Site icon Vistara News

ಮುಂಗಾರು ಮಳೆಗಾಗಿ ಕಸರತ್ತು; ಮೈಸೂರಲ್ಲಿ ಕಪ್ಪೆಗಳಿಗೆ ಮದುವೆ, ಬೆತ್ತಲಾಗಿ ಮೆರವಣಿಗೆ ಹೋದ ಬಾಲಕ!

Children procession Frogs

#image_title

ಮೈಸೂರು: ಈ ಸಲ ಮುಂಗಾರು (Southwest Monsoon) ವಿಳಂಬವಾಗುತ್ತಿರುವ ಕಾರಣ ಮಳೆಯಾಗುತ್ತಿಲ್ಲ. ಜೂನ್​ ಮೊದಲವಾರದಲ್ಲಿ ಮುಂಗಾರು ಮಳೆ ಶುರುವಾಗದೆ ಇದ್ದರೆ ಬರ ಗ್ಯಾರಂಟಿ ಎಂಬ ಸ್ಥಿತಿ ಬರುತ್ತದೆ. ಈಗಾಗಲೇ ಕೃಷಿಕರು ಬೆಳೆ ತೆಗೆಯಲು ಆಗದೆ ಕಂಗಾಲಾಗಿದ್ದಾರೆ. ಮಳೆಗಾಗಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆಗಳೂ ನಡೆಯುತ್ತಿವೆ. ಈ ಮಧ್ಯೆ ಮೈಸೂರಿನ ಹುಣಸೂರು ತಾಲೂಕಿನ ಚಿಕ್ಕೇಗೌಡ ಕೊಪ್ಪಲಿನಲ್ಲಿ ನಡೆಸಲಾದ ಆಚರಣೆ ಸಖತ್ ಸುದ್ದಿಯಾಗಿದೆ. ಅಲ್ಲಿ ಕಪ್ಪೆಗಳಿಗೆ ಮದುವೆ ಮಾಡಲಾಗಿದೆ. ಬಾಲಕನೊಬ್ಬ ಬೆತ್ತಲಾಗಿದ್ದಾನೆ!

ಚಿಕ್ಕೇಗೌಡನ ಕೊಪ್ಪಲಿಯಲ್ಲಿ ಎರಡು ಕಪ್ಪೆ ಹಿಡಿದು ತಂದು ಮದುವೆ ಮಾಡಲಾಗಿದೆ. ಅವುಗಳನ್ನು ಒಂದು ಬಿದಿರಿನ ಬೊಂಬಿಗೆ ಕಟ್ಟಿ, ಮಕ್ಕಳು ಮೆರವಣಿಗೆ ಮಾಡಿದ್ದಾರೆ. ಇಲ್ಲಿ ಗಂಡು ಹುಡುಗರು ವಿವಸ್ತ್ರರಾಗಿದ್ದರು. ಒಬ್ಬ ಬಾಲಕನಂತೂ ಸಂಪೂರ್ಣ ಬೆತ್ತಲಾಗಿಯೇ ಮೆರವಣಿಗೆ ಮಾಡಿದ್ದಾನೆ. ಈ ಮಕ್ಕಳು ಕಪ್ಪೆಗಳನ್ನು ಹೊತ್ತು ಊರೂರು ಸಾಗಿದ್ದಾರೆ. ಅದರ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: Vijayanagara News: ಮಳೆಗಾಗಿ ದೇಗುಲಗಳ ಮೊರೆ: ಯುವಕರಿಂದ 101 ಕೊಡ ಜಲಾಭಿಷೇಕ

ಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದರೆ ದೇಗುಲಗಳಲ್ಲಿ ಹೋಮ-ಹವನ, ಪೂಜೆಗಳನ್ನು ಮಾಡುವ ಪದ್ಧತಿ ಇರುವಂತೆ, ಈ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಆಚರಣೆಯೂ ಹಿಂದಿನಿಂದ ನಡೆದುಕೊಂಡು ಬಂದಿದೆ. ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಈಗಲೂ ದೇಶಾದ್ಯಂತ ಅನೇಕ ಕಡೆಗಳಲ್ಲಿ ಇದೆ. ಇತ್ತೀಚೆಗೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಕಪ್ಪೆಗಳ ಮದುವೆ ಮಾಡಲಾಗಿತ್ತು. ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಮಳೆ ಬರಲಿ, ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲೂ ಈ ಆಚರಣೆ ನಡೆದಿತ್ತು.

Exit mobile version