ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು (Shakti scheme) ಯಶಸ್ವಿಯಾಗಿ ಜಾರಿಗೊಳಿಸಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ನೀಡುವ ಈ ಯೋಜನೆ ದೊಡ್ಡ ಮಟ್ಟದ ಯಶಸ್ಸನ್ನೂ ಪಡೆಯುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಈಗ ಮಹಿಳೆಯರು ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿದರೆ ಸಾಕು ಎಂದು ಹೇಳಲಾಗಿದೆ. ಅದರೆ, ಮುಂದೆ ಶಕ್ತಿ ಯೋಜನೆಗಾಗಿಯೇ ಇರುವ ಸ್ಮಾರ್ಟ್ ಕಾರ್ಡ್ (Shakti smart Card) ಒಂದನ್ನು ತೋರಿಸುವುದನ್ನು ಕಡ್ಡಾಯ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಹಾಗಿದ್ದರೆ ಈ ಕಾರ್ಡ್ ಎಲ್ಲಿ ಸಿಗುತ್ತದೆ? ಪಡೆಯುವುದು ಹೇಗೆ? – ಮಾಹಿತಿ ಇಲ್ಲಿದೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯ ಸ್ಮಾರ್ಟ್ ಕಾರ್ಡ್‌ಗಾಗಿ (Shakti smart cards) ಅರ್ಜಿ ಸಲ್ಲಿಸಲು ಹೊಸದೊಂದು ಪೋರ್ಟಲ್ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದ್ದಾರೆ.
-ಸದ್ಯಕ್ಕೆ ಮುಂದಿನ ಮೂರು ತಿಂಗಳವರೆಗೆ ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
-ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆಯಬಹುದು.
-ಅರ್ಜಿ ಸಲ್ಲಿಸಲು ಹೊಸ ಪೋರ್ಟಲ್ ಶೀಘ್ರದಲ್ಲೇ ಆರಂಭವಾಗಲಿದೆ.
– ಯಾವುದೇ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡುವ ಮೂಲಕ ಸ್ಮಾರ್ಟ್ ಕಾರ್ಡ್ ಪಡೆಯಬಹುದು.
ಸೇವಾ ಸಿಂಧುವೇನಾ? ಹೊಸ ಪೋರ್ಟಲಾ?
ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ನಡೆಯುತ್ತದಾ ಅಥವಾ ಹೊಸ ಪೋರ್ಟಲ್ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಗೃಹ ಜ್ಯೋತಿ ನೋಂದಣಿಯ ಒತ್ತಡವಿದೆ, ಇನ್ನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದೆ. ಹೀಗಾಗಿ ಮುಂದಿನ ಕೆಲವು ತಿಂಗಳವರೆಗೆ ಈ ಪೋರ್ಟಲ್‌ನಲ್ಲಿ ಒತ್ತಡ ಕಾಣಿಸಿಕೊಳ್ಳಲಿದೆ. ಹೀಗಾಗಿ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡನ್ನೂ ಕೂಡಾ ಇದರಲ್ಲೇ ಮುಂದುವರಿಸಬೇಕೇ ಅಥವಾ ಬೇರೊಂದು ಪೋರ್ಟಲ್ ಇಲ್ಲವೇ ಆಪ್‌ನ ನೆರವು ಪಡೆಯಬೇಕೇ ಎನ್ನುವ ಚರ್ಚೆ ನಡೆಯುತ್ತಿದೆ.
ಶಕ್ತಿ ಯೋಜನೆಯಲ್ಲಿ ಇದುವರೆಗೆ ಓಡಾಡಿದವರು ಎಷ್ಟು?
ಕಾಂಗ್ರೆಸ್ ಪಕ್ಷದ ಐದು ಚುನಾವಣಾ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಹಯೋಜನೆಗೆ ಜೂನ್ 11 ರಂದು ಚಾಲನೆ ನೀಡಲಾಯಿತು. ಅಂದಿನಿಂದ 8,24,93,637 ಮಹಿಳೆಯರು ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ, ಮತ್ತು 194,50,13,686 ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗಿದೆ.
ಇದನ್ನೂ ಓದಿ: Free Bus service: ಮಹಿಳಾ ಶಕ್ತಿ ಎಫೆಕ್ಟ್; ಬಸ್ಸಲ್ಲಿ ತಳ್ಳಾಟಕ್ಕೆ ಸಿಲುಕಿದ ವಿದ್ಯಾರ್ಥಿನಿ ಅಸ್ವಸ್ಥ
ಶಕ್ತಿ ಯೋಜನೆಯ ಆರಂಭಿಕ ದಿನಗಳಲ್ಲಿ ರಾಜ್ಯಾದ್ಯಂತ ಬಸ್‌ಗಳಲ್ಲಿ ವಿಪರೀತ ಒತ್ತಡವಿತ್ತು. ಮೊದಲ ವೀಕೆಂಡ್ ದಿನಗಳಾದ ಜೂನ್ 17 ಮತ್ತು 18ರಂದು ಇಡೀ ರಾಜ್ಯದಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೆ, ಅದರ ನಂತರದ ವೀಕೆಂಡ್‌ನಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು ಕಂಡುಬಂದಿದೆ.