Site icon Vistara News

Free Bus Service: ಮಹಿಳೆಯರಿಗೆ ‘ಶಕ್ತಿ’ ನೀಡಿದ ಸಿದ್ದರಾಮಯ್ಯ; ಚಾಲನೆಗೊಂಡ ಮೊದಲ ಗ್ಯಾರಂಟಿ!

Shakti logo

ಬೆಂಗಳೂರು: ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್‌ (Free Bus Service) ಪ್ರಯಾಣವುಳ್ಳ ಶಕ್ತಿ ಯೋಜನೆಗೆ ಭಾನುವಾರ (ಜೂನ್‌ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಿದರು. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾಥ್‌ ನೀಡಿದರು.

ವಿಧಾನಸೌಧ ಮುಂಭಾಗ ಹಾಕಲಾಗಿದ್ದ ಬೃಹತ್‌ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡುವ ಮೂಲಕ ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು.

ಶಕ್ತಿ ಯೋಜನೆಯನ್ನು ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್

ಇದನ್ನೂ ಓದಿ: Weather Report: ಆಗಿದೆ ಮುಂಗಾರಿನ ರಂಗ ಪ್ರವೇಶ; ಹಂತ ಹಂತವಾಗಿ ನೀಡಲಿದೆ ಭರ್ಜರಿ ಪ್ರದರ್ಶನ!

ಶಕ್ತಿ ಲೋಗೋ ಅನಾವರಣ

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮತ್ತಿತರರು ಶಕ್ತಿ ಯೋಜನೆಯ ಲೋಗೋವನ್ನು ಅನಾವರಣಗೊಳಿಸಿದರು. ಇದೇ ವೇಳೆ ಮಾದರಿ ಸ್ಮಾರ್ಟ್‌ ಕಾರ್ಡ್‌ ಅನ್ನು ಸಹ ಬಿಡುಗಡೆಗೊಳಿಸಲಾಯಿತು. ಜತೆಗೆ ಮಾದರಿ ಟಿಕೆಟ್‌ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಟಿಕೆಟ್‌ ನೀಡಲಾಗಿದೆ.

ಮಹಿಳೆಯ ಉಚಿತ ಪ್ರಯಾಣಕ್ಕೆ ನೀಡಲಾಗುವ ಮಾದರಿ ಸ್ಮಾರ್ಟ್‌ ಕಾರ್ಡ್‌

ಸದ್ಯ ಪ್ರಯಾಣಕ್ಕೆ ಏನು ದಾಖಲೆ ಬೇಕು?

ಮಹಿಳೆಯರು ಈ ಉಚಿತ ಪ್ರಯಾಣಕ್ಕಾಗಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಚಾಲನಾ ಪರವಾನಗಿ, ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿ, ವಿಶೇಷಚೇತನ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇಲ್ಲವೇ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಪತ್ರವನ್ನು ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇಟ್ಟುಕೊಂಡು ಹೋಗಬೇಕು. ನೀವು ತೋರಿಸುವ ಗುರುತಿನ ಚೀಟಿಗಳಲ್ಲಿ ನಿಮ್ಮ ಫೋಟೋ ಮತ್ತು ವಾಸಸ್ಥಳವು ಕಡ್ಡಾಯವಾಗಿ ನಮೂದಾಗಿರಬೇಕು. ಸ್ಮಾರ್ಟ್‌ ಕಾರ್ಡ್‌ ದೊರೆಯುವವರೆಗೆ ಮಾತ್ರ ಈ ನಿಯಮ ಜಾರಿಯಲ್ಲಿರಲಿದೆ.

ಸ್ಮಾರ್ಟ್‌ ಕಾರ್ಡ್‌ ಎಲ್ಲಿ ದೊರೆಯುತ್ತದೆ?

ಸ್ಮಾರ್ಟ್‌ ಕಾರ್ಡ್‌ ಸಲ್ಲಿಕೆಗೆ ಮೊದಲು ಅರ್ಜಿ ಸಲ್ಲಿಸಬೇಕು. ಆದರೆ, ಸರ್ಕಾರ ಇನ್ನೂ ಇದಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿಲ್ಲ. ಅರ್ಜಿ ನಮೂನೆ ಸಿದ್ಧವಾದ ಬಳಿಕ ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಿದೆ. ಇದು ಬಹುತೇಕ ಜುಲೈ ತಿಂಗಳಿನಲ್ಲಿ ಲಭ್ಯವಾಗಬಹುದು ಎಂದು ಮೂಲಗಳು ತಿಳಿಸಿವೆ. ಬಳಿಕ ಸಾರ್ವಜನಿಕರು ಸ್ಮಾರ್ಟ್‌ ಕಾರ್ಡ್‌ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಸಮೀಪದ ಸೇವಾಸಿಂಧು ಪೋರ್ಟಲ್‌ ಮೂಲಕ ಅಗತ್ಯ ದಾಖಲೆ ಸಲ್ಲಿಸಿ ಅರ್ಜಿ ಸಲ್ಲಿಸಬಹುದು. ಆದರೆ, ಈ ಸ್ಮಾರ್ಟ್‌ ಕಾರ್ಡ್‌ ಉಚಿತವೋ ಅಥವಾ ಅದಕ್ಕೆ ಹಣ ಕಟ್ಟಬೇಕೋ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ.

ಯಾರಿಗೆಲ್ಲ ಉಚಿತ?

6 ರಿಂದ 12 ವರ್ಷದೊಳಗಿನ ಬಾಲಕಿಯರು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ, ಇವರು ಕರ್ನಾಟಕದ ಪ್ರಜೆಗಳಾಗಿರಬೇಕು. ಅಂಥವರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತದೆ. ಆದರೆ, ಅಂತಾರಾಜ್ಯಕ್ಕೆ ಇಲ್ಲಿ ಉಚಿತ ಪ್ರಯಾಣ ಇರುವುದಿಲ್ಲ. ರಾಜ್ಯದೊಳಗೆ ಯಾವುದೇ ದೂರದ ಮಿತಿಯನ್ನು ಹಾಕಲಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲಿ ಬೇಕಾದರೂ ಸಂಚರಿಸಬಹುದು.

ಇದನ್ನೂ ಓದಿ: ಮಹಿಳೆಯರ ಉಚಿತ ಬಸ್​ ಪ್ರಯಾಣಕ್ಕೆ ಪಿಂಕ್​ ಚೀಟಿ​ ರೆಡಿ; ಇಟಿಎಂನಲ್ಲಿ ಟಿಕೆಟ್​ ಮಾಡೋದು ಹೇಗೆ?

ಐಷಾರಾಮಿ ಬಸ್‌ಗಳಲ್ಲಿ ಇಲ್ಲ ಸೇವೆ

ನಾಲ್ಕೂ ಸಾರಿಗೆ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಈ ಉಚಿತ ಸೇವೆ ಲಭ್ಯವಿದೆ. ಐರಾವತ, ರಾಜಹಂಸ, ಎಸಿ ಸ್ಲೀಪರ್‌, ನಾನ್‌ ಎಸಿ ಸ್ಲೀಪರ್‌, ವಜ್ರ, ವಾಯುವಜ್ರ ಸೇರಿದಂತೆ ಇನ್ನಿತರ ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

Exit mobile version