Site icon Vistara News

Free Bus Service : ಬಸ್ಸಿನಲ್ಲಿ ಮದ್ಯ ಒಯ್ಯಲು ಅವಕಾಶ ನೀಡದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯರು!

Alcohol in KSRTC Bus

#image_title

ಗದಗ: ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣದ (Free Bus service) ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರು (Woman Passengers) ಮತ್ತು ಕಂಡಕ್ಟರ್‌ ನಡುವೆ ಜಗಳ ಎನ್ನುವುದು ನಿತ್ಯಕಥೆಯಾಗಿದೆ. ಈ ನಡುವೆ ಗದಗದಲ್ಲಿ ಇನ್ನೊಂದು ಕಿರಿಕ್‌ ನಡೆದಿದೆ. ಅದೇನೆಂದರೆ ಬಸ್ಸಿನಲ್ಲಿ ಮದ್ಯ ಸಾಗಿಸಲು ತಮಗೆ ಅವಕಾಶ ಕೊಡಬೇಕು ಎಂದು ಮಹಿಳೆಯರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ!

ಇಬ್ಬರು ಮಹಿಳೆಯರು ಬಸ್ಸಿನಲ್ಲಿ ಮದ್ಯದ ಬಾಟಲ್‌ ಕೊಂಡೊಯ್ಯುತ್ತಿದ್ದುದನ್ನು ಕಂಡಕ್ಟರ್‌ ಆಕ್ಷೇಪಿಸಿ ಅವರನ್ನು ಬಸ್ಸಿನಿಂದ ಇಳಿದ ಬಳಿಕ ಹೈಡ್ರಾಮಾ ಸೃಷ್ಟಿಯಾಗಿದ್ದು, ಬಸ್‌ ನಿರ್ವಾಹಕನ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆಯರು ಸರ್ಕಾರದ ಉಚಿತ ಯೋಜನೆಯಡಿ ಪ್ರಯಾಣ ಮಾಡುತ್ತಿದ್ದರು ಎನ್ನುವುದು ಚರ್ಚೆಗೆ ಮತ್ತೊಂದು ಆಯಾಮ ಒದಗಿಸಿದೆ.

ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಹೈಡ್ರಾಮಾ ನಡೆದಿದ್ದು, ತಮಗೆ ಬಸ್ಸಿನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

ಆಗಿದ್ದೇನು?

ಗದಗ ಮೂಲದ ಇಬ್ಬರು ಮಹಿಳೆಯರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್‌ ಹಿಡಿದುಕೊಂಡು ಬಸ್‌ ಹತ್ತಿದ್ದರು. ಇದನ್ನು ತಿಳಿಯುತ್ತಿದ್ದಂತೆಯೇ ನಿರ್ವಾಹಕ ತಕರಾರು ಎತ್ತಿದ್ದಾನೆ. ಹುಬ್ಬಳ್ಳಿಯಿಂದ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಲ್ಲಿದ್ದ ಮದ್ಯ ಹಿಡಿದ ಮಹಿಳೆಯರನ್ನು ಬಸ್ಸಿನಿಂದ ಕೆಳಗೆ ಇಳಿಸಿದ್ದ.

ಈ ಮಹಿಳೆಯರು ಹುಬ್ಬಳ್ಳಿಯ ಆರ್ಮಿ ಕ್ಯಾಂಟೀನ್‌ನಿಂದ ಮದ್ಯದ ಬಾಟಲ್ ತರುತ್ತಿದ್ದರು. ತಮಗೆ ಮದ್ಯ ಒಯ್ಯಲು ಅವಕಾಶ ನೀಡದೆ ಇದ್ದದ್ದು ಮಾತ್ರವಲ್ಲ, ಬಸ್ಸಿನಿಂದ ಕೆಳಗೆ ಇಳಿಸಿದ್ದರಿಂದ ಸಿಟ್ಟುಗೊಂಡ ಮಹಿಳೆಯರು ಕೂಡಲೇ ಗದಗ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದರು. ಅವರಿಗೆ ನಿವೃತ್ತ ಯೋಧರ ಸಂಘ ಸಾಥ್ ನೀಡಿದೆ.

ʻʻನಾವು ಈ ಹಿಂದೆ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ. ಅವತ್ತು ಇಲ್ಲದ ರೂಲ್ಸ್ ಇವತ್ಯಾಕೆ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ʻʻಹಾಗಿದ್ದರೆ ಮದ್ಯ ತರಲು ನಮಗೆ ಸರಕಾರ ಯಾವುದಾದರೂ ದಾರಿ ತೋರಿಸಲಿʼʼ ಎಂದು ಹೇಳಿದ್ದಾರೆ.

ʻʻಬಸ್ಸಿನಲ್ಲಿ ಕುಡಿದು ಬಂದವರಿಗೆ ಅವಕಾಶ ಕೊಡ್ತೀರಿ. ಆದ್ರೆ ಮನೆಗೆ ಮದ್ಯದ ಬಾಟಲ್ ತರಲು ಅವಕಾಶ ಯಾಕಿಲ್ಲ. ನಾವೇನು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡಿದ್ದೇವಾ?ʼʼ ಎಂದು ಅವರು ಪ್ರಶ್ನಿಸಿದರು.

ಗದಗ ಟೌನ್ ಪೊಲೀಸ್ ಠಾಣೆ ಮುಂದೆ ಸೇರಿದ ಮಹಿಳೆಯರು ಗದಗ ಡಿಪೋ ಕಂಡಕ್ಟರ್ ವಿರುದ್ಧ ಕಿಡಿ ಕಾರಿದರು.

ನಿವೃತ್ತ ಯೋಧರಿಗೆ ಆರ್ಮಿ ಕ್ಯಾಂಟೀನ್‌ಗಳಲ್ಲಿ ಅಗ್ಗದ ದರದಲ್ಲಿ ಮದ್ಯ ಪೂರೈಕೆ ಮಾಡಲಾಗುತ್ತದೆ. ಅದನ್ನು ನಿವೃತ್ತ ಯೋಧರು, ಇಲ್ಲವೇ ಅವರು ನಿಯೋಜಿಸಿದ ಮನೆಯ ಸದಸ್ಯರು ಬಂದು ಕೊಂಡೊಯ್ಯಲು ಅವಕಾಶವಿದೆ. ಈ ಹಿಂದೆ ಬಸ್ಸು ಸೇರಿದಂತೆ ನಾನಾ ವಾಹನಗಳ ಮೂಲಕ ಅವುಗಳನ್ನು ಮನೆಯವರು ಒಯ್ಯುತ್ತಿದ್ದರು. ಆದರೆ, ಈ ಬಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದುದು ಬಸ್‌ ಕಂಡಕ್ಟರ್‌ಗೆ ತಿಳಿದು ಈ ಕಿರಿಕ್‌ ಉಂಟಾಗಿದೆ. ಬಸ್ಸಿನಲ್ಲಿ ಮದ್ಯ ಸಾಗಾಟಕ್ಕೆ ಅವಕಾಶ ಇಲ್ಲ ಎಂಬ ಮಾರ್ಗಸೂಚಿ ಇದೆಯಾದರೂ ಇದು ಎಲ್ಲ ಸಂದರ್ಭದಲ್ಲಿ ಪಾಲನೆ ಆಗುವುದಿಲ್ಲ.

ಇದನ್ನೂ ಓದಿ: Free Bus Service : 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನ ಬಳಿ ಓಡಿ ಬಂದ ಮಹಿಳೆ, ಇದಕ್ಕಿದೆ ಫ್ರೀ ಬಸ್‌ ಕನೆಕ್ಷನ್‌!

Exit mobile version