Site icon Vistara News

Gold Fruad : Hallmark ಚಿನ್ನಾಭರಣ ನೀಡಿ ಲೋನ್‌ ಪಡೆಯಲು ಯತ್ನ: SBI ಮ್ಯಾನೇಜರ್‌ ಜಾಣ್ಮೆ ಮುಂದೆ ನಡೆಯದ ಆಟ!

Gold loan and Fraud

ಗದಗ: ಅದು ಹಾಲ್‌ಮಾರ್ಕ್‌ ಮುದ್ರೆ ಹೊಂದಿದ ಅಪ್ಪಟ ಚಿನ್ನದ (Hall Mark Gold) ಆಭರಣ. ಅದನ್ನು ಹಿಡಿದುಕೊಂಡು ಬಂದಿದ್ದು ಒಬ್ಬ ಮಹಿಳೆ. ಮನೆಯಲ್ಲಿ ಸ್ವಲ್ಪ ಕಷ್ಟ ಇದೆ, ಅಡವು ಇಟ್ಟುಕೊಂಡು ಸಾಲ ಕೊಡಿ (Gold Loan) ಎಂದು ಬ್ಯಾಂಕ್‌ಗೆ ಬಂದಿದ್ದಳು. ಆಕೆ ತಂದಿದ್ದ ಚಿನ್ನಾಭರಣಗಳನ್ನು ತೂಕ ಮಾಡಿ ನೋಡಿದರೆ ಅದಕ್ಕೆ 4.2 ಲಕ್ಷ ರೂ. ಸಾಲ ಕೊಡಬಹುದಿತ್ತು. ಎಲ್ಲ ಪ್ರಕ್ರಿಯೆಗಳು ಮುಗಿದು ಇನ್ನೇನು ಸಾಲ ಪಾಸ್‌ ಮಾಡಬೇಕು ಅನ್ನುವಷ್ಟರಲ್ಲಿ ಮ್ಯಾನೇಜರ್‌ಗೆ (Bank Manager) ಯಾಕೋ ಸಣ್ಣ ಸಂಶಯಬಂತು. ಅವರು ಕೂಡಲೇ ಗಮನಿಸಿದಾಗ ಹೊರಬಿತ್ತು ಒಂದು ದೊಡ್ಡ ವಂಚನಾ ಜಾಲ.

ಇದೊಂಥರಾ ಗೋಲ್ಡ್‌ ಸ್ಕ್ಯಾಮ್‌! (Gold scam) ನಕಲಿ ಬಂಗಾರದ ಆಭರಣಗಳನ್ನು ತೋರಿಸಿ ಮೋಸ ಮಾಡುವ ಹೊಸ ಐಡಿಯಾ. ಅಷ್ಟಕ್ಕೂ ಆಗಿದ್ದೇನು? ಗೊತ್ತಾಗಿದ್ದು ಹೇಗೆ ಎಂಬುದಕ್ಕೆ ಈ ಸ್ಟೋರಿ ಓದಿ. ಈ ಘಟನೆ ನಡೆದಿದ್ದು ಗದಗ ಜಿಲ್ಲೆ ಮುಂಡರಗಿ ಎಸ್ ಬಿ ಐ‌ ಬ್ಯಾಂಕ್‌ನಲ್ಲಿ.

ಮುಂಡರಗಿಯ ಶೈನಾಜಬಿ ಹೊಸಮನಿ ಅನ್ನುವ ಮಹಿಳೆ ಚಿನ್ನ ಹಿಡಿದುಕೊಂಡು ಬ್ಯಾಂಕ್‌ಗೆ ಬಂದಿದ್ದರು. ಏನೋ ಸಮಸ್ಯೆ ಇದೆ ಎಂದು ಹೇಳಿ ಲೋನ್‌ ಕೇಳಿದ್ದರು. ಚಿನ್ನಾಭರಣ ಇರುವುದರಿಂದ ಲೋನ್‌ ಕೊಡಬಹುದು ಎಂದು ಪ್ರಾಥಮಿಕವಾಗಿ ತೀರ್ಮಾನ ಮಾಡಲಾಯಿತು.

14.5 ಗ್ರಾಂ ತೂಕದ 06 ಬಂಗಾರದ ಬಳೆಗಳು ಹಾಗೂ 5 ಗ್ರಾಂ ತೂಕದ 04 ಉಂಗುರಗಳು, ಒಟ್ಟು 4.2 ಲಕ್ಷ ರೂ. ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಯಿತು. ಹಾಲ್ ಮಾರ್ಕ್ ಇರುವ ಕಾರಣಕ್ಕಾಗಿ ಇದರ ಬಗ್ಗೆ ಯಾವುದೇ ಅಪನಂಬಿಕೆ ಪ್ರಶ್ನೆ ಬರಲಿಲ್ಲ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗದಗ ಶಾಖೆ

ಇನ್ನೇನು ಲೋನ್‌ ಫಿಕ್ಸ್‌ ಆಯಿತು ಎನ್ನುವ ಹಂತದಲ್ಲಿ ಮ್ಯಾನೇಜರ್‌ಗೆ ಯಾಕೋ ಸಂಶಯ ಬಂತು. ಹೀಗಾಗಿ ಅಕ್ಕಸಾಲಿಗನನ್ನು ಕರೆಸಿ ಪರೀಕ್ಷಿಸೋಣ ಎಂಬ ತೀರ್ಮಾನಕ್ಕೆ ಬಂದರು. ಆದರೆ, ಪರೀಕ್ಷೆ ಮಾಡಿದಾಗ ಬೆಚ್ಚಿ ಬೀಳಿಸೋ ಸತ್ಯ ಹೊರಗೆ ಬಂತು.

ಅದೇನೆಂದರೆ, ಅವ್ಯಾವುದೂ ಚಿನ್ನದ ಆಭರಣಗಳಾಗಿರಲಿಲ್ಲ. ಬದಲಾಗಿ ತಾಮ್ರಕ್ಕೆ ದಪ್ಪವಾಗಿ ಒಪ್ಪ ಮಾಡಿ ತಂದಿದ್ದಾಗಿತ್ತು. ಅದಕ್ಕೆ ಹಾಲ್‌ ಮಾರ್ಕ್‌ ಕೂಡಾ ಇದ್ದಿದ್ದರಿಂದ ಯಾವ ಕಾರಣಕ್ಕೂ ಸಂಶಯ ಬರುವ ಪರಿಸ್ಥಿತಿ ಇರಲಿಲ್ಲ.

ಈ ನಡುವೆ, ಮಹಿಳೆಯನ್ನು ವಿಚಾರಿಸಲಾಯಿತು. ಮೊದಲು ಚಿನ್ನ ನನ್ನದೇ ಎಂದು ವಾದಿಸಿದ ಆಕೆ ಬಳಿಕ ಇದನ್ನು ಮೂವರು ಸೇರಿ ನನ್ನ ಕೈಯಲ್ಲಿ ಬ್ಯಾಂಕ್‌ಗೆ ಕಳುಹಿಸಿ ಲೋನ್‌ ಮಾಡಲು ಹೇಳಿದ್ದು ಎಂದು ಒಪ್ಪಿಕೊಂಡಳು. ಕೂಡಲೇ ಅವರನ್ನೂ ಪೊಲೀಸರ ಮೂಲಕ ಕರೆಸಲಾಯಿತು.

ಆಗಿದ್ದೇನೆಂದರೆ, ಗದಗನ ಯಶ್ ಪ್ರಕಾಶ ಬಾಕಳೆ, ಬೆಟಗೇರಿಯ ರವಿ ಮಾಕಾಪೂರ ಹಾಗೂ ಕೊಂಬಳಿ ಗ್ರಾಮದ ಸತೀಶ ಸೂರಣಗಿ ಎಂಬವರು ಮುಸ್ಲಿಂ ಮಹಿಳೆಯನ್ನು ಬಳಸಿಕೊಂಡು ಬ್ಯಾಂಕ್‌ಗೆ ವಂಚನೆ ಮಾಡಲು ಮುಂದಾಗಿದ್ದರು. ನಕಲಿ ಆಭರಣಗಳನ್ನು ಅಸಲಿಯಂತೆ ಬಿಂಬಿಸಿ ಟೋಪಿ ಹಾಕಲು ಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದೆ ಅವರೇ ಈಗ ಪೊಲೀಸರ ಬಂಧನದಲ್ಲಿದ್ದಾರೆ.

ನಿಜವೆಂದರೆ ಗದಗದಲ್ಲಿ ಇದು ಮೊದಲೇನಲ್ಲ. ಈ ಹಿಂದೆಯೂ ಗೋಲ್ಡ್‌ ಸ್ಕ್ಯಾಮ್‌ ನಡೆದಿದೆ ಎಂಬ ಆರೋಪಗಳಿವೆ. ಈ ಪ್ರಕರಣದಲ್ಲಿ ಬಂಧನ ಮಾಡಿದರೆ ಸಾಲದು, ತಾಮ್ರದ ಆಭರಣಗಳಿಗೆ ಹಾಲ್‌ ಮಾರ್ಕ್‌ ಹಾಕಿಕೊಡುವುದು ಯಾರು ಎಂಬುದನ್ನೂ ಪತ್ತೆ ಹಚ್ಚಬೇಕು ಎಂಬ ಆಗ್ರಹ ಕೇಳಿಬಂದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Exit mobile version