Site icon Vistara News

Free Bus Service : ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 59,000 ಕೋಟಿ ರೂ. ವೆಚ್ಚ: ಸಿಎಂ ಸಿದ್ದರಾಮಯ್ಯ

CM siddaramayya

#image_title

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಎಲ್ಲ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಿದೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಒಟ್ಟು ವಾರ್ಷಿಕ 59,000 ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಗೆ ಎಷ್ಟು ಖರ್ಚಾಗುತ್ತದೆ ಎಂಬುದು ಮುಖ್ಯವಲ್ಲ, ಯಾರಿಗೋಸ್ಕರ ಮತ್ತು ಯಾವುದಕ್ಕೋಸ್ಕರ ಖರ್ಚು ಮಾಡುತ್ತೇವೆ ಎಂಬುದು ಮುಖ್ಯ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಬಲೀಕರಣವಾಗಬೇಕು. ಜತೆಗೆ ಬಡವರು ಹಸಿವಿನಿಂದ ಬಳಲಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು (ಶಕ್ತಿ ಯೋಜನೆ) ಚಾಲನೆಗೊಳಿಸಿ ಮಾತನಾಡಿದ ಅವರು, ಶ್ರೀಮಂತರ ಜೇಬಿಗೆ ದುಡ್ಡು ಇಟ್ಟರೆ ಪ್ರಯೋಜನವಿಲ್ಲ, ಆದರೆ ಬಡವರ ಜೇಬಿಗೆ ದುಡ್ಡು ಕೊಟ್ಟರೆ ಅದು ಪ್ರಯೋಜನಕ್ಕೆ ಬರುತ್ತದೆ. ಹೀಗಾಗಿ ಐದೂ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರು ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

CM siddaramaiah, DCM shivakumar launch free bus service for women

ಅವಕಾಶ ವಂಚಿತ ಮಹಿಳೆಯರಿಗೆ ಶಕ್ತಿ: ರಾಜ್ಯದಲ್ಲಿ ಮಹಿಳೆಯರು ಅರ್ಧದಷ್ಟು ಇದ್ದಾರೆ. ಶತಶತಮಾನಗಳಿಂದ ಅವರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಹಿಂದುಳಿದವರು,ಅಲ್ಪಸಂಖ್ಯಾತರು,ಮಹಿಳೆಯರು ಶತಮಾನಗಳಿಂದ ಹಿಂದುಳಿದಿದ್ದಾರೆ.. ಸಮಾಜ ಅಭಿವೃದ್ಧಿ ಆಗಬೇಕು ಅಂದ್ರೆ ಪುರುಷರಷ್ಟೇ ಸ್ತ್ರೀಯರು ಪಾಲ್ಗೊಳ್ಳಬೇಕು. ಅಮೇರಿಕಾದಲ್ಲಿ ಸಾರ್ವಜನಿಕ ಜನಜೀವನದಲ್ಲಿ 50% ರಷ್ಟು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಶೇಕಡಾ 60 ರಷ್ಟು, ಚೀನಾದಲ್ಲಿ 52 ರಷ್ಟು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ ಶೇ. 24 ರಷ್ಟು ಇದೆ. 2014 ಕ್ಕೂ ಮೊದಲು 30 ಇತ್ತು. ಈಗ 24% ಕ್ಕೆ ಬಂದಿದೆ. ಮೊಸಲೆ ಕಣ್ಣಿರು ಸುರಿಸುತ್ತಿದ್ದವರ ಕಾಲದಲ್ಲಿ ಮಹಿಳೆಯರಿಗೆ ಬವಣೆ ಇತ್ತು. ಮನುವಾದಿಗಳು ಹೆಂಗಸರು ಮನೆಬಿಟ್ಟು ಹೊರ ಹೋಗುಬಾರದು ಅಂತ ಬಯಸುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳ ಶಕ್ತಿ ತುಂಬಲು ಈ ಯೋಜನೆ ಜಾರಿ ಮಾಡಿದ್ದೇವೆ. ನಾಲ್ಕು ಯೋಜನೆಗಳು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಯೋಜನೆಗಳಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಪ್ರತಿಪಕ್ಷಗಳಿಗೆ ಸಿಎಂ ತರಾಟೆ: ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಕೆಲವರು ಟೀಕಿಸಿದ್ದಾರೆ. ಆದರೆ ಎಷ್ಟೇ ಕಷ್ಟ ಬಂದರೂ ಐದು ಗ್ಯಾರೆಂಟಿ ಈಡೇರಿಸುತ್ತೇವೆ. ಕೊಡುವಾಗ ಯೋಚನೆ ಮಾಡಲಿಲ್ಲ ಅಂತ ಚರ್ಚೆ ಮಾಡ್ತಾರೆ. ಆದರೆ ಯೋಜನೆಗಳ ಬಗ್ಗೆ ಸಮಗ್ರವಾಗಿ ಆಲೋಚಿಸಿಯೇ ಜಾರಿಗೊಳಿಸಲಾಗುತ್ತಿದೆ. ಗೃಹ ಲಕ್ಷ್ಮೀ ಆಗಸ್ಟ್ 16 ರಿಂದ ಜಾರಿಯಾಗಲಿದೆ. ನಮಗೆ ವಾರ್ಷಿಕ ಒಟ್ಟು 59,000 ಕೋಟಿ ರೂ. ವೆಚ್ಚವಾಗಲಿದೆ. ಉಳಿದ ಅಭಿವೃದ್ಧಿ ಯೋಜನೆಗಳಿಗೆ ತಗಲುವ ವೆಚ್ಚ ಹೊರತುಪಡಿಸಿ ಹೆಚುವರಿ 40,000 ಕೋಟಿ ರೂ. ಹಣ ಬೇಕಾಗುತ್ತದೆ. ಎಷ್ಟು ಹಣ ಕೊಡ್ತೀವಿ ಅನ್ನೋದು ಮುಖ್ಯ ಅಲ್ಲ , ಯಾವ ಜನರಿಗೆ ಕೊಡ್ತಿದ್ದೇವೆ ಅನ್ನೋದು ಮುಖ್ಯ. ಬಡವರಿಗೆ ಕೊಡುವ ದುಡ್ಡು ಆರ್ಥಿಕವಾಗಿಯೂ ಸಹಕಾರಿಯಾಗುತ್ತದೆ ಎಂಬುದು ಎಕಾನಮಿ ಬಗ್ಗೆ ಗೊತ್ತಿರುವವರಿಗೆ ತಿಳಿಯದಿರುವ ಸಂಗತಿಯೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ನಮ್ಮ ಸರ್ಕಾರ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ಕೊಡಲಿದೆ. ಹತ್ತು ಸಾವಿರ ನೂರು ಕೋಟಿ ಖರ್ಚು ಆಗಲಿದೆ. ಆದರೆ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬುದೇ ಇದರ ಉದ್ದೇಶ. ಹೊಟ್ಟೆ ತುಂಬಿಸಿಕೊಂಡು ಅಜೀರ್ಣ ಮಾಡುವವರಿಗೆ ಬಡವರ ಕಷ್ಟ ಗೊತ್ತಾಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Free Bus: ವಿಧಾನಸೌಧದಿಂದ ಮೆಜೆಸ್ಟಿಕ್​​ಗೆ ಬಸ್​​ನಲ್ಲಿ ಕೈ ನಾಯಕರ ಪ್ರಯಾಣ; ಸೀಟ್​​ನಲ್ಲಿ ಒಟ್ಟಿಗೇ ಕುಳಿತ ಸಿಎಂ-ಡಿಸಿಎಂ

Exit mobile version