ಗದಗ: ಲಿಂಗಾಯತ ಮತಗಳು (Karnataka Elections) ಬಿಜೆಪಿ ಎಂಬ ಕಮಲ ಚಿಹ್ನೆಯಡಿ ಕಟ್ಟಿದ ಅಣೆಕಟ್ಟಿನಲ್ಲಿ ಭದ್ರವಾಗಿವೆ. ಆ ಡ್ಯಾಂ ಒಡೆಯಲು ಇಂಥ ಹತ್ತು ಡಿ.ಕೆ ಶಿವಕುಮಾರ್‌ಗಳು ಬಂದರೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಸಚಿವ ಸಿ.ಸಿ. ಪಾಟೀಲ್. ಲಿಂಗಾಯತರ ಡ್ಯಾಂ ಒಡೆದಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ʻʻಲಿಂಗಾಯತರ ನಿಷ್ಠೆ, ಲಿಂಗಾಯತ ಸಮಾಜದ ಬೆಂಬಲ ಯಾವತ್ತೂ ಬಿಜೆಪಿಗೆ ಇದೆ. ನಾವು ಪ್ರತಿ ದಿನ ಅಣೆಕಟ್ಟಿನ ಲೆವೆಲ್ ಗೇಜ್ ಮಾಡ್ತಿರ್ತೇವೆ. ಮೇ 10ರಂದು ಡ್ಯಾಂ ಲೆವೆಲ್ ಗೊತ್ತಾಗುತ್ತದೆ. 13ನೇ ತಾರೀಕಿಗೆ ಗೇಜ್ ಅಳೆಯುವಾಗ ನಿಮ್ಮ ಡ್ಯಾಂ ಖಾಲಿ ಇರುತ್ತದೆ. ಬಿಜೆಪಿ ಡ್ಯಾಂ ತುಂಬಿ ತುಳುಕುತ್ತಿರುತ್ತದೆʼʼ ಎಂದು ಅವರು ತಿರುಗೇಟು ನೀಡಿದರು.
ʻʻಒಬ್ಬ ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಇಷ್ಟು ಅನನುಭವಿ ಎಂದು ತಿಳಿದುಕೊಂಡಿರಲಿಲ್ಲ. ಎಷ್ಟೊಂದು ಬಾಲಿಶವಾಗಿ ಮಾತನಾಡುತ್ತಿದ್ದಾರೆʼʼ ಎಂದು ಸಿ.ಸಿ. ಪಾಟೀಲ್ ಹೇಳಿದರು.
ʻʻಲಿಂಗಾಯತ ಮತ ಬ್ಯಾಂಕಿನಲ್ಲಿ ಯಾವುದೇ ದ್ವಂದ್ವವಿಲ್ಲ. ನಮ್ಮ ನೀರು ನಿಮ್ಮ ಕಡೆ ಹರಿದು ಬರಲು ಸಾಧ್ಯವಿಲ್ಲ. ಯಾಕೆಂದರೆ ನೀರು ಯಾವಾಗಲೂ ಇಳಿಜಾರಿನಲ್ಲಿ ಕಡೆ ಹರಿಯುತ್ತದೆಯೇ ಹೊರತು ಏರಿ ಕಡೆ ಹರಿಯೋದಿಲ್ಲ.ʼʼ ಎಂದ ಸಿ.ಸಿ ಪಾಟೀಲ್, ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ನಮ್ಮ ಜನತೆಗೆ ಬೇಕಾಗಿಲ್ಲ.ʼʼ ಎಂದರು.
ʻʻ50 ವರ್ಷದಲ್ಲಿ ನೀವು ಮುಖ್ಯಮಂತ್ರಿ ಮಾಡಿದ್ದು ಒಬ್ಬೇ ಇಬ್ಬರನ್ನು. ವೀರೇಂದ್ರ ಪಾಟೀಲ್ ಅವರನ್ನು ಮಾತ್ರ ಸಿಎಂ ಮಾಡಿದ್ರಿ. ಆದರೆ, ಅವರನ್ನು ಯಾವ ರೀತಿ ನಡೆಸಿಕೊಂಡ್ರಿ ಅನ್ನೋದು ರಾಜ್ಯದ ಜನತೆಗೆ ಗೊತ್ತಿದೆ. ಸೂರ್ಯ ಚಂದ್ರರಿರುವರೆಗೂ ಆ ಕಹಿ ಘಟನೆ ನೆನಪಿರುತ್ತದೆʼʼ ಎಂದು ಹೇಳಿದರು ಸಿ.ಸಿ. ಪಾಟೀಲ್.
ನಾವು 130 ಸ್ಥಾನಗಳನ್ನು ಗೆದ್ದು ನಮ್ಮ ಸರ್ಕಾರ ಸ್ಥಾಪನೆ ಮಾಡ್ತೇವೆ. ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಿಲ್ಲ ಬಿಡಿ. ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತರನ್ನು ಸಿಎಂ ಮಾಡ್ತೇವೆ ಅನ್ನೋ ಧೈರ್ಯ, ತಾಕತ್ತು ನಿಮ್ಮಲ್ಲಿದೆಯಾ?. ಎಂದು ಕೇಳಿದರು ಪಾಟೀಲ್.
ʻʻಯಾರೋ ಒಬ್ರು ಜಗದೀಶ್ ಶೆಟ್ಟರ್ ಹೋಗಿದ್ದಕ್ಕೆ ಅವರನ್ನು ಸ್ಟಾರ್ ಕ್ಯಾಂಪೇನರ್ ಮಾಡ್ತೀರಿ. ಅವರೇ ನಮ್ಮ ನಾಯಕರು ಅಂತಿದ್ದೀರಿ. ಬಿಜೆಪಿ ನಾಯಕನೊಬ್ಬ ನಿಮ್ಮ ಪಕ್ಷಕ್ಕೆ ಬಂದಿದ್ದರಿಂದ ಶಕ್ತಿ ಬರುತ್ತೆ ಎಂದು ಅಂದುಕೊಂಡ್ರೆ ನೀವು ಎಷ್ಟೊಂದು ಅಶಕ್ತರಿದ್ದೀರಿ ಎನ್ನುವುದು ಸ್ಪಷ್ಟವಾಗುತ್ತದೆʼʼ ಎಂದರು.
ರಾಹುಲ್ ಬಂದರೆ ಬಿಜೆಪಿ ಗೆಲ್ಲೋದು ಗ್ಯಾರಂಟಿ
ರಾಹುಲ್ ಗಾಂಧಿ ಅವರು ಏಪ್ರಿಲ್ 23ರಂದು ಕೂಡಲಸಂಗಮಕ್ಕೆ ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆ ಜನ ಹಾಗೂ ಅಭ್ಯರ್ಥಿಗಳು ಪುಣ್ಯವಂತರು. ಯಾಕೆಂದರೆ, ರಾಹುಲ್ ಗಾಂಧಿ ಕಾಲಿಟ್ಟು ಹೋದರೆ ಅಲ್ಲಿ ಗ್ಯಾರಂಟಿಯಾಗಿ ಬಿಜೆಪಿ ಬರುತ್ತದೆ. ರಾಹುಲ್ ಗಾಂಧಿ ಅವರು ರಾಷ್ಟ್ರದ ತುಂಬ ಭಾರತ ಜೋಡೋ ಯಾತ್ರೆ ಮಾಡಿದರು. ನಂತರ ನಂತರ 176-177 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಅದರಲ್ಲಿ ಕಾಂಗ್ರೆಸ್ ಆರಿಸಿ ಬಂದಿದ್ದು ಕೇವಲ ನಾಲ್ಕು ಕ್ಷೇತ್ರಗಳಲ್ಲಿʼʼ ಎಂದು ವ್ಯಂಗ್ಯವಾಡಿದರು. ಹೀಗಾಗಿ ಆದಷ್ಟು ಬೇಗನೇ ಗದಗ ಜಿಲ್ಲೆಗೂ ರಾಹುಲ್ ಗಾಂಧಿ ಬಂದು ಹೋಗಲಿ ಅಂತ ನಾನು ಪ್ರಾರ್ಥನೆ ಮಾಡ್ತೇನೆ ಎಂದರು.
ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಟ್ಟಿಗೆದ್ದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಟಿಕೆಟ್ ಸಿಗದಿರುವುದಕ್ಕೆ ಅವರಿಗೆ ನೋವಾಗಿದೆ. ಆದರೆ, ಟಿಕೆಟ್ ಸಿಗಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅವರು ಬಳಸಿದ ಭಾಷೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಮಣ್ಣ ಲಮಾಣಿ ಭಾವನೆ ವ್ಯಕ್ತಪಡಿಸುವ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇರಲಿ ಅನ್ನೋ ಎಚ್ಚರಿಕೆ ಕೊಡುತ್ತೇನೆʼʼ ಎಂದು ಹೇಳಿದರು.
ಇದನ್ನೂ ಓದಿ : Karnataka Election 2023: ನಾನು ಜೈಲಿಗೆ ಹೋಗಿ ಬಂದಿದ್ದೇನೆ; ರಾಹುಲ್, ಸೋನಿಯಾ, ಡಿಕೆಶಿ ಕತೆ ಏನು?: ಜನಾರ್ದನ ರೆಡ್ಡಿ