ತುಮಕೂರು: ರಾಜ್ಯದಲ್ಲಿ ಅನ್ನ ಭಾಗ್ಯದ (Anna Bhagya Scheme) ಐದು ಕೆಜಿ ಅಕ್ಕಿಯ ಬದಲು ಹಣ ಕೊಡುವ ಯೋಜನೆ ಕೇವಲ ಮೂರು ತಿಂಗಳು ಮಾತ್ರ ಇರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಅವರು ತುಮಕೂರು ಜಿಲ್ಲೆಯ (Tumkur News) ಕೊರಟಗೆರೆಯಲ್ಲಿ ಬಕ್ರೀದ್ ಹಬ್ಬದಲ್ಲಿ (Eid al adha) ಭಾಗವಹಿಸಿದ ಬಳಿಕ ಮಾತನಾಡಿ, ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿಯ ಬದಲು ಹಣ ಕೊಡುವುದನ್ನು ಕೆಲವರು ಮಾತ್ರ (Rice politics) ವಿರೋಧಿಸುತ್ತಿದ್ದಾರೆ. ಅದರ ಬಗ್ಗೆ ನಾವು ಹೆಚ್ಚು ತಲೆ ಬಿಸಿ ಮಾಡಿಕೊಂಡಿಲ್ಲ. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಕೊಟ್ಟೇ ಕೊಡ್ತಿವಿ, ಅದರಲ್ಲಿ ಎರಡು ಮಾತಿಲ್ಲ. ಆದರೆ, ಕೇಂದ್ರ ಸರ್ಕಾರ ದುಡ್ಡು ಕೊಟ್ಟರೂ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿನಲ್ಲಿ ಅಕ್ಕಿ ಕೊಳೆಯುತ್ತಿದೆ. ರಾಜ್ಯದ ಆಹಾರ ಗೋದಾಮಿನಲ್ಲಿ 7 ಲಕ್ಷ ಟನ್ ಸ್ಟಾಕ್ ಇದೆ. ಅದನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ. ಆದರೆ, ರಾಜಕೀಯ ಕಾರಣಕ್ಕಾಗಿ ನಮಗೆ ಕೊಡುತ್ತಿಲ್ಲʼʼ ಎಂದು ಹೇಳಿದರು.
ಐದು ಕೆಜಿ ಅಕ್ಕಿಯ ಬದಲಿಗೆ ಹಣ ಕೊಡುವ ಈ ಯೋಜನೆ ದೀರ್ಘ ಕಾಲ ಇರುವುದಿಲ್ಲ. ಮೂರು ತಿಂಗಳ ಕಾಲ ದುಡ್ಡು ಕೊಡುತ್ತೇವೆ, ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದೆ. ಹಾಗಾಗಿ 10 ಕೆಜಿ ಅಕ್ಕಿಯ ದುಡ್ಡು ಹಾಕಬೇಕು ಎಂಬ ಬಿಜೆಪಿ ವಾದದ ಬಗ್ಗೆ ಪ್ರಶ್ನಿಸಿದಾಗ, ʻʻಬಿಜೆಪಿ ಅವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಮಾತಿನಂತೆ ನಡೆದುಕೊಳ್ಳುತ್ತೇವೆʼʼ ಎಂದು ಸ್ಪಷ್ಟಪಡಿಸಿದರು.
ʻʻಅಕ್ಕಿ ಬದಲು ದುಡ್ಡು ಕೊಡಿʼʼ ಎಂದು ಬಿಜೆಪಿ ಸಲಹೆ ನೀಡಿದಕ್ಕೆ ಉತ್ತರಕ್ಕಾಗಿ ದುಡ್ಡು ತಿನ್ನೋಕಾಗುತ್ತಾ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಅದನ್ನೇ ಬಿಜೆಪಿ ಈಗ ಟೀಕೆಗೆ ಬಳಸಿಕೊಳ್ಳುತ್ತಿರುವುದರ ಬಗ್ಗೆ ಗಮನ ಸೆಳೆದಾಗ, ʻʻಇದು ಪ್ರೆಸ್ಟೀಜ್ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗಬೇಕು. ಪ್ರತಿಷ್ಠೆಯಿಂದ ಹೊಟ್ಟೆ ತುಂಬುವುದಿಲ್ಲʼʼ ಎಂದು ಹೇಳಿದರು. ʻʻಬಿಜೆಪಿಯವರೇ ಹಣ ಕೊಡಿ ಹಣ ಕೊಡಿ ಎಂದು ಹೇಳಿದರು. ಈಗ ಕೊಡುತ್ತಿದ್ದೇವೆ ಅಂದಾಗಲೂ ಟೀಕೆ ಮಾಡುವುದೇಕೆ ಎಂದು ಅವರು ಪ್ರಶ್ನಿಸಿದರು.
ʻʻಬಡವರ ಹಸಿವಿನಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ವಿನಂತಿ ಮಾಡುತ್ತೇನೆʼʼ ಎಂದು ನುಡಿದರು ಪರಮೇಶ್ವರ್.
ಇದನ್ನೂ ಓದಿ: Congress Guarantee: ಅಕ್ಕಿ ಆಸೆ ಕೈಬಿಟ್ಟ ಸರ್ಕಾರ!: ಚೀಲಕ್ಕೆ 5 ಕೆ.ಜಿ. ಅಕ್ಕಿ ಬದಲಿಗೆ ಖಾತೆಗೆ 170 ರೂ. ನೀಡಲು ನಿರ್ಧಾರ
ಮುಸ್ಲಿಮರಿಗೆ ಧನ್ಯವಾದ ಹೇಳಿದ ಪರಮೇಶ್ವರ್
ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮರಲ್ಲಿ ಬಹುಪಾಲು ಮಂದಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬ ವಿಚಾರದ ಬಗ್ಗೆ ಗಮನ ಸೆಳೆದಾಗ, ಎಲ್ಲೋ ಒಂದುಕಡೆ ಮುಸ್ಲಿಮರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್ ಗೆ ಮತಹಾಕಿದ್ದಾರೆ. ಕಾಂಗ್ರೆಸ್ ಜಾತ್ಯತೀತವಾದ ಪಕ್ಷ. ಹಾಗಾಗಿ ಅವರು ನಮ್ಮ ಜೊತೆ ನಿಂತಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ʻʻನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜೊತೆಗೆ ಶಾಂತಿ ಕಾಪಾಡಬೇಕಿದೆ.. ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ದ್ವೇಷ ಸಾಧಿಸಲು ಹೋಗುವುದಿಲ್ಲ ಎಂದರು.