ಗದಗ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ನಿರ್ಲಕ್ಷ್ಯದಿಂದ ಚಲಾಯಿಸಿದ ಜೆಸಿಬಿ (JCB Accident) ಹರಿದಿದ್ದು, ಮಗುವಿನ ಪ್ರಾಣ (child death) ತೆಗೆದಿದೆ. ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ಈ ದುರ್ಘಟನೆ ನಡೆದಿದೆ.
ಮನ್ವಿತ್ ಮಂಜುನಾಥ್ ಏರಿಮನಿ (5) ಎಂಬ ಹೆಸರಿನ ಐದು ವರ್ಷದ ಬಾಲಕ ಜೆಸಿಬಿ ಚಾಲಕನ ಅಜಾಗರೂಕತೆಗೆ ಬಲಿಯಾಗಿದ್ದಾನೆ. ಪಟ್ಟಣದ ಶಬ್ಬೀರ್ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಮಗುವನ್ನು ಗಮನಿಸದೆ ಚಾಲಕ ಜೆಸಿಬಿ ಚಲಾಯಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಜೆಸಿಬಿ ಚಾಲಕನ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಬಸ್ ಅಪಘಾತ, ಮೂವರಿಗೆ ಗಾಯ
ಬೆಂಗಳೂರು: ಭೂಪಸಂದ್ರದಲ್ಲಿ ಬಿಎಂಟಿಸಿ ಬಸ್ ಅಫಘಾತಕ್ಕೀಡಾಗಿದ್ದು, ಮೂವರಿಗೆ ಗಾಯಗಳಾಗಿವೆ. ಚಾಲಕನಿಗೆ ತಲೆಸುತ್ತಿ ಬಂದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಆರ್.ಟಿ. ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿಯ ಕೊನೆಯ ಟ್ರಿಪ್ ಆಗಿದ್ದರಿಂದ ಬಸ್ಸಿನಲ್ಲಿ 15 ಜನ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಆರ್‌ಟಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ಮತ್ತಿನಲ್ಲಿ ಮಹೀಂದ್ರಾ ಥಾರ್ ಡಿಕ್ಕಿ
ಬೆಂಗಳೂರು: ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಮೆಟ್ರೊ ಗ್ರಿಲ್ಸ್‌ಗೆ ಮಹೀಂದ್ರಾ ಥಾರ್ ಡಿಕ್ಕಿ ಹೊಡೆಸಿದ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ನಡೆದಿದೆ. ರಸ್ತೆಯಲ್ಲಿ ಕಡಿಮೆ ವಾಹನಗಳಿದ್ದದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಚಾಲಕ ಕುಡಿದ ಮತ್ತಿನಲ್ಲಿ ಥಾರ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ಬ್ಯಾರಿಕೇಡ್‌ಗೆ ಜೀಪು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬ್ಯಾರಿಕೇಡ್ ಪುಡಿ ಪುಡಿಯಾಗಿದೆ. ಮಲ್ಲೇಶ್ವರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Road Accident: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿದ್ದ ಬಸ್ ಅಪಘಾತ; ಬಳ್ಳಾರಿಯ ವ್ಯಕ್ತಿ ಸಾವು, ಮೂವರಿಗೆ ಗಾಯ