ಬೆಂಗಳೂರು: ರಾಜ್ಯ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಉಚಿತ ವಿದ್ಯುತ್ ಯೋಜನೆ (Free Electricity) ಯಾದ ಗೃಹಜ್ಯೋತಿ ಸ್ಕೀಮ್ (Gruhajyothi scheme) ಅನುಷ್ಠಾನಕ್ಕೆ ಅರ್ಜಿಯನ್ನೇನೋ ಕರೆದಿದೆ. ಆದರೆ, ಅರ್ಜಿ ಸ್ವೀಕಾರದ ಎರಡನೇ ದಿನವಾದ ಸೋಮವಾರವೂ ತಾಂತ್ರಿಕ ಸಮಸ್ಯೆ ಮುಂದುವರಿದಿದೆ. ಜೂನ್ 15ರಂದು ಆರಂಭವಾಗಬೇಕಾಗಿದ್ದ ಅರ್ಜಿ ಸ್ವೀಕಾರ ಮೂರು ದಿನ ತಡವಾಗಿ ಅಂದರೆ ಜೂನ್ 18ರಂದು ಆರಂಭಗೊಂಡಿತ್ತು. ಮೊದಲ ದಿನ ಆರಂಭದಲ್ಲಿ ಭಾರಿ ಸಮಸ್ಯೆಯಾಗಿ ಬಳಿಕ ಪರಿಸ್ಥಿತಿ ಸುಧಾರಿಸಿತ್ತು. ಅಂತಿಮವಾಗಿ ದಿನದ ಕೊನೆಗೆ 55,000 ಮಂದಿ ಅರ್ಜಿ ಸಲ್ಲಿಸಲು ಶಕ್ತರಾಗಿದ್ದಾರೆ. ಎರಡನೇ ದಿನವಾದ ಬೆಳಗ್ಗಿನಿಂದಲೇ ಜನರು ಅರ್ಜಿ ಸಲ್ಲಿಸಲು ಧಾವಂತ ತೋರುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರುವ ಸೇವಾ ಸಿಂಧು ಪೋರ್ಟಲ್ (Sewa sindhu portal) ಒಂದೋ ಸ್ಲೋ ಆಗಿದೆ, ಇಲ್ಲವೇ ಡೆಡ್ ಆಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ (Congress Guarantee) ಒಂದು ಕುಟುಂಬಕ್ಕೆ ಗರಿಷ್ಠ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿತ್ತು. ಸರ್ಕಾರ ರಚನೆಯಾದ ಬೆನ್ನಿಗೇ ಕೆಲವೊಂದು ಷರತ್ತುಗಳೊಂದಿಗೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಇದೀಗ ಅದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಬೆಂಗಳೂರು ಒನ್ ಕೇಂದ್ರಗಳು, ಕರ್ನಾಟಕ ಒನ್ ಮತ್ತು ಎಸ್ಕಾಂಗಳ ಸ್ಥಳೀಯ ಕಚೇರಿಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ, ಕೆಲವು ಕಡೆ ಪೋರ್ಟಲ್ ತೆರೆದುಕೊಳ್ಳದೆ, ಇನ್ನು ಕೆಲವು ಕಡೆ ನಿಧಾನಗತಿಯ ಪ್ರಕ್ರಿಯೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನ ಕೆಲವು ಕಡೆ ಸೈಟ್ ಸಮಸ್ಯೆ ಎದುರಾಗಿದ್ದರೆ, ಕೆಲವು ಕಡೆ ಸರಾಗವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಎಂ.ಜಿ ರಸ್ತೆಯ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ಮತ್ತೆ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಎಇ, ಎಇಇ, ಸೂಪರಿಂಟೆಂಡೆಂಟ್ ಎಂಜಿನಿಯರ್ ಈಸ್ಟ್ ಸರ್ಕಲ್ (ಎಸ್ ಇಇ) ಅವರು ಪರಿಶೀಲನೆ ನಡೆಸಿದರು. ಸರಿ ಹೋಗಬಹುದು ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
ಬೆಳಗಾವಿಯಲ್ಲಿ ಕೇಂದ್ರದಲ್ಲಿ ಜನವೋ ಜನ
ಬೆಳಗಾವಿ ಅಶೋಕ್ ನಗರದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದಾರೆ. ಜನರನ್ನು ಮೂರು ಮೂರು ಲೈನ್ ಮಾಡಿ ನಿಲ್ಲಿಸಲಾಗಿದೆ. ಆಗಾಗ ಸರ್ವರ್ ಡೌನ್ ಆಗ್ತಿದೆ ಎನ್ನುವುದು ಬಿಟ್ಟು ಬೇರಾವ ಸಮಸ್ಯೆ ಇಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಮೈಸೂರು: ಗೃಹ ಜ್ಯೋತಿ ನೋಂದಣಿ ಆರಂಭ
ಮೈಸೂರಿನಲ್ಲಿ ಗೃಹಜ್ಯೋತಿ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡನೇ ದಿನವೂ ಕರ್ನಾಟಕ ಒನ್ ಕೇಂದ್ರದತ್ತ ಗ್ರಾಹಕರು ಧಾವಿಸುತ್ತಿದ್ದಾರೆ.
ʻʻಹಿಂದೆಯೂ ಭಾಗ್ಯ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿತ್ತು. ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಲ್ಲಿ ಈಗಾಗಲೇ ಉಚಿತ ವಿದ್ಯುತ್ ಸಿಗುತ್ತಿದೆ. ನಮ್ಮಲ್ಲಿ ಎಷ್ಟು ದಿನ ಫ್ರೀ ಕೊಡ್ತಾರೋ ಗೊತ್ತಿಲ್ಲ. ಯೋಜನೆಯಿಂದ ಜನರಿಗೆ ಅನುಕೂಲ ಆಗುತ್ತದೆʼʼ ಎಂದು ಜಯ ನಗರದ ಕರ್ನಾಟಕ ಒನ್ ಕೇಂದ್ರದ ಬಳಿ ವಿದ್ಯುತ್ ಗ್ರಾಹಕರೊಬ್ಬರು ಹೇಳಿದರು.
ಯಾದಗಿರಿಯಲ್ಲಿ ಗೃಹ ಜ್ಯೋತಿ ಅರ್ಜಿ ಸಲ್ಲಿಕೆ ಬೆಳಗ್ಗೆಯಿಂದಲೇ ಆರಂಭ
ಯಾದಗಿರಿಯ ತಹಶಿಲ್ದಾರ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಬೆಳಗ್ಗಿನಿಂದಲೇ ಅರ್ಜಿ ಸಲ್ಲಿಕೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಂದ ಆಧಾರ್ ಕಾರ್ಡ್, ವಿದ್ಯುತ್ ಖಾತೆ ಸಂಖ್ಯೆ ತೊರಿಸಿ ಅರ್ಜಿ ಸಲ್ಲಿಸಲಾಗುತ್ತಿದೆ.
ಭಾನುವಾರ ಮೊದಲ ದಿನ ಸರ್ವರ್ ಸಮಸ್ಯೆಯಿಂದ ಕೇವಲ 34 ಅರ್ಜಿ ಸಲ್ಲಿಕೆಯಾಗಿತ್ತು. ಇಲ್ಲಿ ಯಾವುದೇ ಗೊಂದಲವಾಗದಂತೆ ಟೋಕನ್ ವಿತರಣೆ ಮಾಡಿ ಅರ್ಜಿ ಸಲ್ಲಿಕೆ ನಡೆಯುತ್ತಿದೆ.
ಫಲಾನುಭವಿಗಳು ಏನು ಮಾಡಬೇಕು?
-ಫಲಾನುಭವಿಗಳು ಆಧಾರ್ ನಂಬರ್ ಜೊತೆ ಆರ್ ಆರ್ ನಂಬರ್ ಕಡ್ಡಾಯವಾಗಿ ಜೋಡಣೆ ಮಾಡಬೇಕು.
– ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
-ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಹ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು.
-ಬೆಸ್ಕಾಂನ ಸ್ಥಳೀಯ ಕಛೇರಿಯಲ್ಲಿ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
-ಸೇವಾ ಸಿಂಧು ವೆಬ್‌ಸೈಟ್ https://sevasindhugs.karnataka.gov.in/gruhajyothi
ಯಾವ ದಾಖಲೆ ಬೇಕು?
-ಅರ್ಜಿ ಸಲ್ಲಿಸುವಾಗ ಮನೆಯ ಕರಾರು ಪತ್ರ ಅಥವಾ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ಕಡ್ಡಾಯ
-ಇಷ್ಟರಲ್ಲಿ ಯಾವುದಾದರೂ ಒಂದು ಇದ್ದರೆ ಗೃಹಜ್ಯೋತಿ ಯೋಜನೆ ಪಡೆಯಬಹುದು.
-ಹೆಚ್ಚಿನ ಮಾಹಿತಿಗಾಗಿ 1912 ಗೆ 24/7 ಕರೆ ಮಾಡಬಹುದು.
-ಗೃಹಜ್ಯೋತಿ ಯೋಜನೆ ಅಡಿ ಒಟ್ಟು 2.14 ಕೋಟಿ ಫಲಾನುಭವಿನಗಳಿಗೆ ಉಚಿತ ವಿದ್ಯುತ್ ಸಿಗಲಿದೆ.
ಇದನ್ನೂ ಓದಿ : Buffalo attack: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಟ್ಟಾಡಿಸಿ ಇರಿದು ಕೊಂದ ದೇವರ ಕೋಣ