Site icon Vistara News

Missing Case : ಬಸ್ ನಿಲ್ದಾಣದಲ್ಲಿ ಕಳೆದು ಹೋಗಿದ್ದ 5 ವರ್ಷದ ಮಗು: ಎರಡೇ ಗಂಟೆಯಲ್ಲಿ ತಾಯಿ ಮಡಿಲು ಸೇರಿಸಿದ ಪೊಲೀಸರು

missing case

ಗದಗ: ಇತ್ತೀಗಷ್ಟೇ ಉತ್ತರ ಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಪುಟ್ಟ ಮಗುವೊಂದು ಹೊರ ಬಿದ್ದಿತ್ತು. ತಕ್ಷಣ ಚೈನ್ ಮೂಲಕ ರೈಲು ನಿಲ್ಲಿಸಿದ ಪುಟ್ಟ ಬಾಲಕಿಯ ತಂದೆ, ಸುಮಾರು 16 ಕಿಮೀ ಹಿಂದೆ ಓಡಿ, ತನ್ನ ಮಗಳು ಬಿದ್ದ ಜಾಗವನ್ನು ಪತ್ತೆ ಮಾಡಿದ್ದ. ಕಗ್ಗತ್ತಲಿನ ನಿರ್ಜನ ಪ್ರದೇಶದಲ್ಲಿ ತನ್ನ ಮಗುವಿನ ಆರ್ತನಾದ ಕೇಳಿ, ತನ್ನ ಕರುಳ ಬಳ್ಳಿಯನ್ನು ತಾಯಿ ಒಡಲಲ್ಲಿ ಸೇರಿಸಿದ್ದ. ಕರುಳಕುಡಿಯ ಘಟನೆ ಉತ್ತರ ಪ್ರದೆಶದಲ್ಲಿ ನಡೆದಿದೆ ಅಂದರೂ, ಇಡೀ ಭಾರತವೇ ಈ ತಂದೆ ಮಗಳ ಕಥೆಗೆ ಕಂಬನಿ ಮಿಡಿದಿತ್ತು. ಇದೀಗ ಆ ಘಟನೆ ಮಾಸುವ ಮುನ್ನವೇ, ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ತಾಯಿಯಿಂದ ದೂರವಾಗಿದ್ದ ಐದು ವರ್ಷದ ಪುಟ್ಟ ಕಂದಮ್ಮ (missing case) ಮತ್ತೆ ತಾಯಿಯ ಮಡಿಲು ಸೇರಿದ್ದಾಳೆ.

ಹೌದು, ಚಿತ್ರದುರ್ಗ ಮೂಲದ ತಾಯಿ ಶಶಿಕಲಾ,(ಊರು ಹಾಗೂ ತಾಯಿಯ ಹೆಸರು ಬದಲಾಯಿಸಲಾಗಿದೆ) ತನ್ನ ನಾಲ್ಕು ಹೆಣ್ಣು ಮಕ್ಕಳು ಹಾಗೂ ಓರ್ವ ಸಂಬಂಧಿ ಜತೆಗೂಡಿ, ಕಳೆದ ಎರಡು ದಿನಗಳ ಹಿಂದೆ, ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಆಗಮಿಸಿದ್ದರು. ದೇವರ ದರ್ಶನ ಮುಗಿಸಿ ಮರಳಿ ಮಧ್ಯಾಹ್ನದ ವೇಳೆಗೆ ನರಗುಂದ ಪಟ್ಟಣದ ಮೂಲಕ ಹೊಸಪೇಟೆಯ ಹುಲಿಗೆಮ್ಮ ದೇವಿ ದರ್ಶನಕ್ಕೆ ತೆರಳುವವರಿದ್ದರು. ನರಗುಂದ ಪಟ್ಟಣಕ್ಕೆ ಆಗಮಿಸಿದ್ದ, ತಾಯಿ ಶಶಿಕಲಾ ಹಾಗೂ ಮಕ್ಕಳು, ಗದಗ ಬಸ್ ಹತ್ತಿದ್ದರು. ಹುಣ್ಣಿಮೆ ಹತ್ತಿರವಿದ್ದ ಕಾರಣ, ಬಹುತೇಕ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಬಸ್ಸುಗಳು ಸಾಕಷ್ಟು ಗಿಜಿಗುಡುತ್ತಿದ್ದವು.

ಇದೇ ವೇಳೆ, ತಾಯಿ ಶಶಿಕಲಾ ಹಾಗೂ ಮಕ್ಕಳು ಗದಗ ನಗರಕ್ಕೆ ತೆರಳುವ ಬಸ್ಸನ್ನ ಹತ್ತಿದ್ದಾರೆ. ಬಸ್ಸಿನೊಳಗೆ ಸಾಕಷ್ಟು ಪ್ರಯಾಣಿಕರಿದ್ದ ಹಿನ್ನೆಲೆ, ನಾಲ್ಕು ಹೆಣ್ಣುಮಕ್ಕಳಲ್ಲಿ ಒಂದಿಬ್ಬರು ಮುಂದಿನ ಸೀಟ್‌ನಲ್ಲಿ ತಾಯಿ ಶಶಿಕಲಾ ಕಣ್ಣಿಗೆ ಕಂಡಿದ್ದಾರೆ. ಹೀಗಾಗಿ ತನ್ನ ನಾಲ್ಕೂ ಮಕ್ಕಳು ನನ್ನ ಜತೆಗೆ ಬಸ್ಸಿನಲ್ಲಿದ್ದಾರೆ ಎಂದು ಭಾವಿಸಿದ ತಾಯಿ ಶಶಿಕಲಾ, ನರಗುಂದದಿಂದ ಗದಗ ಬಸ್ ನಿಲ್ದಾಣದವರೆಗೂ ಪ್ರಯಾಣ ಮುಂದುವರೆಸಿದ್ದಳು. ಇನ್ನೇನು ಗದಗ ಬಸ್ ನಿಲ್ದಾಣದಲ್ಲಿ ತನ್ನ ಮಕ್ಕಳನ್ನ ಬಸ್ಸಿನಿಂದ ಇಳಿಸಿಕೊಳ್ಳುವಾಗ, ನಾಲ್ಕು ಮಕ್ಕಳಲ್ಲಿ ಮೂವರಷ್ಟೇ ಬಸ್ಸಿನಲ್ಲಿ ತನ್ನ ಜತೆಗೆ ಬಂದಿರುವುದು ಎಂದು ಗೊತ್ತಾಗಿದೆ. ತಕ್ಷಣ ಅಳುತ್ತಾ, ಗೋಗರೆಯುತ್ತಾ ಗದಗ ನಗರದ ಶಹರ ಪೊಲೀಸ್ ಠಾಣೆಗೆ ಆಗಮಿಸಿ, ತನ್ನ ಮೂವರು ಮಕ್ಕಳಲ್ಲಿ, ಕೊನೆಯ ಐದು ವರ್ಷದ ಮಗಳು ಸ್ನೇಹ (ಮಗುವಿನ ಹೆಸರು ಬದಲಾಯಿಸಲಾಗಿದೆ) ಕಾಣ್ತಿಲ್ಲ ಎಂದು ಪೊಲೀಸರೆದುರು ತನ್ನ ಕರುಳಬಳ್ಳಿಯ ಕಥೆ ವಿವರಿಸಿದ್ದಳು.

Missing case

ತನ್ನ ನಾಲ್ಕು ಮಕ್ಕಳಲ್ಲಿ ಓರ್ವ ಮಗಳು ಸ್ನೇಹಾ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳೆದುಹೋಗಿದ್ದಳು. ಹೌದು, ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ, ಬಸ್ ಅನ್ನು ಹತ್ತುವಾಗ, ಐದು ವರ್ಷದ ಪುಟ್ಟ ಬಾಲಕಿ ಸ್ನೇಹ ಗದ್ದಲದ ನಡುವೆ ಬಸ್ ಹತ್ತಲು ಆಗದೇ, ನಿಲ್ದಾಣದಲ್ಲಿಯೇ ಉಳಿದುಕೊಂಡುಬಿಟ್ಟಿದ್ದಳು. ತನ್ನ ನಾಲ್ಕೂ ಮಕ್ಕಳು ತನ್ನ ಜತೆಯೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆಂದು ತಿಳಿದಿದ್ದ ತಾಯಿ ಶಶಿಕಲಾಗೆ, ಕೊನೆಯ ಪುಟ್ಟ ಮಗಳು ಸ್ನೇಹ, ತನ್ನ ಜೊತೆಗೆ ಪ್ರಯಾಣಿಸುತ್ತಿಲ್ಲ ಅನ್ನೋದು ಗೊತ್ತಾಗಲೇ ಇಲ್ಲ. ಹೀಗೆ, ತನ್ನ ತಾಯಿ ಹಾಗೂ ತನ್ನ ಅಕ್ಕಂದಿರನ್ನು ಕಳೆದುಕೊಂಡಿದ್ದ, ಪುಟ್ಟ ಬಾಲಕಿ ಸ್ನೇಹ, ಸುಮಾರು ಎರಡು ಗಂಟೆಗಳ ಕಾಲ ನರಗುಂದದ ಬಸ್ ನಿಲ್ದಾಣದಲ್ಲಿ ಅಳುತ್ತಾ ಕುಳಿತಿದ್ದಳು.

ಇದನ್ನು ಗಮನಿಸಿದ ಸ್ಥಳೀಯ ಕಾಲೇಜು ವಿದ್ಯಾರ್ಥಿಯೋರ್ವ, ಪುಟ್ಟ ಮಗುವಿನ ಆಕ್ರಂದನ ನೋಡಲಾರದೇ, ಸ್ಥಳೀಯ ಪೊಲೀಸ್ ಠಾಣೆಗೆ ಬಾಲಕಿಯನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದ. ತಡಮಾಡದ ಪೊಲೀಸ್ ಪಡೆ, ತಮ್ಮ ವಾಟ್ಸಪ್ ಗ್ರೂಪ್‌ಗಳಲ್ಲಿ ಮಗು ಮಿಸ್ಸಿಂಗ್ ಆಗಿರುವ ಮಾಹಿತಿಯನ್ನ, ಜಿಲ್ಲೆಯ ಎಲ್ಲ ಸ್ಟೇಷನ್‌ಗಳಿಗೂ ರವಾನಿಸಿತ್ತು. ಇದೇ ಸಮಯಕ್ಕೆ ಗದಗ ನಗರದ ಶಹರ ಪೊಲೀಸ್ ಠಾಣೆಗೂ, ತಾಯಿ, ಮಗು ಕಳೆದುಕೊಂಡ ಬಗ್ಗೆ, ಇತ್ತ, ಮಗು ತನ್ನವರನ್ನ ಕಳೆದುಕೊಂಡ ಬಗ್ಗೆ ಎರೆಡೂ ಕಡೆಯಿಂದಲೂ ಕರುಳ ಬಳ್ಳಿಯ ದೂರುಗಳು ಬಂದು ಮುಟ್ಟಿದ್ದವು.

ವಾಟ್ಸಪ್ ಮೂಲಕ ಬಂದ ಮಗುವಿನ ಫೋಟೋವನ್ನ ಪೊಲೀಸರು, ತಾಯಿ ಶಶಿಕಲಾಗೆ ತೋರಿಸಿ, ಇವಳೇನಾ ನೋಡು ನಿನ್ನ ಮಗಳು ಎಂದಾಗ, ತಾಯಿಗೆ ಮತ್ತೇ ಪುನರ್ಜನ್ಮ ಬಂದಂತಾಗಿತ್ತು. ಇತ್ತ ನರಗುಂದ ಪೊಲೀಸ್ ಠಾಣೆಯಲ್ಲಿದ್ದ ಪುಟ್ಟ ಮಗು ಸ್ನೇಹಳಿಗೂ ನಿನ್ನ ತಾಯಿ, ನಿನ್ನ ಅಕ್ಕಂದಿರು ನಿನ್ನ ಕರೆದುಕೊಂಡು ಹೋಗೋಕೆ ಇಲ್ಲಿಗೆ ಬರುತ್ತಿದ್ದಾರೆ ಅಂದಾಗ, ಅಕ್ಷರಶಃ ಮಗು ಕಣ್ಣೀರಿನಲ್ಲೇ, ಸಂಭ್ರಮಿಸಿ, ಮುಗಿಲೆತ್ತರದ ತನ್ನ ದುಃಖಕ್ಕೆ ಧಣಿವರಿಸಿದ್ದಳು. ಇತ್ತ 60 ಕಿಲೋ. ಮೀಟರ್ ದೂರದಷ್ಟು ತನ್ನ ಮಗುವನ್ನ ಬಿಟ್ಟು ಹೋಗಿದ್ದ, ತಾಯಿ ಶಶಿಕಲಾಗೆ, ಮತ್ತೇ ಮರಳಿ ತನ್ನ ಮಗಳ ಅಪ್ಪುಗೆ ಪಡೆಯೋಕೆ, ನರಗುಂದ ಪೊಲೀಸ್ ಠಾಣೆ ಆರು ಸಾವಿರ ಕೀಲೋಮೀಟರ್ ನಷ್ಟು ದೂರವಾದಂತೆ ಭಾಸವಾಗಿತ್ತು.

ಅದೇನೆ‌ ಇರಲಿ. ಕೊನೆಗೂ ಪೊಲೀಸರ ಸುರಕ್ಷತೆಯಲ್ಲಿದ್ದ ಮಗು ಸ್ನೇಹಾಳನ್ನು ತಾಯಿ ಶಶಿಕಲಾಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಅದೇನೆ ಇರಲಿ, ಪಾಲಕರೇ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ ಎಂದು ಹೇಳುತ್ತಾ, ಬಾಲಕಿಯನ್ನ ಠಾಣೆಗೆ ಒಪ್ಪಿಸಿದ ಕಾಲೇಜು ವಿದ್ಯಾರ್ಥಿ ಹಾಗೂ ಇದೆಲ್ಲದರ ಜವಾಬ್ದಾರಿ ಹೊತ್ತಿದ್ದ ಖಾಕಿ ಪಡೆಗೆ ತಾಯಿ ಶಶಿಕಲಾ, ಪುಟ್ಟ ಮಗು ಸ್ನೇಹಾ ಮತ್ತು ಆಕೆಯ ಅಕ್ಕಂದಿರು ಕೃತಜ್ಞನತೆ ಸಲ್ಲಿಸಿದರು.

Exit mobile version