Site icon Vistara News

Gadaga swameeji Row : ದಿಂಗಾಲೇಶ್ವರ ಸ್ವಾಮೀಜಿಗೆ ದಿಗ್ಬಂಧನ, ಭಾವೈಕ್ಯತಾ ಯಾತ್ರೆ ಸಂಪನ್ನ!

Gadaga swameeji row Bhavaikyatha dina

ಗದಗ: ಗದಗದ ಇಬ್ಬರು ಸ್ವಾಮೀಜಿಗಳ ನಡುವಿನ ಕದನ (Gadaga Swameeji Row) ಜೋರಾಗಿದೆ. ಭಾವೈಕ್ಯತೆ ದಿನಾಚರಣೆಗೆ ಸಂಬಂಧಿಸಿ ತೋಂಟದ ಶ್ರೀ ಸಿದ್ದರಾಮ ಸ್ವಾಮೀಜಿಗಳು (Tontadarya Siddarama Swamiji) ಮತ್ತು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳಿಂದ (Shirahtti Dingaleshwara Swamiji) ನಡುವೆ ಭಾರಿ ಕದನವೇ ನಡೆದಿದೆ. ಇದೀಗ ಸಾರ್ವಜನಿಕರ ಸಮ್ಮುಖದಲ್ಲಿ ತೋಂಟದಾರ್ಯ ಮಠದಲ್ಲಿ ಹಿಂದೆ ಘೋಷಿಸಿದಂತೆ ಭಾವೈಕ್ಯತೆ ದಿನಾಚರಣೆ ನಡೆದರೆ, ಅದರ ವಿರುದ್ಧ ಕರಾಳ ದಿನ ಆಚರಿಸಲು ಮುಂದಾಗಿದ್ದ ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳಿಗೆ ಮಠದಿಂದ ಹೊರಬರಲು ಕೂಡಾ ಪೊಲೀಸರು ಅವಕಾಶ ನೀಡಲಿಲ್ಲ.

ತೋಂಟದಾರ್ಯ ಮಠದಲ್ಲಿ ಭಾವೈಕ್ಯತೆ ದಿನಾಚರಣೆ ಮಾಡಬಾರದು ಎಂದು ಆಗ್ರಹಿಸಿದ್ದ ಶಿರಹಟ್ಟಿ ದಿಂಗಾಲೇಶ್ವರ ಶ್ರೀಗಳು, ಹಾಗೊಂದು ವೇಳೆ ಭಾವೈಕ್ಯ ದಿನ ಆಚರಿಸಿದರೆ ತಾವು ಕರಾಳ ದಿನ ಆಚರಿಸುವುದಾಗಿ ಹೇಳಿದ್ದರು. ಭಾವೈಕ್ಯ ದಿನ ಆಚರಿಸಿದರೆ ಗಡ್ಡಿ ಪೆಟ್ರೋಲ್ ಬಂಕ್‌ನಿಂದ ತೋಂಟದಾರ್ಯ ಮಠದ ವರೆಗೆ ಕರಾಳ ದಿನ ಹೋರಾಟದ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು.

ಇದನ್ನೂ ಓದಿ : ತೋಂಟದಾರ್ಯ ಶ್ರೀ vs ದಿಂಗಾಲೇಶ್ವರ ಶ್ರೀ: ಇಂದು ಗದಗದಲ್ಲಿ ಭಾವೈಕ್ಯತೆ ದಿನ vs ಕರಾಳ ದಿನ

ಸುಗಮವಾಗಿ ನಡೆದ ಭಾವೈಕ್ಯತಾ ದಿನಾಚರಣೆ

ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ 75 ನೇ ಜಯಂತಿ ಹಿನ್ನೆಲೆಯಲ್ಲಿ ತೋಂಟದ ಸಿದ್ದರಾಮ ಶ್ರೀಗಳು ಆಯೋಜಿಸಿದ್ದ ಭಾವೈಕ್ಯತೆ ಯಾತ್ರೆಗೆ ನಿಗದಿಯಂತೆ ಗದಗ ನಗರದ ಭೀಷ್ಮ ಕೆರೆ ಅಂಗಳದಿಂದ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಪ್ರಗತಿಪರರು, ಮಠದ ಭಕ್ತರು ವಿದ್ಯಾರ್ಥಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಯಾತ್ರೆ ತೋಂಟದಾರ್ಯ ಮಠವನ್ನು ತಲುಪಿತು.

tontada siddarama sri dingaleshwara sri siddalinga sri

ಶಿರಹಟ್ಟಿ ಫಕೀರೇಶ್ವರ ಸ್ವಾಮಿಜಿಗಳ ವಿರೋಧದ ನಡುವೆಯೂ ನಡೆದ ಯಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಹಲವು ಸ್ವಾಮೀಜಿಗಳು ಸಾಥ್‌ ನೀಡಿದ್ದರು. ಭಾವೈಕ್ಯತೆ ಪದ ಬಳಸದಂತೆ ಫಕೀರ ದಿಂಗಾಲೇಶ್ವರ ಶ್ರೀಗಳು ತಾಕೀತು ಮಾಡಿದ್ದರು. ಆದರೆ, ಅವರ ಮಾತಿಗೆ ಇಲ್ಲಿ ಬೆಲೆ ಸಿಗಲಿಲ್ಲ.

tontada siddarama sri dingaleshwara sri siddalinga sri

ಕರಾಳ ದಿನಾಚರಣೆಗೆ ಅವಕಾಶ ನೀಡದ ಪೊಲೀಸರು

ಭಾವೈಕ್ಯತಾ ದಿನಾಚರಣೆ ನಡೆಯುತ್ತಿದ್ದಂತೆಯೇ ಇದ್ದ ಫಕೀರ ದಿಂಗಾಲೇಶ್ವರ ಶ್ರೀಗಳು ಕರಾಳ ದಿನದ ಯಾತ್ರೆಗೆ ಸಿದ್ಧತೆ ನಡೆಸಿದರು. ಆದರೆ, ಅವರನ್ನು ಪೊಲೀಸರು ಮಠದ ಹೊರಗೆ ಬರಲು ಅವಕಾಶ ನೀಡಲಿಲ್ಲ.

ಶಿರಹಟ್ಟಿ ಫಕೀರೇಶ್ವರ ಮಠದಿಂದ ಹೊರಗಡೆ ಕಾರಿನಲ್ಲಿ ಹೊರಡಲು ದಿಂಗಾಲೇಶ್ವರ ಸ್ವಾಮೀಜಿಗಳು ಅನುವಾದರು. ಆದರೆ, ಪೊಲೀಸರು ಫಕೀರೇಶ್ವರ ಮಠದ ದ್ವಾರ ಬಾಗಿಲು ಬಂದ್ ಮಾಡಿ, ಅಡ್ಡಲಾಗಿ ಪೊಲೀಸ್ ವಾಹನ ನಿಲ್ಲಿಸಿದರು.

ನಾನು ಬೆಳ್ಳಟ್ಟಿ ಗ್ರಾಮಕ್ಕೆ ಹೋಗುತ್ತೇನೆ ಎಂದರೂ ಪೊಲೀಸರು ಅವರನ್ನು ಹೊರಗೆ ಹೋಗಲು ಬಿಡಲಿಲ್ಲ. ಅವರು ಕಾರಿಗೆ ಹತ್ತಿದರೂ ಫಕೀರ ದಿಂಗಾಲೇಶ್ವರ ಶ್ರೀಗಳ ಕಾರನ್ನು ಪೊಲೀಸರು ಸುತ್ತುವರಿದರು. ಪೊಲೀಸರು ಹೊರಗೆ ಹೋಗಲು ಬಿಡದ ಹಿನ್ನೆಲೆಯಲ್ಲಿ ದ್ವಾರ ಬಾಗಿಲು ಬಳಿ ಕಾರಿನಲ್ಲಿಯೇ ಅರ್ಧಗಂಟೆಗೂ ಹೆಚ್ಚುಕಾಲ ಕಳೆದರು ಶ್ರೀಗಳು. ಬಳಿಕ ಶ್ರೀಗಳು ಮರಳಿ ಮಠ ಸೇರಿದರು.

tontada siddarama sri dingaleshwara sri siddalinga sri

ಪೊಲೀಸ್‌ ಇಲಾಖೆಯಿಂದ ದೌರ್ಜನ್ಯ: ದಿಂಗಾಲೇಶ್ವರ ಶ್ರೀಗಳ ಆರೋಪ

ಮೂರುಸಾವಿರ ಮಠದಲ್ಲಿ ವಿವಾದ ಹುಟ್ಟುಹಾಕಿದ್ದೇ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹಾಗೂ ಸಿದ್ಧಲಿಂಗ ಶ್ರೀಗಳು. ಹೀಗಾಗಿ ನಾನು ಅವರನ್ನು ಭಾವೈಕ್ಯತೆ ಹರಿಕಾರ ಎಂದು ಕರೆಯುವುದಕ್ಕೆ ಆಕ್ಷೇಪಿಸಿದ್ದೇನೆ. ಭಾವೈಕ್ಯತಾ‌ ಸಮಾವೇಶ, ಯಾತ್ರೆಗೆ ನನ್ನ ವಿರೋಧವಿಲ್ಲ. ಭಾವೈಕ್ಯತೆ ಹರಿಕಾರ ಹಾಗೂ ದಿನಾಚರಣೆಗೆ ಮಾತ್ರ ನನ್ನ ವಿರೋಧವಿದೆ. ಅದರಲ್ಲೂ ಪ್ರತ್ಯೇಕವಾಗಿ ಒಬ್ಬ ಸ್ವಾಮಿಜಿಗಳಿಗೆ ಮಾಡ್ತಿರೋದು ನನ್ನ ವಿರೋಧವಿದೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು. ತಮ್ಮನ್ನು ತಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ ಅವರು, ನಮ್ಮ ಕೆಲಸಕ್ಕೂ ಬಿಡಲಿಲ್ಲ ಎಂದು ಬೇಸರಿಸಿದರು.

ʻʻನಮ್ಮ ಮಠದ ಫಕ್ಕೀರೇಶ್ವನಿಗೆ 500 ವರ್ಷದ ಭಾವೈಕ್ಯತೆ ಇದೆ.. ತೋಂಟದಾರ್ಯ ಮಠದವರು ಕೇವಲ ನಾಲ್ಕು ವರ್ಷದಿಂದ ಪ್ರಾರಂಭಿಸಿದ್ದಾರೆ.. ಕಳೆದ ವರ್ಷದಿಂದ ನನ್ನ ಗಮನಕ್ಕೆ ಬಂದಿದೆ. ಅಂದಿನಿಂದಲೇ ವಿರೋಧ ಮಾಡಿದ್ದೇನೆ.ʼʼ ಎಂದು ಹೇಳಿದ ಅವರು, ಪೊಲೀಸರು ಇಡೀ ರಾತ್ರಿ ಶಿರಹಟ್ಟಿಯನ್ನು, ಇಲ್ಲಿನ‌ ಜನರನ್ನು ನಿದ್ದೆಗೆಡಿಸಿದ್ದಾರೆ ಎಂದರು.

ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹಾಗೂ ಸಿದ್ಧಲಿಂಗ ಶ್ರೀಗಳು ಎಲ್ಲ ಕಡೆ ವಿವಾದವನ್ನೇ ಸೃಷ್ಟಿಸುತ್ತಿದ್ದಾರೆ. ಶ್ರೀಗಳು ಸುಮ್ಮನೇ ಆರಾಮಾಗಿ ಕೂರುವ ಶ್ರೀಗಳಲ್ಲ. ವಿವಾದಗಳನ್ನ ಸೃಷ್ಟಿ ಮಾಡುವ ಸ್ವಾಮೀಜಿಗಳು. ಲಿಂಗಾಯತ,‌ ಮೂರುಸಾವಿರ ಮಠ ಸೇರಿದಂತೆ ಇಲ್ಲಿಯೂ ಒಡಕು ಮೂಡಿಸುತ್ತಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಆಕ್ಷೇಪಿಸಿದರು.

Exit mobile version