ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಗೃಹಜ್ಯೋತಿ ಯೋಜನೆಗೆ (Free electricity) ನಾಳೆ (ಜೂ.15) ಅಧಿಕೃತ ಚಾಲನೆ ದೊರೆಯಲಿದೆ. ನಾಳೆಯಿಂದ ನೀವು ಅರ್ಜಿ ಸಲ್ಲಿಸಬಹುದು.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಜ್ಯೋತಿ ಯೋಜನಯ ಫಲಾನುಭವಿಗಳಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮಾಸಿಕ 200 ಯುನಿಟ್ ಒಳಗಿನ ವಿದ್ಯುತ್ ಬಳಕೆ ಮಾಡುವವರು ಅರ್ಜಿ ಸಲ್ಲಿಸಬಹುದಾಗಿದೆ.
ಕಂಪ್ಯೂಟರ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಜೂನ್ 15ರಿಂದ ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಕೇವಲ 15 ದಿನ ಇಂಧನ ಇಲಾಖೆ ಅವಕಾಶ ನೀಡಿದೆ. ರಾಜ್ಯದಲ್ಲಿ ಒಟ್ಟು 2.14 ಕೋಟಿ ಜನ ಫಲಾನುಭವಿಗಳು ಇದ್ದಾರೆ. ದಿನಕ್ಕೆ 5ರಿಂದ 10 ಲಕ್ಷ ಅರ್ಜಿಗಳ ಸಲ್ಲಿಕೆಗೆ ಅವಕಾಶವಿದೆ.
ಯಾವುದೇ ರೀತಿಯ ತೊಂದರೆಗಳು ಆಗದಂತೆ ಇಂಧನ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಹೀಗೆ ಐದು ವಿಭಾಗಗಳಲ್ಲಿ ಜಾರಿ ಮಾಡಿಕೊಳ್ಳಲಾಗುತ್ತಿದೆ. ಹೊಸ ಮನೆ ಬಾಡಿಗೆದಾರರಿಗೆ ಸಹ ಗೃಹಜ್ಯೋತಿ ಭಾಗ್ಯವಿದ್ದು, ಹೊಸ ಮನೆಗೆ 53 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. 53 ಯೂನಿಟ್ ಜೊತೆ 10% ಪರ್ಸೆಂಟ್ ಅಂದರೆ 58 ಯೂನಿಟ್ ವಿದ್ಯುತ್ ಉಚಿತವಾಗಿದೆ.
ಅರ್ಜಿ ಸಲ್ಲಿಸುವವರು ಆರ್‌ಆರ್ ನಂಬರ್ ಜೊತೆಗೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದ್ದು, ಇವೆರಡರಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು. ಅರ್ಜಿ ಸಲ್ಲಿಕೆಯನ್ನು ಇಂಧನ ಇಲಾಖೆ ಸರಳೀಕರಣ ಮಾಡಿದೆ. ಹಳ್ಳಿಗಳಲ್ಲಿ ಹಾಗೂ ನಗರ ಭಾಗಗಳಲ್ಲಿ ಬಾಡಿಗೆ ಇರುವವರ ದೃಷ್ಟಿಯಿಂದ ಸರಳೀಕರಣ ಮಾಡಲಾಗಿದೆ.
ಇದನ್ನೂ ಓದಿ: Congress Guarantee : ನಿಮಗೆ ಫ್ರೀ ಕರೆಂಟ್ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಸರಳ ಮಾರ್ಗ