Site icon Vistara News

Free Electricity : ಗೃಹ ಜ್ಯೋತಿ ನಿಯಮ ಬದಲು ; 10% ಬದಲು 10 ಯುನಿಟ್‌ ಹೆಚ್ಚುವರಿ; ಲಾಭಾನಾ? ನಷ್ಟಾನಾ?

Free Electricity rules Change

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಒಂದಾದ ಗೃಹ ಜ್ಯೋತಿ (Gruhajyoti scheme) ಉಚಿತ ವಿದ್ಯುತ್‌ ಯೋಜನೆಯ (Free Eelectricity Scheme) ನಿಯಮಾವಳಿಗಳಲ್ಲಿ ಮಹತ್ವದ ಬದಲಾವಣೆ (Gruhajyoti Rules Change) ಮಾಡಲಾಗಿದೆ. ಈಗಿನ ನಿಯಮದಂತೆ ಯೋಜನೆ ಆರಂಭವಾದ ಸಂದರ್ಭದಲ್ಲಿ ಬಳಸುತ್ತಿದ್ದ ಸರಾಸರಿ ವಿದ್ಯುತ್‌ಗೆ ಹೆಚ್ಚುವರಿ 10% ಯುನಿಟ್‌ಗಳನ್ನು ಸೇರಿಸಿ ಉಚಿತ ವಿದ್ಯುತ್‌ ನೀಡಲಾಗುತ್ತಿತ್ತು. ಇನ್ನು ಮುಂದೆ ಬಳಸುತ್ತಿದ್ದ ಯುನಿಟ್‌ಗಳಿಗೆ ಹೆಚ್ಚುವರಿ 10 ಯುನಿಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಹತ್ವದ ಯೋಜನೆಯಿಂದ ಕಡಿಮೆ ವಿದ್ಯುತ್‌ ಬಳಸುತ್ತಿದ್ದ ಕುಟುಂಬಗಳಿಗೆ ಅನುಕೂಲವಾಗಲಿದೆ.

ಶೇಕಡಾವಾರು 10ರಷ್ಟು ಬದಲು 10 ಯುನಿಟ್‌ ಫ್ರೀ ವಿದ್ಯುತ್ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಂಸದೀಯ ವ್ಯವಹಾರಗಳ ಸಚಿವಎಚ್‌.ಕೆ.ಪಾಟೀಲ್‌ ಮಾಧ್ಯಮದವರಿಗೆ ಈ ಮಾಹಿತಿ ನೀಡಿದರು.

ಈ ಮೊದಲು ಗೃಹ ಜ್ಯೋತಿ ಯೋಜನೆ ಅಡಿ ಬಳಸಿದ ಸರಾಸರಿ ಯುನಿಟ್​ಗಿಂತ ಶೇ. 10ರಷ್ಟು ಹೆಚ್ಚುವರಿ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈಗ ಶೇಕಡವಾರು ಬದಲಾಗಿ ಸರಾಸರಿಗಿಂತ 10 ಯುನಿಟ್ ನೀಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: Free Electricity : ಸರ್ಕಾರಿ ಶಾಲೆಗೂ 200 ಯುನಿಟ್‌ ಉಚಿತ ವಿದ್ಯುತ್!

ಈ ಬದಲಾವಣೆಯ ಲಾಭ-ನಷ್ಟ ಏನು?

ಪ್ರಸಂಗ 1: ಒಂದು ಕುಟುಂಬ ತಿಂಗಳಿಗೆ ಸರಾಸರಿ 200 ಯುನಿಟ್‌ ಬಳಸುತ್ತಿದ್ದರೆ ಹಿಂದಿನ ನಿಯಮದ ಪ್ರಕಾರ ಶೇಕಡಾ ಹತ್ತು ಹೆಚ್ಚುವರಿ ಎಂದರೆ 220 ಯುನಿಟ್‌ವರೆಗೆ ಉಚಿತ ವಿದ್ಯುತ್‌ ದೊರೆಯುತ್ತಿತ್ತು. 220 ಯುನಿಟ್‌ವರೆಗಿನ ಬಳಕೆಗೆ ಕರೆಂಟ್‌ ಬಿಲ್‌ ಬರುತ್ತಿರಲಿಲ್ಲ. ಇನ್ನು ಮುಂದೆ ಸರಾಸರಿ 200 ಯುನಿಟ್‌ ಬಳಸುತ್ತಿದ್ದವರಿಗೆ ಗರಿಷ್ಠ 210 ಯುನಿಟ್‌ವರೆಗೆ ಅವಕಾಶವಿದೆ. ಯುನಿಟ್‌ ಬಳಕೆ 210 ದಾಟಿದರೆ ವಿದ್ಯುತ್‌ ಬಿಲ್‌ ಕಟ್ಟಬೇಕಾಗುತ್ತದೆ.

ಪ್ರಸಂಗ 2: ಒಂದು ಕುಟುಂಬ ತಿಂಗಳಿಗೆ ಸರಾಸರಿ 100 ಯುನಿಟ್‌ ಬಳಸುತ್ತಿದ್ದರೆ ಹಿಂದಿನ ನಿಯಮದ ಪ್ರಕಾರ ಶೇಕಡಾ ಹತ್ತು ಹೆಚ್ಚುವರಿ ಎಂದರೆ 110 ಯುನಿಟ್‌ವರೆಗೆ ಉಚಿತ ವಿದ್ಯುತ್‌ ದೊರೆಯುತ್ತಿತ್ತು. 110 ಯುನಿಟ್‌ವರೆಗಿನ ಬಳಕೆಗೆ ಕರೆಂಟ್‌ ಬಿಲ್‌ ಬರುತ್ತಿರಲಿಲ್ಲ. ಈ ಪ್ರಕರಣದಲ್ಲಿ ಶೇಕಡಾ 10 ಮತ್ತು 10 ಯುನಿಟ್‌ ಒಂದೇ ಆಗುವುದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಪ್ರಸಂಗ 3: ಒಂದು ಬಡ ಕುಟುಂಬ ತಿಂಗಳಿಗೆ ಸರಾಸರಿ 50 ಯುನಿಟ್‌ ಬಳಸುತ್ತಿತ್ತು ಎಂದಾದರೆ ಈಗಿನ ನಿಯಮ ಪ್ರಕಾರ ಶೇ. 10 ಹೆಚ್ಚುವರಿ ಎಂದರೆ 55 ಯುನಿಟ್‌ವರೆಗೆ ಉಚಿತ ವಿದ್ಯುತ್‌ ದೊರೆಯುತ್ತದೆ. ಅದಕ್ಕಿಂತ ಹೆಚ್ಚು ಕರೆಂಟ್‌ ಖರ್ಚಾದರೆ ಹಣ ಪಾವತಿಸಬೇಕಾಗಿತ್ತು. ಹೊಸ ನಿಯಮದ ಪ್ರಕಾರ, 50 ಯುನಿಟ್‌ ಬಳಸುತ್ತಿದ್ದವರಿಗೆ 60 ಯುನಿಟ್‌ ಫ್ರೀ ಸಿಗಲಿದೆ. ಹೀಗಾಗಿ ಬಡವರಿಗೆ ಅನುಕೂಲವಾಗಲಿದೆ.

ಪ್ರಸಂಗ 4: ಒಂದು ಕುಟುಂಬ ಸರಾಸರಿ ಕೇವಲ 25 ಯುನಿಟ್‌ ಬಳಸುತ್ತಿದ್ದರೆ 27 ಯುನಿಟ್‌ಗೆ ಹೆಚ್ಚಳವಾದರೆ ಬಿಲ್‌ ಬರುತ್ತಿತ್ತು. ಮುಂದೆ 25 ಯುನಿಟ್‌ ಸರಾಸರಿ ಇರುವ ಕುಟುಂಬಕ್ಕೆ 35 ಯುನಿಟ್‌ ಫ್ರೀ ಆಗಿ ಸಿಗಲಿದೆ.

ಮುಂದಿನ ತಿಂಗಳ ಬಿಲ್‌ನಿಂದಲೇ ಈ ಬದಲಾವಣೆ ಜಾರಿಗೆ ಬರಲಿದ್ದು, ಸರ್ಕಾರಕ್ಕೆ ಸಣ್ಣ ಪ್ರಮಾಣದ ಹೊರೆಯಾದರೂ ಬಡವರಿಗೆ ಲಾಭವಾಗಲಿದೆ.

4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ

ಇನ್ನು ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಧರಿಸಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆಯಿದೆ. ಶ್ಯೂರಿಟಿ ನೀಡಬೇಕೆಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ ಇದೀಗ 4450 ಕೋಟಿ ರೂ. ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಿದೆ ಎಂದು ಎಚ್​ಕೆ ಪಾಟೀಲ್ ಮಾಹಿತಿ ನೀಡಿದರು.

ವಿದ್ಯುತ್ ಸರಬರಾಜು ಕಂಪನಿಗಳು ಯಪಿಸಿಎಲ್ ನವರಿಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆಯಾಗಿದೆ. ಹಾಗೇ ಸೆಂಟ್ರಲ್ ಇಆರ್.ಸಿಯವರ ಆದೇಶದ ಕುರಿತು ಚರ್ಚೆಯಾಗಿದ್ದು, ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ. ಲೇಟ್ ಪೇಮೆಂಟ್ ಸರ್ಚಾರ್ಜ್ 1348 ಕೋಟಿ + 419 ಕೋಟಿ ರೂ. ನೀಡಬೇಕಾಗಿದೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

Exit mobile version