Site icon Vistara News

PFI Banned | ಭಯೋತ್ಪಾದನೆ, ದೇಶದ್ರೋಹ, ಸೌಹಾರ್ದಕ್ಕೆ ಧಕ್ಕೆ ಪಿಎಫ್ಐ ನಿಷೇಧಕ್ಕೆ ಕಾರಣ! ಗೆಜೆಟ್ ಡಿಟೇಲ್ಸ್ ಓದಿ

How PFI is bypassing the ban in Karnataka, here is a detailed report

How PFI is bypassing the ban in Karnataka, here is a detailed report

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಹಾಗೂ ಅದರ ಸಹವರ್ತಿ ಸಂಸ್ಥೆಗಳ ಮೇಲೆ ನಿಷೇಧ (PFI Banned) ಹೇರಿರುವ ಕೇಂದ್ರ ಸರ್ಕಾರವು, ತಾನು ಕೈಗೊಂಡ ನಿರ್ಧಾರಕ್ಕೆ ಸಂಪೂರ್ಣ ಸಾಕ್ಷ್ಯಗಳನ್ನು ಒದಗಿಸಿದೆ. ಈ ಬಗ್ಗೆ ಹೊರಡಿಸಲಾಗಿರುವ ಗೆಜೆಟ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ. ಪಿಎಫ್ಐನ ಹುಟ್ಟು, ಅದರ ಉದ್ದೇಶಗಳು, ಸಮಾಜದಲ್ಲಿ ಹೇಗೆ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡುತ್ತಿತ್ತು, ಹಣ ದುರುಪಯೋಗ, ಉಗ್ರ ಕೃತ್ಯಗಳನ್ನು ನಡೆಸಿರುವುದು ಸೇರಿ ಎಲ್ಲ ಮಾಹಿತಿಯನ್ನು ಗೆಜೆಟ್‌ನಲ್ಲಿ ವಿವರಿಸಲಾಗಿದೆ. ಪಿಎಫ್ಐ ನಿಷೇಧದ ಗೆಜೆಟ್ ನೋಟಿಫಿಕೇಷನ್ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ.

ಪಿಎಫ್ಐ ಮೇಲೆ ಮೊದಲಿನಿಂದಲೂ ಅನುಮಾನಗಳಿದ್ದವು. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಎಲ್ಲ ತನಿಖಾ ಸಂಸ್ಥೆಗಳು ಪಿಎಫ್ಐ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದವು. ಅಂತಿಮವಾಗಿ ಸಂಘಟನೆಯ ನಿಷೇಧಕ್ಕೆ ಬೇಕಾಗಿರುವ ಎಲ್ಲ ಸಾಕ್ಷ್ಯಾಧಾರಗಳನ್ನು ಒಟ್ಟುಗೂಡಿಸಿ ನಿಷೇಧಿಸಿದೆ.

ನೋಟಿಫಿಕೇಷನ್‌ನಲ್ಲಿ ಏನಿದೆ?
ದೇಶದಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುವುದರಲ್ಲಿ ಪಿಎಫ್ಐ ಹಾಗೂ ಅದರ ಸಹವರ್ತಿ ಸಂಘಟನೆಗಳು ತೊಡಗಿಸಿಕೊಂಡಿದ್ದವು. ಜತೆಗೆ, ಉಗ್ರ ಚಟುವಟಿಕೆ ಹಾಗೂ ದಂಗೆ ಏಳಲು ಪ್ರೇರೇಪಿಸುತ್ತಿದ್ದವು. ಇದೇ ಪಿಎಫ್ಐ ಸಂಘಟನೆ ನಿಷೇಧಕ್ಕೆ ಪ್ರಮುಖ ಕಾರಣ ಎಂದು ತಿಳಿಸಲಾಗಿದೆ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣಕ್ಕೆ ಜಾರಿಗೆ ಬರುವಂತೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐ ಹಾಗೂ ಅದರ ಎಲ್ಲ ಸಹವರ್ತಿ ಸಂಸ್ಥೆಗಳು ಅಥವಾ ಸಹ ಸಂಘಟನೆಗಳು ಅಥವಾ ವೇದಿಕೆಗಳನ್ನು ನಿಷೇಧಿಸಲಾಗುತ್ತಿದೆ.

ಕಾನೂನು ಪ್ರಕಾರವೇ ನಿಷೇಧ
ಯುಎಪಿಎ ಕಾಯ್ದೆಯ ಸೆಕ್ಷನ್ 3ರ ಸಬ್ ಸೆಕ್ಷನ್ 3 ಅನುಸಾರ ಒದಗಿಸಲಾಗಿರುವ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಈ ಅಧಿಸೂಚನೆಯನ್ನು ಸದರಿ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಮಾಡಬಹುದಾದ ಯಾವುದೇ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಈ ನಿಷೇಧವು ಅಧಿಕೃತ ಗೆಜೆಟ್‌ನಲ್ಲಿ ಅದರ ಪ್ರಕಟಣೆಯ ದಿನಾಂಕದಿಂದ ಹಿಡಿದು ಐದು ವರ್ಷಗಳ ಅವಧಿಗೆ ಮುಂದುವರಿಯುತ್ತದೆ ಎಂದೂ ತಿಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ನೋಟಿಫಿಕೇಷನ್‌ನಲ್ಲಿ ಪಿಎಫ್ಐ ಹಾಗೂ ಅದರ ಸಹವರ್ತಿಗಳು ಹೇಗೆ ಒಂದಕ್ಕೊಂದು ಲಿಂಕ್ ಹೊಂದಿದ್ದವು ಮತ್ತು ಅವು ಹೇಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಿಗಿಕೊಂಡಿದ್ದವು ಎಂಬುದನ್ನು ವಿವರಿಸಲಾಗಿದೆ. ಈ ಎಲ್ಲ ವೇದಿಕೆಗಳ ಸದಸ್ಯರ ಮೇಲೆ ಪಿಎಫ್ಐ ನಿಯಂತ್ರಣ ಹೊಂದಿತ್ತು ಮತ್ತು ಅದರ ಅನುಸಾರವೇ ಈ ಎಲ್ಲ ಸಹವರ್ತಿ ಸಂಘಟನೆಗಳು ಕೆಲಸ ಮಾಡುತ್ತಿದ್ದವು.

ಐಸಿಸ್‌ನೊಂದಿಗೆ ಲಿಂಕ್
ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಈ ಸಂಘಟನೆಯು ದೇಶದಲ್ಲಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಹಾಳು ಮಾಡುವ ಉದ್ದೇಶಕ್ಕಾಗಿಯೇ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು ದಂಗೆಗೆ ಬೆಂಬಲಿಸುತ್ತಿದ್ದವು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು.

ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳ ಕಾರ್ಯಕರ್ತರು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ(ಐಸಿಸ್) ಸೇರಿದ್ದರು. ಸಿರಿಯಾದಲ್ಲಿನ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಐಸಿಸ್‌ಗೆ ಸೇರಿದ ಪಿಎಫ್ಐನ ಕೆಲವು ಸದಸ್ಯರು ಸಿರಿಯಾ ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದಾರೆ. ಕೆಲವರನ್ನು ರಾಜ್ಯ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿವೆ. ಉಗ್ರಸಂಘಟನೆಯಾಗಿರುವ ಜಮಾತ್ ಉಲ್ ಮಾಜಾಹೀದಿನ್ ಬಾಂಗ್ಲಾದೇಶ(ಜೆಎಂಬಿ) ಜತೆ ನಂಟು ಪಿಎಫ್ಐ ಹೊಂದಿದೆ. ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ) ಕೆಲವು ಸದಸ್ಯರೇ ಪಿಎಫ್ಐ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ.

ಐಸಿಸ್ ಸೇರಿದಂತೆ ಜಾಗತಿಕ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಅಥವಾ ವೇದಿಕೆಗಳು, ದೇಶದೊಳಗೆ ಅಭದ್ರತೆ ಮನೆ ಮಾಡುತ್ತಿದೆ ಎಂಬ ಭಾವನೆಯನ್ನು ಪ್ರೇರೇಪಿಸುವ ಮೂಲಕ ನಿರ್ದಿಷ್ಟ ಸಮುದಾಯದಲ್ಲಿತೀವ್ರಗಾಮಿತ್ವವನ್ನು ಹೆಚ್ಚಿಸುತ್ತಿವೆ. ಈ ಕಾರಣಕ್ಕಾಗಿಯೇ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳು ಕೆಲವು ಕಾರ್ಯಕರ್ತರು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳನ್ನು ಸೇರುತ್ತಿದ್ದಾರೆಂಬುದನ್ನು ಇದು ಋಜುವಾತುಪಡಿಸುತ್ತದೆ ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ.

ಪಿಎಫ್ಐ ವಿರುದ್ಧ ಪ್ರಕರಣಗಳು
ಪಿಎಫ್ಐ ವಿರುದ್ಧ ಕೈಗೊಳ್ಳಲಾದ ತನಿಖೆಗಳಿಂದ ಸಂಘಟನೆಯು ಅನೇಕರ ಕೊಲೆಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಪಿಎಫ್ಐ ಅನೇಕ ಉಗ್ರ ಕೃತ್ಯಗಳು ಮತ್ತು ಹಲವರ ಕೊಲೆಗಳಲ್ಲಿ ನೇರವಾಗಿ ಭಾಗಿಯಾಗಿದೆ. ಸಂಜೀತ್(ಕೇರಳ), ವಿ ರಾಮಲಿಂಗಮ್(ತಮಿಳುನಾಡು), ನಂದು(ಕೇರಳ), ಅಭಿಮನ್ಯು(ಕೇರಳ), ಬಿಬಿನ್(ಕೇರಳ), ಶರತ್(ಕರ್ನಾಟಕ), ಆರ್ ರುದ್ರೇಶ್(ಕರ್ನಾಟಕ), ಪ್ರವೀಣ್ ಪೂಜಾರಿ(ಕರ್ನಾಟಕ), ಶಶಿಕುಮಾರ್(ತಮಿಳುನಾಡು), ಪ್ರವೀಣ್ ನೆಟ್ಟಾರು(ಕರ್ನಾಟಕ) ಸೇರಿ ಗಲವು ಕೊಲೆಗಳಲ್ಲಿ ಪಿಎಫ್ಐ ನೇರ ಪಾತ್ರವಹಿಸಿದೆ. ಈ ಎಲ್ಲ ಕೊಲೆಗಳು ಮತ್ತು ಅಪರಾಧಗಳನ್ನು ಪಿಎಪ್ಐ ಕಾರ್ಯಕರ್ತರು ನಡೆಸಿದ್ದಾರೆ. ಈ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿ ಭಯ ಹುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಈ ಎಲ್ಲ ಕೊಲೆಗಳ ಹಿಂದಿರುವ ಉದ್ದೇಶವು, ಸಾರ್ವಜನಿಕ ಶಾಂತಿಯನ್ನು ಹಾಳು ಮಾಡುವುದೇ ಆಗಿದೆ ಎಂದು ತಿಳಿಸಲಾಗಿದೆ.

ಹಣ ದುರ್ಬಳಕೆ, ಹವಾಲ ಹಗರಣ
ಬ್ಯಾಂಕಿಂಗ್ ಚಾನೆಲ್ಸ್ ಮೂಲಕ ಪಿಎಫ್ಐ ಸಂಘಟನೆಯ ಕೆಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ದೇಶದೊಳಗಿನಿಂದ ಮತ್ತ ವಿದೇಶಗಳಿಂದ ಹಣವನ್ನು ದೇಣಿಗೆಯ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. ಅಪರಾಧ ಸಂಚು ರೂಪಿಸಲು ನೆರವಾಗಲು ಹವಾಲಾ ಮೂಲಕ ಹಣವನ್ನು ಸಂಗ್ರಹಿಸಲಾಗುತ್ತಿತ್ತು. ಹಣವನ್ನು ಸಂಗ್ರಹಿಸಿದ ನಂತರ, ಕೇಡರ್‌ಗಳು ಈ ಹಣವನ್ನು ಕಾನೂನುಬದ್ಧವೆಂದು ತೋರಿಸಲು ಬಹು ಖಾತೆಗಳ ಮೂಲಕ ವರ್ಗಾಯಿಸುತ್ತಿದ್ದರು. ಅಂತಿಮವಾಗಿ ಅವುಗಳನ್ನು ಭಾರತದಲ್ಲಿ ವಿವಿಧ ಕ್ರಿಮಿನಲ್, ಕಾನೂನುಬಾಹಿರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಿದರು.

ಹಲವು ಬ್ಯಾಂಕುಗಳಲ್ಲಿ ಪಿಎಫ್ಐ ಪರವಾಗಿ ಠೇವಣಿ ಮಾಡಿದ್ದ ಖಾತೆದಾರರಿಗೂ ಹಾಗೂ ಮೊತ್ತಕ್ಕೂ ತಾಳೆಯಾಗುತ್ತಿರಲಿಲ್ಲ. ಜತೆಗೇ ಸಂಘಟನೆಯ ಸ್ಥಾಪನೆಯ ವೇಳೆ ಹೇಳಿದ ಉದ್ದೇಶಕ್ಕೆ ಈ ಹಣ ಬಳಕೆಯಾಗುತ್ತಿರಲಿಲ್ಲ. ಆ ಕಾರಣಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯು 1961 (1961 ರ 43) ನ ವಿಭಾಗ 12A ಅಥವಾ 12AA ಅಡಿಯಲ್ಲಿ ಪಿಎಫ್ಐನ ಎಲ್ಲ ಹಣಕಾಸು ನೋಂದಣಿಗಳನ್ನು ರದ್ದು ಮಾಡಿತ್ತು. 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 12ಎಎ ಅಡಿಯಲ್ಲಿ ರಿಹ್ಯಾಬ್ ಇಂಡಿಯಾ ಫೌಂಡೇಷನ್ ನೀಡಲಾಗಿದ್ದ ನೋಂದಣಿಯನ್ನೂ ಕೂಡ ರದ್ದು ಮಾಡಲಾಗಿತ್ತು.

ಮುಂದೇನು?
ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳ ಮೇಲೆ ಕೇಂದ್ರ ಗೃಹ ಸಚಿವಾಲಯವು ನಿಷೇಧವನ್ನು ಹೇರಿದ ಬಳಿಕ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ರವಾನಿಸಲಾಗಿದೆ. ನಿಧಿ ಬಳಕೆ ನಿಷೇಧ, ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದ ಸ್ಥಳಗಳನ್ನು ಕಾಯಿದೆಯ ಸೆಕ್ಷನ್ 7ರ ಅಡಿ ಸೀಸ್ ಮಾಡುವಂತೆ ತಿಳಿಸಲಾಗಿದೆ. 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 42 ರ ಮೂಲಕ ನೀಡಲಾದ ಅಧಿಕಾರಗಳ ಅನುಗುಣವಾಗಿ ಕೇಂದ್ರ ಸರ್ಕಾರವು ಈ ಮೂಲಕ, ಸೆಕ್ಷನ್ 7 ಮತ್ತು ಸೆಕ್ಷನ್ 8 ರ ಅಡಿಯಲ್ಲಿ ಚಲಾಯಿಸಬಹುದಾದ ಎಲ್ಲಾ ಅಧಿಕಾರಗಳನ್ನು ಸಹ ಚಲಾಯಿಸಲು ಎಲ್ಲ ರಾಜ್ಯಾಡಳಿತಗಳಿಗೆ ನಿರ್ದೇಶನ ನೀಡುತ್ತದೆ ಮೇಲಿನ ಕಾನೂನುಬಾಹಿರ ಸಂಘಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬಹುದು ಎಂದು ತನ್ನ ಅಧಿಸೂಚನೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

Exit mobile version