Site icon Vistara News

Free Bus service: ‌ ಜನರಿಗೆ ಧರ್ಮದ ದಾರಿ ತೋರಿದ ಫ್ರೀ ಬಸ್‌; ಪ್ರಿಯಾಂಕ್ ಖರ್ಗೆ ಹೊಸ ವ್ಯಾಖ್ಯಾನ

Priyank Kharge

#image_title

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ (Free Bus service) ಅವಕಾಶ ಒದಗಿಸಿರುವ ಶಕ್ತಿ ಯೋಜನೆಯ (Shakthi scheme) ಪರಿಪೂರ್ಣ ಲಾಭವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಗುಂಪು ಗುಂಪಾಗಿ ಟೆಂಪಲ್‌ ರನ್‌‌ (Temple run) ಮಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಇದರಿಂದ ಬಸ್‌ಗಳು ತುಂಬಿ ತುಳುಕುತ್ತಿವೆ, ಅಗತ್ಯ ಉದ್ದೇಶಗಳಿಗಾಗಿ ಓಡಾಡುವ ಜನರಿಗೆ ಸಮಸ್ಯೆಯೂ ಆಗಿದೆ. ಆದರೆ, ಈ ಶಕ್ತಿ ಯೋಜನೆಯ ವಿಚಾರದಲ್ಲಿ ಹೊಸ ಕೋನವೊಂದನ್ನು ತೆರೆದಿಟ್ಟಿದ್ದಾರೆ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge). ಅವರು ಇದು ಕಾಂಗ್ರೆಸ್‌ ತೋರಿದ ಧರ್ಮದ ದಾರಿ ಎಂದು ವ್ಯಾಖ್ಯಾನಿಸಿದ್ದಾರೆ.

ಶಕ್ತಿ ಯೋಜನೆಯ ಯಶಸ್ಸಿಗೆ ಸಂಬಂಧಿಸಿ ಒಂದು ಸುದೀರ್ಘ ಟ್ವೀಟ್‌ ಮಾಡಿರುವ ಅವರು, ಬಿಜೆಪಿಯವರು ಬರೀ ಧರ್ಮ, ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ಜನರನ್ನು ನಿಜಾರ್ಥದಲ್ಲಿ ಧರ್ಮದ ದಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ದೇವಸ್ಥಾನ ಹಾಗೂ ಪೂಜಾ ಕೇಂದ್ರಗಳಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆಯನ್ನು ಶಕ್ತಿ ಯೋಜನೆ ಹೆಚ್ಚಿಸಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಇದುವೇ ಹಿಂದುತ್ವದ ಬಲವರ್ಧನೆಯ ನಿಜವಾದ ದಾರಿ. ಬಿಜೆಪಿಯವರು ದ್ವೇಷದ ಮೂಲಕ ಹಿಂದುತ್ವವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ನಾವು ಪ್ರೀತಿಯಿಂದ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಹೊಸ ವ್ಯಾಖ್ಯಾನ ನೀಡಿದ್ದಾರೆ.

ಆರ್ಥಿಕ ಪ್ರಗತಿಯೂ ಸಾಧ್ಯ ಎಂದ ಖರ್ಗೆ

ಇಷ್ಟೆಲ್ಲ ಜನರು ದೇವಾಲಯಗಳಿಗೆ ಹೋಗುವುದರಿಂದ ಭಕ್ತಿ ಮಾತ್ರ ಹೆಚ್ಚುವುದಲ್ಲ. ಇದು ಆರ್ಥಿಕ ಅಭಿವೃದ್ಧಿಗೂ ಹಿತಕರ ಎಂದಿದ್ದಾರೆ.

ಪ್ರಿಯಾಂಕಾ ಖರ್ಗೆ ಟ್ವೀಟ್‌ನಲ್ಲಿ ಹೇಳಿದ್ದೇನು?

-ಹಿಂದುತ್ವ – ಜನರನ್ನ ಧರ್ಮದ ದಾರಿಯಲ್ಲಿ ಸಾಗಿಸುವ ಬದಲಿಗೆ ಸಮಾಜವನ್ನು ಇಬ್ಬಾಗಿಸುವ ದ್ವೇಷ ಹಾಗೂ ಅಸೂಯೆಯ ಕೂಪಕ್ಕೆ ತಳ್ಳಿತ್ತು.

-ದ್ವೇಷಕ್ಕೆ ಜನರನ್ನ ದೇವರ ಬಳಿ ಕರೆದೊಯ್ಯಲು ಸಾಧ್ಯವಿಲ್ಲಾ. ಆದರೆ ಪ್ರೀತಿ ಹಾಗೂ ಕಾಂಗ್ರೆಸ್ ನ “ಶಕ್ತಿ” ಜನರನ್ನ ತಮ್ಮ ಪೂಜ್ಯ ಸ್ಥಳಗಳಿಗೆ ಮತ್ತಷ್ಟು ಹತ್ತಿರ ಮಾಡಿದೆ.

-ಶಕ್ತಿ ಯೋಜನೆಯಿಂದಾಗಿ ದೇವಸ್ಥಾನ ಹಾಗೂ ಪೂಜಾ ಕೇಂದ್ರಗಳಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ಜನರ ಅಂತರಾಳದಲ್ಲಿ ಪೂಜಿಸುವ, ಪ್ರೀತಿಸುವ ಭಾವನೆಯನ್ನು ಸಬಲಗೊಳಿಸಲಾಗಿದೆ.

-ಇದರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳ ಸುತ್ತಲಿನ ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ನೇರ ಅನುಕೂಲ ಸಿಗಲಿದ್ದು, ಅಲ್ಲಿನ ಆರ್ಥಿಕ ಪ್ರಗತಿಯ ವೇಗ ಕೂಡ ದ್ವಿಗುಣಗೊಳ್ಳಲಿದೆ.

-ದ್ವೇಷ ಕೇಂದ್ರಿತ ಅಧರ್ಮವನ್ನು ಸೋಲಿಸಿ, ಪ್ರೀತಿ ಹಾಗೂ ಸಹಬಾಳ್ವೆ ಕೇಂದ್ರಿತ ಧರ್ಮವನ್ನು ಗೆಲ್ಲಿಸಲು ನಾವು ‘ಶಕ್ತಿ’ಯುತ ಹೆಜ್ಜೆ ಇಟ್ಟಿದ್ದೇವೆ.

ಇದನ್ನೂ ಓದಿ: Free Bus Service : ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಅಬ್ಬರ, ರಷ್‌: ಸಾರಿಗೆ ಸಚಿವರು ಏನು ಹೇಳ್ತಾರೆ?

Exit mobile version