡೋ ಸಾಧ್ಯತೆ
-ವೀಕೆಂಡ್ ನಲ್ಲಿ ನಿಲ್ದಾಣಗಳಲ್ಲಿ ಪೊಲೀಸರ ನಿಯೋಜನೆ
-ಬಸ್ ಗಳಲ್ಲಿ ಪ್ರಯಾಣಿಕರ ಮಿತಿ ಹೇರುವ ಸಾಧ್ಯತೆ
– ದೂರ ಪ್ರಯಾಣಕ್ಕೆ ಮೊದಲೇ ಟಿಕೆಟ್ ಬುಕ್ ಮಾಡಬೇಕೆಂದು ಸೂಚಿಸುವ ಸಾಧ್ಯತೆ
ಇದನ್ನೂ ಓದಿ : Free Bus Service : ಭಾನುವಾರ ಎರ‍್ರಾಬಿರ‍್ರಿ ರಷ್; ಆದರೆ, ಇದು ಫ್ರೀ ಓಡಾಟದಲ್ಲಿ ದಾಖಲೆಯೇನಲ್ಲ!