ಗದಗ: ದೇವರು-ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರ ನಡುವೆ ಇಲ್ಲೊಬ್ಬ ಮುಸ್ಲಿಂ ಧರ್ಮದ ವ್ಯಕ್ತಿ ತನ್ನ ಮಗನ ಆಸೆ, ಪ್ರೀತಿ, ಹಠಕ್ಕೆ ಕಟ್ಟುಬಿದ್ದು ತನ್ನ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ (Ganesh Chaturthi) ಮಾಡುವ ಮೂಲಕ “ದೇವರೊಬ್ಬನೇ ನಾಮ ಹಲವು” ಎಂಬ ಭಾವೈಕ್ಯತೆಯ ಸಂದೇಶಕ್ಕೆ ಪೋಷಣೆ ನೀಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಧರ್ಮದ ಮುಸ್ತಾಪ್ ಮಾಬುಸಾಬ್ ಕೋಲ್ಕಾರ ಎಂಬುವವರು ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ.
ಮುಸ್ತಾಪ್ ಮತ್ತು ಯಾಸ್ಮಿನಾಬಾನು ದಂಪತಿಗೆ ಐವರು ಮಕ್ಕಳು. ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ. ದೇವರು-ಧರ್ಮ, ಜಾತಿ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅರಾಜಕತೆ, ಧರ್ಮಯುದ್ದದ ಬಗ್ಗೆ ಏನೂ ಅರಿಯದ ಪುಟಾಣಿ ತಾನು ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು. ಕುಣಿದು ಕುಪ್ಪಳಿಸಬೇಕೆಂಬ ಹಂಬಲ.. ಈ ಬಗ್ಗೆ ತಂದೆ-ತಾಯಿ ಹತ್ತಿರ ಕೇಳಿ ಅತ್ತು ಕರೆದು ಹಠ ಮಾಡಿದ್ದರೂ ತಂದೆ ಹೇಗೂ ಸಮಾಧಾನ ಮಾಡಿ ಮಾತು ಮರೆಸಿದ್ದರು.
ಆದರೆ ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶ ಮೂರ್ತಿ ತರುವುದನ್ನು ಗಮನಿಸಿದ ಹಜರತಲಿ, ತನ್ನ ಅಣ್ಣನೊಂದಿಗೆ ಗಣೇಶಮೂರ್ತಿ ಮಾರಾಟ ಮಾಡುವಲ್ಲಿಗೆ ಹೋಗಿ ಗಣೇಶನ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಇದನ್ನು ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದರು. ಗ್ರಾಮೀಣ ಭಾಗದ ಪರಿಸರ, ಜಾತಿ ಧರ್ಮದ ಹಂಗಿಲ್ಲದೇ ಎಲ್ಲರೂಂದಿಗೆ ಸಹೋದರತ್ವ ಭಾವನೆಯಿಂದ ಬದುಕುವುದನ್ನು ಅರಿತ ತಂದೆ-ತಾಯಿ ಮಗನ ಬಗ್ಗೆ ಒಂದಷ್ಟೂ ಬೇಸರ ಮಾಡಿಕೊಳ್ಳದೇ ಗಣೇಶನ ಮೂರ್ತಿಯಿಂದ ಶ್ರದ್ಧಾ ಭಕ್ತಿಯಿಂದ ಬರ ಮಾಡಿಕೊಂಡು ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜಿಸಿದ್ದಾರೆ.
ಮಗ ಹಜರತಲಿಗೆ ಗಣೇಶನ ಮೂರ್ತಿಯೆಂದರೆ ತುಂಬಾ ಇಷ್ಟ.. ಅಂಗನವಾಡಿಯಲ್ಲೂ ರಾಷ್ಟ್ರೀಯ ಹಬ್ಬದ ದಿನ ಹಿಂದೂ ದೇವರ ವೇಷಭೂಷಣ ತೊಡಿಸಿದ್ದೇವೆ. ಮಕ್ಕಳು ದೇವರ ಸಮಾನ ಅಂತಾರೆ, ದೇವರೇ ಮನೆಗೆ ಬಂದಂತಾಗಿದ್ದು ಶೃದ್ಧೆ, ಭಕ್ತಿ, ಸಂಭ್ರಮದಿಂದ ಗಣೇಶನ ಮೂರ್ತಿಯನ್ನು ಪೂಜಿಸುತ್ತೇವೆ. ಪ್ರತಿವರ್ಷವೂ ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು
ಮುಸ್ತಪಾ- ಯಾಸ್ಮಿನಾಬಾನು ಸಂತಸ ವ್ಯಕ್ತಪಡಿಸಿದ್ದಾರೆ.