Site icon Vistara News

ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧೀವಾದಿ ಡಾ.ಮೀರಾತಾಯಿ ಕೊಪ್ಪಿಕರ್ ನಿಧನ

ಡಾ.ಮೀರಾತಾಯಿ ಕೊಪ್ಪಿಕರ್

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧೀವಾದಿ ಹಾಗೂ ಮುಧೋಳ ನಗರದ ರುಕ್ಮಿಣಿಬಾಯಿ ವಾತ್ಸಲ್ಯಧಾಮದ ಹಿರಿಯಚೇತನ ಡಾ.ಮೀರಾತಾಯಿ ಕೊಪ್ಪಿಕರ್ (96) ವಯೋಸಹಜ ಕಾಯಿಲೆಯಿಂದ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನಿಧನರಾದರು.

ಮಹಾತ್ಮ ಗಾಂಧಿ ಅವರ ಅನುಯಾಯಿಯಾದ ಇವರು ಗಾಂಧಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ಹೋರಾಟದಿಂದ ಪ್ರಭಾವಿತರಾಗಿ ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಭಾಗಿಯಾಗಿದ್ದರು. ವಾತ್ಸಲ್ಯಧಾಮದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಮೂಲತಃ ಹುಬ್ಬಳ್ಳಿ-ಧಾರವಾಡ ಮೂಲದವರಾದ ಮೀರಾತಾಯಿ, ಕಳೆದ 45 ವರ್ಷದಿಂದ ಆಶ್ರಮದಲ್ಲಿ ನೆಲೆಸಿದ್ದರು. 2021-22ರಲ್ಲಿ ಇವರಿಗೆ ಗಾಂಧಿ ಪುರಸ್ಕಾರ ಲಭಿಸಿತ್ತು. 2008-09 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಆ ವೇಳೆ ಅಂದಿನ ಸಿಎಂ ಯಡಿಯೂರಪ್ಪ ಅವರೇ ಖುದ್ದಾಗಿ ಬಂದು ಪ್ರಶಸ್ತಿ ಪ್ರಧಾನ ಮಾಡಿದ್ದರು. ಆದರೆ ಇವರು ಪ್ರಶಸ್ತಿ ಮೊತ್ತ ಸ್ವೀಕರಿಸಲು ನಿರಾಕರಿಸಿದ್ದರು.

ಮದುವೆ, ಸಂಸಾರ, ಕುಟುಂಬದಿಂದ ದೂರವಿದ್ದ ಇವರು ತಾವೆ ಬಟ್ಟೆ ನೇಯ್ದು ಉಡುತ್ತಿದ್ದರು. ದೇಶ ವಿದೇಶದಿಂದ ಜನರು ಬಂದು ರುಕ್ಮಿಣಿಬಾಯಿ ವಾತ್ಸಲ್ಯಧಾಮದಲ್ಲಿ ನೆಲೆಸಿ ಮೀರಾತಾಯಿ ಅವರಿಂದ ದೇಶಾಭಿಮಾನ, ಜಾತ್ಯಾತೀತತೆ, ದೇಶೀಯ ಸಂಸ್ಕೃತಿ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದರು.

ಇದನ್ನೂ ಓದಿ | Amrit Mahotsav | ಇಂಗ್ಲಿಷ್‌ನಲ್ಲಿ ಬ್ರಿಟಿಷರನ್ನೇ ಮೀರಿಸುತ್ತಿದ್ದ ರಣವಿಕ್ರಮ ಮುಂಡರಗಿ ಭೀಮರಾಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ್ತಿ, ಗಾಂಧೀವಾದಿ ಮೀರಾತಾಯಿ ಕೊಪ್ಪಿಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿ ಅವರ ತತ್ವಾದರ್ಶಗಳನ್ನು ಸದಾ ಪಾಲಿಸುತ್ತ ಬದುಕಿದ ಮೀರಾತಾಯಿ ಕೊಪ್ಪಿಕರ್ ಅವರು ವಿನೋಬಾ ಭಾವೆಯವರ ಅನುಯಾಯಿಯಾಗಿದ್ದರು. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ವಾತ್ಸಲ್ಯ ಧಾಮವನ್ನು ಕಟ್ಟಿಕೊಂಡಿದ್ದ ಮೀರಾತಾಯಿ ಅವರು ಸರಳ ಜೀವನ, ಶ್ರಮದಾನ, ಹೈನುಗಾರಿಕೆ ಹಾಗೂ ಸಾವಯವ ಕೃಷಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೀಡಿದ್ದ ನಗದು ಬಹುಮಾನವನ್ನು ಬಡವರಿಗಾಗಿ ಬಳಸಿದ ನಿಸ್ವಾರ್ಥ ವ್ಯಕ್ತಿತ್ವ ಮೀರಾತಾಯಿ ಅವರದ್ದು. ಮೀರಾತಾಯಿ ಕೊಪ್ಪಿಕರ್ ಅವರ ನಿಧನದಿಂದ ಒಬ್ಬ ಶ್ರೇಷ್ಠ ಗಾಂಧೀವಾದಿಯನ್ನು ನಾಡು ಕಳೆದುಕೊಂಡಿದೆ. ದಯಾಮಯಿ ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | Amrit Mahotsav | ಆದಿವಾಸಿಗಳ ಹಕ್ಕುಗಳ ಧ್ವನಿಯಾಗಿದ್ದ ಅಲ್ಲೂರಿ ಸೀತಾರಾಮ ರಾಜು

Exit mobile version