ಗದಗ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. ತಂಗಿಯ ಮಗನೊಂದಿಗೆ ಮಹಿಳೆಯೊಬ್ಬರು ನೀರು ತರಲು ಕೃಷಿ ಹೊಂಡಕ್ಕೆ ಹೋದಾಗ ಘಟನೆ ನಡೆದಿದೆ.
ಗೀತಾ ಹೆಸರೂರು (34), ಮನೋಜ ಕವಲೂರು (5) ಮೃತರು. ಮೊದಲಿಗೆ ಮನೋಜ್ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದಾನೆ. ಬಾಲಕನ ರಕ್ಷಣೆಗೆ ಹೋಗಿದ್ದ ಗೀತಾ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಶಾಲೆ ರಜೆ ಹಿನ್ನೆಲೆ ದೊಡ್ಡಮ್ಮನ ಮನೆಗೆ ಮನೋಜ್ ಬಂದಿದ್ದ. ಬಾಲಕನ ಜತೆಗೆ ಕೃಷಿ ಹೊಂಡಕ್ಕೆ ಗೀತಾ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ!
ಕಾಂಗ್ರೆಸ್‌ಗೆ ಅಲ್ಲ.. ಬಿಜೆಪಿಗೆ ಮತ ಹಾಕುವೆ ಎಂದಿದ್ದಕ್ಕೆ ರಸ್ತೆಗೆ ಎಳೆದು ತಂದು ಕೈ-ಕಾಲು ಮುರಿದರು ದುರುಳರು
ಕೊಪ್ಪಳ: ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ (Assault Case) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ದ್ಯಾಮಣ್ಣ ಬಾಲನಗೌಡರ್ ಹಲ್ಲೆಗೊಳಗಾದ ಬಿಜೆಪಿ ಮುಖಂಡರಾಗಿದ್ದಾರೆ. ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ಘಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರಾದ ಗವಿಸಿದ್ದ, ಬಾಳಪ್ಪ, ನೀಲಪ್ಪ, ಗಂಗಣ್ಣ ಎಂಬುವವರು ದ್ಯಾಮಣ್ಣನಿಗೆ ಹಲ್ಲೆ ನಡೆಸಿದ್ದಾರೆ. ನಿನ್ನೆ ಶನಿವಾರ ರಾತ್ರಿ ದ್ಯಾಮಣ್ಣ ಮನೆಗೆ ಕಾಂಗ್ರೆಸ್ ಮುಖಂಡರು ಬಂದಿದ್ದಾರೆ. ಈ ವೇಳೆ ದ್ಯಾಮಣ್ಣ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ, ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: 108 Ambulance : 3 ತಿಂಗಳ ವೇತನ ಬಾಕಿ; ನಾಳೆ ರಾತ್ರಿಯಿಂದಲೇ 108 ಆಂಬ್ಯುಲೆನ್ಸ್ ಸೇವೆ ಬಂದ್!
ಇದರಿಂದ ಸಿಟ್ಟಾದ ಕೈ ಕಾರ್ಯಕರ್ತರು, ಕಾಂಗ್ರೆಸ್‌ಗೆ ಯಾಕೆ ಮತ ಹಾಕುವುದಿಲ್ಲ ಎಂದು ದ್ಯಾಮಣ್ಣನ ಮೇಲೆ ಎರಗಿದ್ದಾರೆ. ಬಳಿಕ ದ್ಯಾಮಣ್ಣನನ್ನು ರಸ್ತೆಗೆಳೆದು ತಂದು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ. ದ್ಯಾಮಣ್ಣನ ಕೈ-ಕಾಲು ಮುರಿದಿದ್ದಾರೆ. ಗಾಯಾಳನ್ನು ದ್ಯಾಮಣ್ಣನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಪತಿ ಮೇಲಿನ ಸಿಟ್ಟಿಗೆ ಮೂಕ ಮಗುವನ್ನೇ ಕಾಲುವೆಗೆ ಎಸೆದಳು; ಮೊಸಳೆ ಬಾಯಲ್ಲಿತ್ತು ಮೃತದೇಹ!
ಕಾರವಾರ : ತಾಯಿಯೊಬ್ಬಳು ಕೋಪದಲ್ಲಿ ತನ್ನ ಮಗುವನ್ನೇ ಕಾಲುವೆಗೆ (Murder case ) ಎಸೆದಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ಘಟನೆ ನಡೆದಿದೆ. ಸಾವಿತ್ರಿ ಎಂಬಾಕೆ ತನ್ನ ಆರು ವರ್ಷದ ಮಗನನ್ನು ನಾಲೆಗೆ ಎಸೆದಿದ್ದಾಳೆ. ವಿನೋದ್ (6) ಮೃತ ದುರ್ದೈವಿ.
ಮಗುವು ಮೂಕನಾಗಿದ್ದರಿಂದ ಸಾವಿತ್ರಿ ಹಾಗೂ ರವಿಕುಮಾರ್ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ರವಿಕುಮಾರ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಎಂದು ಸಾವಿತ್ರಿಗೆ ಬೈಯ್ಯುತ್ತಿದ್ದ.
ನಿನ್ನೆ ಶನಿವಾರ ರಾತ್ರಿಯೂ ಸಹ ಸಾವಿತ್ರಿ ಹಾಗೂ ಪತಿ ರವಿಕುಮಾರ್ ಜತೆಗೆ ಜಗಳ ನಡೆದಿದೆ. ಪತಿ ಜತೆಗೆ ಗಲಾಟೆ ಆದಾಗ ಸಾವಿತ್ರಿ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮಗುವನ್ನು ಹುಡುಕಾಡಲು ಮುಂದಾಗಿದ್ದಾರೆ.
ಆದರೆ ಮಗು ಸಿಗದಿದ್ದಾಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಹಾಲಮಡ್ಡಿಯಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಮೃತದೇಹವು ಪತ್ತೆಯಾಗಿದೆ. ನಾಲೆಗೆ ಎಸೆಯಲ್ಪಟ್ಟಾಗ ಮೊಸಳೆಯೊಂದು ಮಗುವಿನ ಬಲಗೈ ಕಚ್ಚಿ ಎಳೆದು ಹೋಗಿತ್ತು. ಆರು ವರ್ಷದ ಗಂಡು ಮಗುವಿಗಾಗಿ ನಿನ್ನೆ ಶನಿವಾರ ರಾತ್ರಿಯಿಂದ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ಇದನ್ನೂ ಓದಿ: Nijjar Killing: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದ ಮೂವರ ಬಂಧನ; ಭಾರತದ ಪ್ರತಿಕ್ರಿಯೆ ಏನು?
ಭಾನುವಾರ ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಆಗಾಗ ಮೊಸಳೆಯು ಕಾಣಿಸಿಕೊಂಡಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದೆ. ಮುಳುಗು ತಜ್ಞರು ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹ ಬಿಡಿಸಿಕೊಂಡು ಬಂದಿದ್ದಾರೆ.
ಇನ್ನೂ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಅಪ್ಪ-ಅಮ್ಮನ ಜಗಳದಲ್ಲಿ ಏನು ತಿಳಿಯದ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ