Site icon Vistara News

Free Bus Service: ಸರ್ಕಾರಿ ಬಸ್‌ನಲ್ಲಿ ಮಹಿಳಾ ಶಕ್ತಿವೈಭವ ; 3ನೇ ದಿನದ ವೆಚ್ಚ 11 ಕೋಟಿಗೆ ಏರಿಕೆ

woman passengers in Bus

#image_title

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳ (Congress Guarantee) ಪೈಕಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ “ಶಕ್ತಿ”ಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯೋಜನೆ ಆರಂಭಗೊಂಡ ಮೂರನೇ ದಿನವೇ ಮಹಿಳಾ ಪ್ರಯಾಣಿಕರ ಸಂಖ್ಯೆ 50 ಲಕ್ಷದ ಗಡಿ ಮೀರಿದೆ ಮತ್ತು ದಿನದ ವೆಚ್ಚ 11 ಕೋಟಿ ರೂ. ಸನಿಹಕ್ಕೆ ಬಂದಿದೆ. ಮಹಿಳೆಯರು ಉಚಿತ ಪ್ರಯಾಣದ (Free Bus Service) ಲಾಭವನ್ನು ಪಡೆದುಕೊಳ್ಳುತ್ತಿರುವುದು ಇದರಿಂದ ದೃಢಪಟ್ಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚು ಸಾಧ್ಯತೆಗಳೂ ಕಂಡುಬಂದಿದೆ.

ಜೂನ್‌ 11ರಂದು (ಭಾನುವಾರ) ಮಹತ್ವಾಕಾಂಕ್ಷೆಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚಾಲನೆ ನೀಡಿದ್ದರು. ಈ ಯೋಜನೆಗೆ ಭಾನುವಾರವೇ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಕ್ಕಿತ್ತು. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಆರಂಭಗೊಂಡ ಯೋಜನೆಯಡಿ ಮಧ್ಯರಾತ್ರಿಯವರೆಗೆ ಸುಮಾರು 5,71,023 ಮಹಿಳಾ ಪ್ರಯಾಣಿಕರು ಓಡಾಟ ನಡೆಸಿದ್ದರು. ಅಂದಿನ ವೆಚ್ಚ ಸುಮಾರು ,40,22,878 ರೂಪಾಯಿ ಆಗಿತ್ತು. ಎರಡನೇ ದಿನವಾದ ಸೋಮವಾರ ಮಹಿಳೆಯರ ಸಂಚಾರ ಪ್ರಮಾಣ ಎಂಟು ಪಟ್ಟು ಹೆಚ್ಚಾಗಿತ್ತು. ಅಂದು 41,34,726 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದರೆ, ಅವರ ಪ್ರಯಾಣದ ಮೌಲ್ಯವು 8,83,53,434 ರೂಪಾಯಿ ಆಗಿತ್ತು.

ಮೂರನೇ ದಿನ ಹೇಗಿತ್ತು?

ಮೂರನೇ ದಿನವಾದ ಜೂನ್‌ 13ರಂದು ಶಕ್ತಿ ಯೋಜನೆಯಡಿ ಒಟ್ಟು 51,52,769 ಮಹಿಳಾ ಪ್ರಯಾಣಿಕರು ಓಡಾಟ ನಡೆಸಿದ್ದರು. ಇದರಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರು 13,98,665 (ಟಿಕೆಟ್‌ ವೆಚ್ಚ-4,12,26,780 ರೂ.) ಆಗಿದ್ದರೆ, ಬಿಎಂಟಿಸಿಯಲ್ಲಿ ಅತಿ ಗರಿಷ್ಠ ಅಂದರೆ 20,56,856 (ಟಿಕೆಟ್‌ ವೆಚ್ಚ- 2,02,14,395) ಮಂದಿ ಓಡಾಡಿದ್ದರು. ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 11,08,930 (ಟಿಕೆಟ್‌ ವೆಚ್ಚ- 2,72,19,029 ರೂ.) ಆಗಿದ್ದರೆ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 5,89,318 (ಟಿಕೆಟ್‌ ವೆಚ್ಚ 1,95,41,987 ರೂ.) ಮಹಿಳೆಯರು ಓಡಾಡಿದ್ದರು.

ಇದರ ಒಟ್ಟಾರೆ ಖರ್ಚು: 10,82,02,191 ರೂ. ಆಗಿದೆ. ಇದನ್ನು ಸರ್ಕಾರವೇ ನಿಗಮಗಳಿಗೆ ಭರಿಸಲಿದೆ.

ನಿಗಮ – ಪ್ರಯಾಣಿಕರ ಸಂಖ್ಯೆ – ಪ್ರಯಾಣಿಸಿದ ಮೌಲ್ಯ (ರೂಪಾಯಿಗಳಲ್ಲಿ)
KSRTC 1398665 – 4,12,26,780
BMTC – 2056856 – 2,02,14,395
NWKRTC – 1108930 – 2,72,19,029
KKRTC – 589318 – 1,95,41,987
ಒಟ್ಟೂ ಪ್ರಯಾಣಿಕರು – 51,52,769
ಒಟ್ಟೂ ಪ್ರಯಾಣದ ಮೌಲ್ಯ – 10,82,02,191 ರೂ.

ಮೂರು ದಿನದ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಪ್ರಯಾಣಕ್ಕೆ ಮುನ್ನ ಇರಲಿ ಈ ದಾಖಲೆ

ರಾಜ್ಯ ಸರ್ಕಾರದ 5 ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾಗಿರುವ “ಶಕ್ತಿ” ಅಡಿ ಮಹಿಳೆಯರು ಉಚಿತ ಪ್ರಯಾಣಕ್ಕೆ (Free Bus Service) ಹಲವು ಅಡ್ಡಿ ಆತಂಕಗಳು ಎದುರಾಗಿತ್ತು. ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಈ ಉಚಿತ ಬಸ್‌ ಸೇವೆಗೆ ಚಾಲನೆ ಕೊಟ್ಟಿದ್ದರು. ಆದರೆ, ರಾಜ್ಯಾದ್ಯಂತ ಗೊಂದಲಗಳು ಮಾತ್ರ ಮುಂದುವರಿದಿದ್ದವು.

ಬಸ್‌ನಲ್ಲಿ ಮುದ್ರಿತ ಒರಿಜಿನಲ್‌ ಡಾಕ್ಯುಮೆಂಟ್‌ (Original Document) ಇದ್ದರೆ ಮಾತ್ರ ಉಚಿತ ಟಿಕೆಟ್‌ ಕೊಡುವುದಾಗಿ ಸಾರಿಗೆ ಸಿಬ್ಬಂದಿ ಹೇಳುತ್ತಿರುವುದು ಮಹಿಳೆಯರಿಂದ ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ, ಈ ಬಗ್ಗೆ ಎಚ್ಚೆತ್ತಿರುವ ರಾಜ್ಯ ಸರ್ಕಾರ ಈಗ ಹೊಸ ಆದೇಶವೊಂದನ್ನು ಹೊರಡಿಸಿದೆ. ಉಚಿತ ಪ್ರಯಾಣಕ್ಕೆ ಮಹಿಳೆಯರು ಒರಿಜಿನಲ್‌ ದಾಖಲೆಯನ್ನು ಒಯ್ಯುವುದು ಕಡ್ಡಾಯ ಅಲ್ಲ ಎಂದು ಹೇಳಿದೆ.

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್‌ ಕಾರ್ಡ್‌ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ. ಮೂಲ ದಾಖಲಾತಿ, ಡಿಜಿಲಾಕರ್, ನಕಲು ಕಾಪಿಯನ್ನು ಪರಿಗಣಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Free Bus Service: ದುಡ್ಡೂ ತಂದಿಲ್ಲ, ದಾಖಲೆಯೂ ಜತೆಗಿಲ್ಲ; ಬಸ್ಸಿನಲ್ಲೇ ಗೊಳೋ ಎಂದು ಅತ್ತ ಮಹಿಳೆ!

Exit mobile version