ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ (Gruhajyothi scheme) ಉಚಿತ ವಿದ್ಯುತ್ ಯೋಜನೆಯ (Free Electricity) ಅನುಕೂಲ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಕೆ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆಯಾದರೂ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಕ್ರಿಯೆ ಆರಂಭಕ್ಕೆ ಅಡ್ಡಿಯಾಗಿದೆ. ಬೆಂಗಳೂರು ಮತ್ತು ರಾಜ್ಯದ ನಾನಾ ಕಡೆಗಳಲ್ಲಿ ಈ ಸಮಸ್ಯೆಯಾಗಿದ್ದು, ಮೊದಲ ದಿನವೇ ಅರ್ಜಿ ಸಲ್ಲಿಕೆಯ ಸೇವಾ ಸಿಂಧು ಪೋರ್ಟಲ್ (Sewasindhu portal) ಕ್ರ್ಯಾಶ್ ಆಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಯ ಅರ್ಜಿ ಸ್ವೀಕಾರ ಜೂನ್ 15ರಿಂದಲೇ ಆರಂಭವಾಗಬೇಕಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅದು ಮುಂದೆ ಹೋಗಿತ್ತು. ಇದೀಗ ಜೂನ್ 18ರಿಂದ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಆರಂಭದಲ್ಲೇ ಅರ್ಜಿ ಸಲ್ಲಿಸಿಬಿಡೋಣ ಎಂಬ ತರಾತುರಿಯಲ್ಲಿ ಬೆಂಗಳೂರು ಒನ್, ಎಸ್ಕಾಂ ಕಚೇರಿಗಳಿಗೆ ಜನ ಬೆಳಗ್ಗೆಯೇ ಬಂದು ನಿಂತಿದ್ದರು. ಕೆಲವು ಕಡೆ 11 ಗಂಟೆಗೆ ಅರ್ಜಿ ಸಲ್ಲಿಕೆ ವ್ಯವಸ್ಥೆ ಆರಂಭ ಮಾಡಿದರೆ, ಇನ್ನು ಕೆಲವು ಕಡೆ ಮಧ್ಯಾಹ್ನ ಒಂದು ಗಂಟೆ, ಮೂರು ಗಂಟೆ ಎಂದು ಸಬೂಬು ಹೇಳಲಾಗುತ್ತಿದೆ. ಏಕಕಾಲದಲ್ಲಿ ಹಲವು ಕಡೆ ಅರ್ಜಿ ಸಲ್ಲಿಸಲು ಮುಂದಾದ ಕಾರಣಕ್ಕೋ ಏನೋ ಸೇವಾ ಸಿಂಧು ಪೋರ್ಟಲ್ ಕೆಲಸ ಮಾಡುತ್ತಿಲ್ಲ ಎಂಬ ಆಪಾದನೆ ಕೇಳಿಬಂದಿದೆ.
ಪೋರ್ಟಲ್ ಓಪನ್ ಆಗದೆ ಪರದಾಟ
ವಿಲ್ಸನ್ ಗಾರ್ಡನ್‌ನಲ್ಲಿರುವ ಬೆಂಗಳೂರು ಒನ್ ಕಚೇರಿಯಲ್ಲಿ ಸೇವಾ ಸಿಂಧು ಪೋರ್ಟಲ್ ಓಪನ್ ಆಗದೆ ಜನರು ತೊಂದರೆ ಅನುಭವಿಸಿದ್ದಾರೆ. ಇನ್ನು ಸಾಕಷ್ಟು ಜನ ಅರ್ಜಿ ಸಲ್ಲಿಸಲು ಆಗಮಿಸಿದ್ದಾಋೆ. ಆದರೆ, ವೆಬ್ ಸೈಟ್ ಮಾತ್ರ ʻನೋ ಸರ್ವೀಸ್ ಅವೈಲೇಬಲ್ʼ ಎಂದ ತೋರಿಸಲಾಗುತ್ತಿದೆ.
ಹೀಗೆಂದರೆ ಏನು ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಸಾಫ್ಟ್‌ವೇರನ್ನು ಸೇವಾ ಸಿಂಧು ಪೋರ್ಟಲ್‌ಗೆ ಲಿಂಕ್ ಮಾಡಲಾಗಿಲ್ಲವೇ ಅಥವಾ ಲಿಂಕ್ ಮಾಡಿದ್ದರೂ ಕ್ರ್ಯಾಶ್ ಆಗಿ ಸೇವೆ ಇಲ್ಲ ಎಂದು ಹೇಳುತ್ತಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಪೋರ್ಟಲ್ ಓಪನ್ ಆಗದ ಹಿನ್ನೆಲೆಯಲ್ಲಿ ಜನರು ಕಾದು ಕಾದು ಸುಸ್ತಾಗಿ ಮನೆಗೆ ಮರಳುತ್ತಿರುವುದು ಕಂಡುಬಂದಿದೆ. ʻʻಸರ್ವರ್ ಫುಲ್ ಬ್ಯೂಸಿ ಇದೆ. ಫೋನ್ ನಂಬರ್ ಕೊಟ್ಟಿರಿ, ವೆಬ್ ಸೈಟ್ ಓಪನ್ ಆದ್ಮೇಲೆ ಫೋನ್ ಮಾಡ್ತೀವಿʼ ಎಂದು ಸಿಬ್ಬಂದಿ ಹೇಳಿ ಕಳುಹಿಸುತ್ತಿದ್ದಾರೆ.
ರಾಜ್ಯದ ಕೆಲವು ಕಡೆಗಳಲ್ಲಿ ಅರ್ಜಿ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದರೂ ಇನ್ನೂ ಸೇವಾ ಕೇಂದ್ರದವರು ಸೇವೆಯನ್ನೇ ಶುರು ಮಾಡಿಲ್ಲ. ಕೆಲವು ಕಡೆ ಸಿಬ್ಬಂದಿ ಸೇವೆಗೆ ರೆಡಿ ಇದ್ದಾರೆ, ಆದರೆ, ಜನರೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲ್ಲೆಲ್ಲಿ ಅರ್ಜಿ ಸಲ್ಲಿಕೆ? ಹೇಗೆ ಅರ್ಜಿ ಸಲ್ಲಿಕೆ?
ಗೃಹ ಜ್ಯೋತಿ ಅರ್ಜಿ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಸೇವಾ ಸಿಂಧು ಪೋರ್ಟಲ್ನಲ್ಲಿ ಅವಕಾಶ ಮಾಡಿಕೊಟ್ಟಿದೆ. ಇನ್ನುಳಿದಂತೆ ಜನರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾ.ಪಂ. ಕಚೇರಿ, ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಬಹುದು. ಹೀಗೆ ಅರ್ಜಿ ಸಲ್ಲಿಕೆ ಮಾಡುವವರು ಆಧಾರ್ ಕಾರ್ಡ್, ಆರ್ಆರ್ ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡುವುದು ಕಡ್ಡಾಯವಾಗಿದೆ. ವೋಟರ್ ಐಡಿ ಕೂಡ ಯಾವುದಕ್ಕೂ ಇಟ್ಟುಕೊಂಡಿರಿ. ಮನೆ ಬಾಡಿಗೆ ಕರಾರು ಪತ್ರ ಇಲ್ಲದವರಿಗೆ ವೋಟರ್ ಐಡಿ ಬೇಕಾಗುತ್ತದೆ.
ಇದನ್ನೂ ಓದಿ: Gruhajyothi scheme: ಗೃಹ ಜ್ಯೋತಿ ಸ್ಕೀಂ; ಎಲ್ಲ ಗೊಂದಲಗಳಿಗೆ ಇಲ್ಲಿದೆ ನಿಖರ ಉತ್ತರ
ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
1. ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/Sevasindhu/English ಗೆ ಭೇಟಿಕೊಡಿ. ಅಲ್ಲಿ ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ.
2.ನೀವು ಈ ವೆಬ್ಸೈಟ್ನ್ನು ನಿಮ್ಮ ಮೊಬೈಲ್/ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮೂಲಕ ತೆರೆಯಬಹುದು
3. ಹೀಗೆ ಅರ್ಜಿ ಸಲ್ಲಿಸುವ ಹೊತ್ತಲ್ಲಿ, ನಿಮ್ಮೊಂದಿಗೆ ಆಧಾರ್ ಕಾರ್ಡ್, ಆರ್ಆರ್ಕಾರ್ಡ್, ನಿಮ್ಮ ಮನೆಗೆ ಬರುವ ಕರೆಂಟ್ ಬಿಲ್ನಲ್ಲಿ ಇರುವ, ಗ್ರಾಹಕರ ಅಕೌಂಟ್ ಐಡಿ, ವೋಟರ್ ಐಡಿ ಕಾರ್ಡ್ಗಳನ್ನೆಲ್ಲ ಸಿದ್ಧವಾಗಿಟ್ಟುಕೊಳ್ಳಿ. ಗೃಹಜ್ಯೋತಿ ಫಾರ್ಮ್ನಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನೂ ತುಂಬಿ ಸಬ್ಮಿಟ್ ಕೊಡಿ.
4. ಹೆಚ್ಚಿನ ಮಾಹಿತಿ ಬೇಕಿದ್ದರೆ ನಿಮ್ಮ ಫೋನ್ನಲ್ಲಿ, ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಿ.