Site icon Vistara News

Siddaramaiah@75: ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಕಳೆದ ಬಾಲ್ಯದ ನೆನಪುಗಳ ಬಿಚ್ಚಿಟ್ಟ ಸ್ನೇಹಿತರು

ಮೈಸೂರು: ಬುಧವಾರ (ಆಗಸ್ಟ್​​ 3) ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ 75ನೇ ವರ್ಷದ ಹುಟ್ಟುಹಬ್ಬ (Siddaramaiah@75) ಆಚರಿಸಿಕೊಳ್ಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ಬಾಲ್ಯದ ಸ್ನೇಹಿತರು ಹಾಗೂ ಕುಟುಂಬಸ್ಥರು ಅವರ ಜತೆ ಕಳೆದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಾಲ್ಯ ಸ್ನೇಹಿತರಾದ ನಂಜೇಗೌಡ ಅವರು ಸಿದ್ದರಾಮಯ್ಯ ಜತೆ ಕಳೆದ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಸ್ತಾರ ನ್ಯೂಸ್​ ಜತೆ ಮಾತನಾಡಿದ ನಂಜೇಗೌಡ “ಕ ತಲಗಟ್ಟು ಕ… ಕಾ ಕಿಳೀ, ಕಾ.‌. ಕೊಂಬು ಕು.. ಕಾಕೊಂಬಿಗೊಂದೀರ್ಗಾ ಕೂ….”…ಅಂತ ಕಾಗುಣಿತ ಹೇಳುವ ಮೂಲಕ ತಮ್ಮ ಮಾತನ್ನು ಶುರು ಮಾಡಿದ್ದಾರೆ. ಆಗ ನಮ್ಮೂರಲ್ಲಿ ಇಸ್ಕೂಲ್​ ಇತ್ತು. ನಾನು ಮೂರನೇ ಕ್ಲಾಸ್​ವರೆಗೆ ಓದಿದ್ದೇನಷ್ಟೇ. ಸಿದ್ದರಾಮಯ್ಯ ಪಾಸಾಗಿ ಕುಪ್ಪೇಗಾಲಕ್ಕೆ ಹೋದರು. ನಾನು ಹೋಗಲು ಆಗಲಿಲ್ಲ. ನಾವೆಲ್ಲ ಒಟ್ಟಿಗೆ ಆಡಿಕೊಂಡು ಬೆಳದವರು. ಈಗ ನಾನು ಸಿದ್ದರಾಮಯ್ಯನ್ನ ಸಾಹೇಬ್ರೆ ಅಂತೀನಿ. ಅವರೂ ಬಾರೋ ನಂಜೇಗೌಡ ಅಂತಾರೆ. ಈಗ ಜನ ಎಲ್ಲ ಸೇರ್ಕಂಡು ಹುಟ್ಟುಹಬ್ಬ ಮಾಡ್ತಾವ್ರೆ. ಅವ ಅನ್ನ ಕೊಟ್ಟ ಪುಣ್ಯಾತ್ಮ ದೇವರು ಚೆನ್ನಾಗಿ ಇಟ್ಟಿರಲಿ,” ಎಂದು ನಂಜೇಗೌಡ ತನ್ನ ಬಾಲ್ಯದ ಗೆಳೆಯ ಸಿದ್ದರಾಮಯ್ಯ ಅವರಿಗೆ ತಮ್ಮದೇ ಭಾಷೆಯಲ್ಲಿ ಶುಭ ಹಾರೈಸಿದ್ದಾರೆ.

ಸಿದ್ದರಾಮಯ್ಯ ಅವರ ಮತ್ತೊಬ್ಬ ಬಾಲ್ಯ ಸ್ನೇಹಿತ ಸಿದ್ದೇಗೌಡ ಕೂಡ ತಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. “ನಾನೂ ಇಸ್ಕೂಲ್​ಗೆ ಹೋಗುತ್ತಿದ್ದೆ, ಆದ್ರೆ ಮೇಷ್ಟ್ರು ಹೊಡೆದುಬಿಟ್ರು. ಅದ್ಕೆ ನಾನು ಬೈದು ಬಂದು ಬಿಟ್ಟೆ. ಆಮೇಲೆ ಸ್ಕೂಲ್​ಗೆ ಹೋಗಲಿಲ್ಲ. ಆದ್ರೆ ಸಿದ್ದರಾಮಯ್ಯ ಸ್ಕೂಲಿಂದ ಬರೋವರೆಗೂ ಇಸ್ಕೂಲ್​ ಹತ್ರಾನೆ ಕಾಯ್ತಿದ್ದೆ. ಆಮೇಲೆ ಇಬ್ರೂ ಸೇರಿ ಆಟ ಆಡ್ತಿದ್ವ್ವಿ. ಹೊಳೆ ಮಧ್ಯ ಎಮ್ಮೆ ನಿಲ್ಲಿಸಿ, ಬೆನ್ನು ಮೇಲೆ ಹತ್ತಿ ನೀರಿಗೆ ಬೀಳುತ್ತಿದ್ವಿ. ಅವರಷ್ಟು ನಮ್ಮಲ್ಲಿ ಯಾರೂ ಓದಲಿಲ್ಲ. ಅವರ ನೆನಪಿನ ಶಕ್ತಿ ಯಾರಿಗೂ ಬರಲ್ಲ. ಹುಟ್ಟಿದ ಹಬ್ಬ ಅಂತ ಗೊತ್ತು. ನಾಲ್ಕು ಲಕ್ಷ ಜನ ಸೇರುತ್ತಾರಂತೆ, ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು. ಅವರನ್ನು ಬಿಟ್ಟು ಬೇರೆ ಯಾರೂ ಆಗೋದು ಬೇಡ” ಎಂದು ಬಾಲ್ಯದ ಸ್ನೇಹಿತ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Siddaramotsava | ರಾರಾಜಿಸುತ್ತಿವೆ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಬ್ಯಾನರ್‌, ಕಟೌಟ್‌ಗಳು

ಸಿದ್ದರಾಮಯ್ಯ ಒಡಹುಟ್ಟಿದ್ದ ತಮ್ಮ ರಾಮೇಗೌಡ ಕೂಡ ಸಿದ್ದರಾಮೋತ್ಸವದ ಬಗ್ಗೆ ಮಾತನಾಡುತ್ತಾ, “ಜನ ಸೇರ್ಕೊಂಡು ಹುಟ್ಟುಹಬ್ಬ ಮಾಡ್ತಾವ್ರೆ. ನಂಗೇನೂ ಗೊತ್ತಿಲ್ಲ. ನಮ್ಮಣ್ಣ ಯಾವತ್ತೂ ಹುಟ್ಟುಹಬ್ಬ ಆಚರಿಸಿಕೊಂಡವರಲ್ಲ. ಹುಟ್ಟುಹಬ್ಬ ಅನ್ನೋದು ನಮಗೆ ಗೊತ್ತೂ ಇಲ್ಲ. ಈಗ ಜನ ಸೇರ್ಕೊಂಡು ಹುಟ್ಟಿದ ಹಬ್ಬ ‌ಅಂತ ಮಾಡ್ತಾ ಇದ್ದಾರೆ. ಅದರ ಬಗ್ಗೆ ನಮಗೆ ಅಷ್ಟೇನೂ ಗೊತ್ತಿಲ್ಲ. ನನಗೆ ಹುಷಾರಿಲ್ಲ. ಸಕ್ಕರೆ ಕಾಯಿಲೆಯಿಂದ ಕಾಲಿಗೆ ಗಾಯವಾಗಿದೆ. ಇಲ್ಲದಿದ್ದರೆ ನಾನು ಅಲ್ಲಿಗೆ ಹೋಗುತ್ತಿದ್ದೆ. ನಮ್ಮಣ್ಣ ಮುಖ್ಯಮಂತ್ರಿಯಾದಗಲೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಮುಂದೆ ಅವನೇ ಮುಖ್ಯಮಂತ್ರಿ ಆಗಲಿ. ಅವ ನಮ್ಮಣ್ಣ ಅಲ್ವಾ ಅವನೇ ಮುಖ್ಯಮಂತ್ರಿ ಆಗ್ಬೇಕು.. ಏನಾಗುತ್ತೋ ನೋಡೋಣ,” ಎಂದಿದ್ದಾರೆ.

ಇನ್ನು ನಾಳಿನ ಸಿದ್ದರಾಮೋತ್ಸವಕ್ಕೆ ಸಾಮಾನ್ಯ ಜನರಂತೆ ನಾವೂ ಕೂಡ ಹೋಗುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಮ್ಮನ ಮಗ ರಘು ಹೇಳಿದ್ದಾರೆ. “ಊರಿನಿಂದ ಮೂರು ಬಸ್​ ಮಾಡಿದ್ದಾರೆ. ನಮ್ಮ ಕುಟುಂಬದವರು, ಸಂಬಂಧಿಕರೆಲ್ಲ ಸುಮಾರು 15 ಜನ ಹೋಗುತ್ತೇವೆ. ಅಲ್ಲಿ ಲಕ್ಷಾಂತರ ಜನ ಇರುತ್ತಾರೆ. ಅವರ ಮಧ್ಯದಲ್ಲೇ ನಾವು ಕಾರ್ಯಕರ್ತರ ಜತೆಯಲ್ಲಿ ಇರುತ್ತೇವೆ. ದೂರದಿಂದ ನೋಡಿ ಖುಷಿಪಡುತ್ತೇವೆ. ಅದು ಜನಾಭಿಮಾನಿಗಳ ಕಾರ್ಯಕ್ರಮ, ನಾವು ವಿಐಪಿಗಳಲ್ಲ, ನಮ್ಮ ದೊಡ್ಡಪ್ಪನೂ ಅದನ್ನು ನಮಗೆ ಕಲಿಸಿಲ್ಲ,” ಎಂದಿದ್ದಾರೆ.

ಇದನ್ನೂ ಓದಿ | ಬಿಜೆಪಿ ಅಧಿಕಾರದಲ್ಲಿದ್ದರೆ ಯಾರಿಗೂ ರಕ್ಷಣೆ ನೀಡೋಕೆ ಆಗಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Exit mobile version