Site icon Vistara News

Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್‌: ಏನಿದು ಸರ್ಕಾರದ 53 ಯುನಿಟ್‌ ಸೂತ್ರ?

free electricity to new homes and new tenants also

#image_title

ಬೆಂಗಳೂರು: ಉಚಿತ ವಿದ್ಯುತ್‌ ಯೋಜನೆಗೆ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಿದೆ. ಜುಲೈಯಲ್ಲಿ ಬಳಸುವ ವಿದ್ಯುತ್‌ಗೆ ಆಗಸ್ಟ್‌ನಲ್ಲಿ ಬರುವ ಬಿಲ್‌ನಿಂದ ಯೋಜನೆ ಅನ್ವಯ ಆಗುತ್ತದೆ. ಆದರೆ ಈ ನಡುವೆ, ಹೊಸದಾಗಿ ಕಟ್ಟಿದ ಮನೆಗಳಿಗೆ ಹಾಗೂ ಯಾವುದೇ ಮನೆಗೆ ಹೊಸದಾಗಿ ಬಾಡಿಗೆ ಬರುವವರಿಗೆ ಹೇಗೆ ಅನ್ವಯ ಎಂಬ ಗೊಂದಲ ಇತ್ತು. ಇದೀಗ ಸರ್ಕಾರ ಇದಕ್ಕೊಂದು ಸೂತ್ರವನ್ನು ಕಂಡುಕೊಂಡಿದೆ.

ಹೊಸದಾಗಿ ಮನೆಯನ್ನು ಕಟ್ಟಿದಾಗ, ಅದು 12 ತಿಂಗಳು ವಿದ್ಯುತ್‌ ಬಳಸಿರುವುದಲ್ಲವಾದ್ಧರಿಂದ ಅದಕ್ಕೆ ವಾರ್ಷಿಕ ಸರಾಸರಿ ನಿಗದಿಪಡಿಸುವುದು ಅಸಾಧ್ಯ. ಅಂತಹ ಸಂದರ್ಭದಲ್ಲಿ ಉಚಿತ ವಿದ್ಯುತ್‌ ಲಭ್ಯ ಹೇಗೆ ಎಂಬ ಪ್ರಶ್ನೆ ಇತ್ತು. ಎರಡನೆಯದಾಗಿ, ಹಳೆಯ ಮನೆಯೊಂದಕ್ಕೆ ಹೊಸದಾಗಿ ಬಾಡಿಗೆದಾರರು ಬಂದಾಗಿನ ಸಮಸ್ಯೆ. ಹೊಸ ಬಾಡಿಗೆದಾರರು ತಮ್ಮ ಆಧಾರ್‌ ಅಥವಾ ಅಗ್ರಿಮೆಂಟ್‌ ನೀಡಿ ನೋಂದಣಿ ಮಾಡಿಕೊಂಡಾಗಲೂ ಹಳೆಯ ಬಳಕೆ ಇತಿಹಾಸ ಅವರ ಹೆಸರಿನಲ್ಲಿ ಇರುವುದಿಲ್ಲ. ಇವೆರಡೂ ಸಮಸ್ಯೆ ಕುರಿತು ಸ್ಪಷ್ಟೀಕರಣವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್‌ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜೆ. ಜಾರ್ಜ್‌, ಹೊಸ ಮನೆಗೆ ಬಂದವರಿಗೆ ಹಳೆಯ ಬಳಕೆ ದಾಖಲೆ ಇರುವುದಿಲ್ಲ. ಹಾಗಾಗಿ ರಾಜ್ಯದ ಒಟ್ಟಾರೆ ಗೃಹಬಳಕೆ ವಿದ್ಯುತ್‌ ಬಳಕೆಯ ಸರಾಸರಿ 53 ಯುನಿಟ್‌ ನಿಗದಿಪಡಿಸಲಾಗಿದೆ. ಅಂದರೆ ರಾಜ್ಯದ ಒಟಾರೆ ಗೃಹಬಳಕೆ ವಿದ್ಯುತ್‌ ಬಳಕೆಯ ಸರಾಸರಿ 53 ಯುನಿಟ್‌ ಇದೆ. ಹೊಸದಾಗಿ ಮನೆ ಕಟ್ಟುವವರಿಗೆ ಹಾಗೂ ಹೊಸದಾಗಿ ಬಾಡಿಗೆಗೆ ಬರುವವರಿಗೆ 53 ಯುನಿಟ್‌ವರೆಗೆ ವಿದ್ಯುತ್‌ ಉಚಿತವಾಗಿರಲಿಲ್ಲ. ಇದರ ಜತೆಗೆ ಶೇ.10 ಅಂದರೆ ಅಂದಾಜು 58 ಅಥವಾ 59 ಯುನಿಟ್‌ವರೆಗೂ ವಿದ್ಯುತ್‌ ಬಿಲ್‌ ಪಾವತಿ ಮಾಡಬೇಕಾಗಿಲ್ಲ ಎಂದಿದ್ದಾರೆ.

ಆದರೆ 58 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದರೆ 200 ಯುನಿಟ್‌ವರೆಗೂ ಇದರ ನಡುವಿನ ವ್ಯತ್ಯಾಸದ ಯುನಿಟ್‌ಗೆ ಬಿಲ್‌ ಪಾವತಿಸಬೇಕು. ಅಂದರೆ 59ನೇ ಯುನಿಟ್‌ನಿಂದ 200 ಯುನಿಟ್‌ವರೆಗೆ 141 ಯುನಿಟ್‌ ಬಳಕೆಗೆ ಸಾಮಾನ್ಯ ಸ್ಲಾಬ್‌ಗಳಂತೆಯೇ ಪಾವತಿ ಮಾಡಬೇಕಾಗುತ್ತದೆ. ಆದರೆ 200ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದರೆ ಪೂರಾ ಬಿಲ್‌ ಪಾವತಿ ಮಾಡಬಾಕಾಗುತ್ತದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

53 ಯುನಿಟ್‌ ಯಾಕೆ ನಿಗದಿಪಡಿಸಿದರಿ? 100 ಯುನಿಟ್‌ಗೆ ಏಕೆ ನಿಗದಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಕೋಪಗೊಂಡ ಕೆ.ಜೆ. ಜಾರ್ಜ್‌, ಅದನ್ನು ನೀವು ಕೇಳುವಂತಿಲ್ಲ, ಸಂಪುಟದ ನಿರ್ಣಯ ಇದು. ಈ ಹಿಂದೆ ಭಾಗ್ಯಜ್ಯೋತಿ ಸೇರಿ ಅನೇಕ ಯೋಜನೆಗಳನ್ನು ಸರ್ಕಾರವೇ ಜಾರಿ ಮಾಡಿದೆ ಎಂದರು.

ಇದನ್ನೂ ಓದಿ: Free Bus Service: ಗದಗದಲ್ಲಿ ‘ಒರಿಜಿನಲ್‌’ ಕಿರಿಕ್‌; ಫ್ರೀ ಬಸ್‌ಗೆ ಮೊಬೈಲ್‌ ಡಾಕ್ಯುಮೆಂಟ್‌ ಎಲ್ಲ ಆಗೋಲ್ಲ!

ಚುನಾವಣೆಗೆ ಮುನ್ನ ಸಂಪೂರ್ಣ 200 ಯುನಿಟ್‌ ಉಚಿತ ಎಂದು ಹೇಳಿ ಈಗ ನಿಬಂಧನೆ ವಿಧಿಸುತ್ತಿರುವುದರ ಕುರಿತು ಬಿಜೆಪಿ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ, ಬಿಜೆಪಿಯವರಿಗೆ ಈ ಯೋಜನೆ ಜಾರಿ ಇಷ್ಟವಿಲ್ಲ. ಅದಕ್ಕಾಗಿ ಅವರಿಗೆ ಉತ್ತರ ನೀಡುವುದಿಲ್ಲ. ಜನರು ಎಷ್ಟು ಬಳಸುತ್ತಿದ್ದಾರೆಯೋ ಅದಕ್ಕೆ ಶೇ.10 ಸೇರಿಸಿ ಕೊಡುತ್ತಿದ್ದೇವೆ ಎಂದರು.

ವಿದ್ಯುತ್‌ ಬಿಲ್‌ ಹೆಚ್ಚಳ ಆಗಿದ್ದು ನಮ್ಮ ಅವಧಿಯಲ್ಲ. ಮೇ 12ಕ್ಕೆ ಪರಿಷ್ಕೃತ ನೀಡಿದ್ದಾರೆ. ಅದರ ಪ್ರಕಾರ ಪ್ರತಿ ಯುನಿಟ್‌ಗೆ 70 ಪೈಸೆಯನ್ನು ಹೆಚ್ಚಿಸಿ, ಏಪ್ರಿಲ್‌ನಿಂದ ಅನ್ವಯ ಮಾಡಿದ್ದಾರೆ. ಹಿಂದಿನ ಸರ್ಕಾರ ಇದಕ್ಕೆ ಅನುಮತಿ ನೀಡಿದೆ. ಇದಕ್ಕೆ ಯಾವ ಸಮರ್ಥನೆಯನ್ನು ಸರ್ಕಾರ ನೀಡಿದೆ ಎನ್ನುವುದನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಹಿಂದಿನ ಸರ್ಕಾರ, ಕೆಇಆರ್‌ಸಿ ಆದೇಶವನ್ನು ತಡೆ ಹಿಡಿದಿಲ್ಲ. ಸುಮ್ಮನೆ ಇದ್ದುಬಿಡಿ ಎಂದು ತಿಳಿಸಿದ್ದರು. ಈಗ ಏಕಾಏಕಿ ಕೆಇಆರ್‌ಸಿ ಆದೇಶವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಅವರು ಮಾಡಿದ ಆದೇಶವನ್ನು ಒಪ್ಪಬೇಕು ಎನ್ನುವುದು ಕಾಯ್ದೆಯಲ್ಲಿದೆ. ನಾವು ಮತ್ತೆ ಕೆಇಆರ್‌ಸಿಯನ್ನು ಮನವಿ ಮಾಡಬೇಕಿದೆ. ಗ್ಯಾರಂಟಿ ಯೋಜನೆಯ ಹೊರೆಯನ್ನು ಯಾವುದೇ ಗ್ರಾಹಕರ ಮೇಲೆ ಹೊರಿಸುತ್ತಿಲ್ಲ. ಸರ್ಕಾರವೇ ಇದನ್ನು ಸಂಪೂರ್ಣವಾಗಿ ಭರಿಸುತ್ತದೆ ಎಂದರು.

ಮರುಪರಿಶೀಲನೆಗೆ ಅವಕಾಶ:
ಈ ಹಿಂದೆ ಕೇಂದ್ರ ಸರ್ಕಾರವು ದೇಶಿ ಕಲ್ಲಿದ್ದಲು ಜತೆಗೆ ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಮಿಶ್ರಣ ಮಾಡುವಂತೆ ತಿಳಿಸಿತ್ತು. ಅದಕ್ಕಾಗಿ ದರ ಹೆಚ್ಚಳವಾಗಿದೆ. ಎರಡನೆಯದಾಗಿ, ವಿದ್ಯುತ್‌ ಖರೀದಿ ಅಗ್ರಿಮೆಂಟ್‌. ಈ ಹಿಂದೆ ವಿದ್ಯುತ್‌ ಕೊರತೆ ಇದ್ದಾಗ ಅಗ್ರಿಮೆಂಟ್‌ ಆಗಿದೆ. ಉಡುಪಿ ಘಟಕವು ನ್ಯಾಯಾಲಯಕ್ಕೆ ತೆರಳಿದ್ದರಿಂದ ಅವರಿಗೆ 1400 ಕೋಟಿ ರೂ. ನಾವು ಅವರಿಗೆ ನೀಡಬೇಕಾಯಿತು. ಇದರಿಂದ ಹೊರೆ ಹೆಚ್ಚಾಯಿತು. ಈಗ ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡುವುದು ಬೇಕಿಲ್ಲ ಎಂದು ಆದೇಶ ಬಂದಿದೆ. ಈಗ ಮತ್ತೆ ಪರಿಶೀಲನೆ ಮಾಡುತ್ತೇವೆ. ಹಾಗೂ 1400 ಕೋಟಿ ರೂ> ಹಣವನ್ನು ಹಂತಹಂತವಾಗಿ ಕೊಟ್ಟುಕೊಂಡು ಬಂದಿದ್ದರೆ ಒಟ್ಟಿಗೆ ಹೊರೆ ಆಗುತ್ತಿರಲಿಲ್ಲ.

ಈ ಹಿಂದೆ ನಾಲ್ಕು ಸ್ಲಾಬ್‌ ಇತ್ತು, ಅದನ್ನು ಕೆಇಆರ್‌ಸಿ ಎರಡು ಸ್ಲಾಬ್‌ಗೆ ಇಳಿಕೆ ಮಾಡಿದೆ. 0-50, 51-100, 101-200 ಹಾಗೂ 200 ಮೇಲ್ಪಟ್ಟು ದರ ವಿಧಿಸಲಾಗುತ್ತಿತ್ತು. ಈಗ 0-100 ಹಾಗೂ 100ಕ್ಕಿಂತ ಮೇಲ್ಪಟ್ಟು ಎರಡನೇ ಸ್ಲಾಬ್‌ ಮಾಡಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಅನುಕೂಲ ಆಗುತ್ತದೆ ಎಂದು ಮಾಡಿದ್ದಾರೆ. ಅದನ್ನು ಕೆಇಆರ್‌ಸಿಯವರೇ ಮಾಡಿರುವುದರಿಂದ ಅವರಿಗೆ ಮನವಿ ಮಾಡಬಹುದಷ್ಟೆ ಎಂದರು.

ಇದನ್ನೂ ಓದಿ: Free Bus Service: ಕೊನೆಗೂ ಬಗೆಹರಿದ ʼಒರಿಜಿನಲ್‌ʼ ಕಿರಿಕ್; ‌ಇ-ಕಾಪಿ ಇದ್ದರೂ ಸಾಕು, ಬರಲಿದೆ ಹೊಸ ಆದೇಶ!

Exit mobile version