Site icon Vistara News

CM Siddaramaiah: ಹಜರತ್ ಬಾದ್ ಶಾ ಪೀರಾನ್ ದರ್ಗಾ ಅಭಿವೃದ್ಧಿಗೆ ಅಗತ್ಯ ಅನುದಾನ: ಸಿದ್ದರಾಮಯ್ಯ

Siddaramaiah

ಹುಬ್ಬಳ್ಳಿ: ಸಮಾಜದಲ್ಲಿ ವೈವಿಧ್ಯತೆ ಇದೆ. ಸಹಿಷ್ಣತೆ ಮತ್ತು ಸಹಬಾಳ್ವೆಯ ಸಂಸ್ಕಾರವನ್ನು ಪಾಲಿಸಿದರೆ ಸಮಾಜದಲ್ಲಿ ಅಶಾಂತಿ ಮತ್ತು ಅಪನಂಬಿಕೆಯ ವಾತಾವರಣ ಇಲ್ಲವಾಗುತ್ತದೆ. ಬಹುತ್ವವೇ ಭಾರತದ ಶಕ್ತಿ-ಸಂವಿಧಾನವೇ ಬಹುತ್ವದ ಶಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

ಹುಬ್ಬಳ್ಳಿಯ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಆವರಣದಲ್ಲಿ ನಡೆದ ಬೃಹತ್ ಔಲಾದೇ ಗೌಸೆ ಅಜಮ್ (ಮೆಹಬೂಬೇ ಸುಭಾನೇ ಮಕ್ಕಳ ಸಮಾವೇಷ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟುವಾಗ ವಿಶ್ವ ಮಾನವರಾಗಿರುವ ಎಲ್ಲರೂ ಕೊನೆಯವರೆಗೂ ವಿಶ್ವ ಮಾನವರಾಗಿಯೇ ಉಳಿಯಬೇಕು. ಸಯ್ಯದ್ ತಾಜುದ್ದೀನ್ ಖಾದ್ರಿ ಅವರು ತಮ್ಮ ತಂದೆಯಂತೆಯೇ, ಸೂಫಿ ಧರ್ಮದ ಆಶಯದಂತೆ ವಿಶ್ವ ಮಾನವರನ್ನು ಸೃಷ್ಟಿಸುವ ಮಹೋನ್ನತ ಕಾರ್ಯವನ್ನು ನಡೆಸುತ್ತಿದ್ದಾರೆ. ಪರಸ್ಪರ ಪ್ರೀತಿ , ವಿಶ್ವಾಸ ಮತ್ತು ಬಾಂದವ್ಯದ ವಾತಾವರಣ ಸೃಷ್ಟಿಸುತ್ತಿರುವ ಖಾದ್ರಿ ಮತ್ತು ಇಂತಹ ಸೂಫಿ ಸಂತರಿಗೆ ಕೋಟಿ, ಕೋಟಿ ನಮನ ಎಂದು ಮೆಚ್ಚುಗೆ ಸೂಚಿಸಿದರು.

ವೈಚಾರಿಕತೆ ಮತ್ತು ಪ್ರತಿಯೊಬ್ಬರನ್ನೂ ಮಾನವೀಯಗೊಳಿಸುವ ಶಿಕ್ಷಣ ಇಂದಿನ ಅಗತ್ಯ. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು, “ಇವ ನಮ್ಮವ ಇವ ನಮ್ಮವ” ಎನ್ನುವ ಅತ್ಯುನ್ನತ ಮಾನವೀಯ ಮೌಲ್ಯವನ್ನು ಸಾರುತ್ತಾ, ಸರ್ವ ಜಾತಿ ಜನಾಂಗದವರು ಸಮನಾಗಿ ಅಕ್ಕ ಪಕ್ಕ ಕೂರುವ ಅನುಭವ ಮಂಟಪವನ್ನು ನಿರ್ಮಿಸಿದರು. ಈ ಎರಡು ದಿನಗಳ ಸಮಾವೇಷದಲ್ಲಿ ಸೂಫಿಗಳ ಆಶಯವನ್ನು ಇನ್ನಷ್ಟು ಹೆಚ್ಚು ಪ್ರಚಾರ ಮಾಡುವಂತಾಗಲಿ ಎಂದು ಆಶಿಸಿದರು.

ಅತ್ಯುನ್ನತ ಮಾನವೀಯ ಮೌಲ್ಯ ಸಾರಿದ ಸೂಫಿ ಸಂತ ಹಜರತ್ ಬಾದ್ ಶಾ ಪೀರಾನ್ ದರ್ಗಾದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಇದನ್ನೂ ಓದಿ | Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

ಅಲ್ಹಜ್ ಸಯ್ಯದ್ ತಾಜುದ್ದೀನ್ ಖಾದ್ರಿ ಅಲ್ ಜಿಲಾನಿ, ಗುಲ್ಬರ್ಗಾ ಷರೀಫ್ ನ ಹಜರತ್ ಕ್ವಾಜಾ ಬಂದನವಾಜ್ ದರ್ಗಾದ ಖುಸ್ರೂ ಹುಸೇನ್ ಸಾಬ್ ಖಿಲಾಬಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾವೇಷದ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾನೂನು ಸಚಿವರಾದ ಎಚ್.ಕೆ.ಪಾಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ‌ ಅಹಮದ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಸಹಮದ್ ಸೇರಿ ಹಲವಾರು ಶಾಸಕರು ಮತ್ತು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version