Site icon Vistara News

Karnataka Election 2023: ಚಂದ್ರು ಲಮಾಣಿ ವಿರುದ್ಧ ಡಿಸಿ ಪತ್ರ; ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಮತ್ತೊಂದು ಸಂಕಷ್ಟ

Doctor Chandru Lamani

Doctor Chandru Lamani

ಶಿರಹಟ್ಟಿ (ಗದಗ): ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭೆ ಕ್ಷೇತ್ರದ (Karnataka Election 2023) ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ಅವರಿಗೆ ಸಂಕಷ್ಟ ಎದುರಾಗಿದೆ. ಬಿಜೆಪಿಯಿಂದ ಟಿಕೆಟ್‌ ಸಿಕ್ಕರೂ ಬಿ ಫಾರಂಗಾಗಿ ಅವರು ಇನ್ನಿಲ್ಲದ ಪರದಾಟ ಅನುಭವಿಸುತ್ತಿದ್ದಾರೆ. ಸರ್ಕಾರಿ ವೈದ್ಯ ಹುದ್ದೆಗೆ ಅವರು ರಾಜೀನಾಮೆ ನೀಡಿದರೂ, ಅದು ಅಂಗೀಕಾರವಾಗದ ಕಾರಣ ಚಂದ್ರು ಲಮಾಣಿ ಅವರಿಗೆ ಸಂಕಷ್ಟ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್‌ 20 ಕೊನೆಯ ದಿನವಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ರಾಜೀನಾಮೆ ಅಂಗೀಕಾರವಾಗದ ಕಾರಣ ಅವರು ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಆಯುಕ್ತರಿಗೆ ಗದಗ ಜಿಲ್ಲಾಧಿಕಾರಿಯು ಚಂದ್ರು ವಿರುದ್ಧ ಪತ್ರ ಬರೆದಿದ್ದು, ಅವರಿಗೆ ಮತ್ತೊಂದು ಕಷ್ಟ ಎದುರಾದಂತಾಗಿದೆ.

ಗದಗ ಡಿಸಿಯಿಂದ ಆಯುಕ್ತರಿಗೆ ಪತ್ರ

ಡಾ.ಚಂದ್ರು ಲಮಾಣಿ ವಿರುದ್ಧ ಆರೋಗ್ಯ ಇಲಾಖೆ ಆಯುಕ್ತರಿಗೆ ಗದಗ ಜಿಲ್ಲಾಧಿಕಾರಿ ವೈಶಾಲಿ ಅವರು ಪತ್ರ ಬರೆದಿರುವ ಕಾರಣ ಇವರಿಗೆ ಮತ್ತೊಂದು ತೊಂದರೆ ಎದುರಾಗಿದೆ. “ಡಾ.ಚಂದ್ರು ಲಮಾಣಿ ವಿರುದ್ಧ ಆರೋಪಗಳಿವೆ. ಇವುಗಳಿಂದ ತಪ್ಪಿಸಿಕೊಳ್ಳಲು, ವಿಚಾರಣೆಯಿಂದ ನುಣುಚಿಕೊಳ್ಳಲು ಅವರು ರಾಜೀನಾಮೆ ನೀಡಿದ್ದಾರೆ. ಚಂದ್ರು ಅವರು ಸರ್ಕಾರಿ ನೌಕರರ ನಿಯಮಗಳ ಶಿಸ್ತು ಉಲ್ಲಂಘನೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

“ಇದುವರೆಗೆ ಅವರು ಸರ್ಕಾರಿ ನೌಕರರಾಗಿದ್ದರೂ ರಾಜಕೀಯ ಪ್ರಭಾವ ಬಳಸಿ, ಶಿರಹಟ್ಟಿ ಅಭ್ಯರ್ಥಿ ಅಂತ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ, ಅವರು ಸರ್ಕಾರಿ ನೌಕರರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಅವರು ನಿಯಮ ಉಲ್ಲಂಘಿಸಿದ್ದಾರೆ. ಹಾಗೆಯೇ, ಮಾದರಿ ನೀತಿ ಸಂಹಿತೆ ಆದೇಶ ಪಾಲಿಸದೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮೇಲ್ನೋಟಕ್ಕೆ ಎಲ್ಲ ಆರೋಪಗಳು ಸಾಬೀತಾದ ಕಾರಣ ಡಾ.ಚಂದ್ರು ಲಮಾಣಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಂಗೀಕಾರ ಆಗುತ್ತಿಲ್ಲ ಏಕೆ?

ಬಿಜೆಪಿಗೆ ಟಿಕೆಟ್‌ ಸಿಗುವ ಸೂಚನೆಯಿದ್ದ ಕಾರಣ ಡಾ.ಚಂದ್ರು ಲಮಾಣಿ ಅವರು ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಇದುವರೆಗೆ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಇದೇ ಕಾರಣದಿಂದಾಗಿ ಬಿಜೆಪಿಯು ಚಂದ್ರು ಅವರಿಗೆ ಬಿ ಫಾರಂ ನೀಡುತ್ತಿಲ್ಲ. ಮತ್ತೊಂದೆಡೆ, ಬೆಂಗಳೂರಿನಿಂದ ಇವರಿಗೆ ರಾಜೀನಾಮೆಯ ಅಂಗೀಕಾರದ ಪ್ರಮಾಣಪತ್ರ ಸಿಗುತ್ತಿಲ್ಲ. ಇದೆಲ್ಲ ಕಾರಣಗಳಿಂದಾಗಿ ಚಂದ್ರು ಆತಂಕಕ್ಕೀಡಾಗಿದ್ದಾರೆ. ಹಾಗಾಗಿಯೇ ಅವರು ಚುನಾವಣೆ ಪ್ರಚಾರಕ್ಕೂ ತೆರಳುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Election: 189 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ: 52 ಹೊಸಬರು; ಇಬ್ಬರು ಎರಡು ಕಡೆ ಸ್ಪರ್ಧೆ

ಹಾಗಾಗಿ, ಡಾ.ಚಂದ್ರು ಲಮಾಣಿ ಅವರು ಬಿಜೆಪಿಯಿಂದ ಬಿ ಫಾರಂ ಪಡೆಯುತ್ತಾರಾ? ಅವರ ರಾಜೀನಾಮೆ ಅಂಗೀಕಾರವಾಗುತ್ತದಾ? ಹೊಸ ದೂರಿನ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಸೇರಿ ಹಲವು ಪ್ರಶ್ನೆಗಳು ಮೂಡಿವೆ.

Exit mobile version