ಗದಗ: ನಾವು ನೋವಿನಲ್ಲಿ ನರಳುವಾಗ ಉಪಚರಿಸುವ ಎರಡನೇ ದೇವರು ಅಂದರೆ ಶುಶ್ರೂಷಕಿಯರು (Nursing staff) ಅಂತಾರೆ. ದೀಪಧಾರಿಣಿಯರಾದ ದಾದಿಯರು ಒಂದು ಆಸ್ಪತ್ರೆಯಲ್ಲಿ ಡಾಕ್ಟರ್‌ಗಳಿಗಿಂತಲೂ ಹೆಚ್ಚು ಆಪ್ತರಾಗುತ್ತಾರೆ. ಅವರು ಒಬ್ಬ ರೋಗಿಗೆ ಮಾಡುವ ಸೇವೆ ಒಬ್ಬ ತಾಯಿ ಮಗುವಿಗೆ ಮಾಡುವಷ್ಟು, ಒಬ್ಬ ಅಕ್ಕ ತಮ್ಮನಿಗೆ ಮಾಡುವಷ್ಟು. ಅದಕ್ಕೆಂದೇ ನಾವು ಅವರನ್ನು ಸಿಸ್ಟರ್.. (Sisters in Hospital) ಅಂತೇವೆ. ಪುರುಷ ನರ್ಸ್‌ಗಳನ್ನು ಬ್ರದರ್.. ಅಣ್ಣಾ (Brothers in hospital) ಅಂತೇವೆ. ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಾರೆ ಎನ್ನುವ ನಂಬಿಕೆಯೂ ಇದರ ಹಿಂದೆ ಖಂಡಿತ ಇದೆ.
ಇಲ್ಲೊಬ್ಬರು ಬ್ರದರ್ ಆಂಬ್ಯುಲೆನ್ಸ್‌ನಲ್ಲೇ (108 Ambulance) ಹೆರಿಗೆ ನೋವು ಅನುಭವಿಸಿದ ಹೆಣ್ಮಗಳಿಗೆ ಅಲ್ಲೇ ಹೆರಿಗೆ ಮಾಡಿಸುವ ಮೂಲಕ ಕಷ್ಟ ಕಾಲದಲ್ಲಿ ಸ್ಪಂದಿಸುವ ಅಣ್ಣ ನಾನು ಅಂತ ತೋರಿಸಿಕೊಟ್ಟಿದ್ದಾರೆ. ರಕ್ಷಾ ಬಂಧನ (Raksha Bandhan) ಹಬ್ಬದ ಮುನ್ನಾದಿನ (ಆಗಸ್ಟ್ 29) ಗದಗ ಜಿಲ್ಲೆಯಲ್ಲಿ ನಡೆದ ಘಟನೆ ಇದು.
ಗದಗ ತಾಲೂಕಿನ ಬಳಗಾನೂರು ಗ್ರಾಮದ ಸಲೀಮಾ ಮೆಹಬೂಬಸಾಬ ಮುದೆಪ್ಪನವರ್ ಎಂಬ ಮಹಿಳೆ ಗರ್ಭಿಣಿಯಾಗಿದ್ದರು. ಆಸ್ಪತ್ರೆಯಲ್ಲಿ ಹೆರಿಗೆ ನೋವೇನಾದರೂ ಕಂಡರೆ ಕೂಡಲೇ ಹೆರಿಗೆಗೆ ಕರೆದುಕೊಂಡು ಬನ್ನಿ ಎಂದಿದ್ದರು. ಆಗಸ್ಟ್ 29ರಂದು ಬೆಳಗ್ಗಿನ ಹೊತ್ತು ಸಲೀಮಾ ಅವರಿಗೆ ಹೊಟ್ಟೆಯಲ್ಲೇನೋ ನೋವಿನಂತೆ ಭಾಸವಾಯಿತು.
ಕೂಡಲೇ ಅವರು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಕರೆ ಬಂದ ತಕ್ಷಣವೇ ಆಂಬ್ಯುಲೆನ್ಸ್ ಚಾಲಕ ದಸ್ತಗೀರಸಾಬ ಅವರು ವಾಹನ ಹಿಡಿದುಕೊಂಡು ಧಾವಿಸಿದರು. ಅವರ ಜತೆಗೆ ನರ್ಸಿಂಗ್ ಸಿಬ್ಬಂದಿ ರವಿ ಬಡಿಗೇರ ಕೂಡಾ ಇದ್ದರು.
ಸಲೀಮಾ ಅವರನ್ನು ಆಸ್ಪತ್ರೆಗೆ ಕರೆತರುವ ದಾರಿಯಲ್ಲೇ ಹೆರಿಗೆ ನೋವು ಒಮ್ಮಿಂದೊಮ್ಮೆಗೇ ಜೋರಾಯಿತು. ಮಹಿಳೆ ನೋವಿನಿಂದ ನರಳಿದರು. ಬೇರೆ ಯಾರೇ ಆಗಿದ್ದರೂ ಆಸ್ಪತ್ರೆ ಇನ್ನೇನು ಹತ್ತಿರದಲ್ಲಿದೆ. ರಿಸ್ಕ್ ಬೇಡ ಎನ್ನುತ್ತಿದ್ದರೇನೋ. ಆದರೆ, ನರ್ಸಿಂಗ್ ಸಿಬ್ಬಂದಿ ರವಿ ಬಡಿಗೇರ ಅವರು ಸುಮ್ಮನೆ ಉಳಿಯಲಿಲ್ಲ.
ಕೂಡಲೇ ಹೆರಿಗೆ ಬೇಕಾಗುವ ರೀತಿಯಲ್ಲಿ ಅಲ್ಲೇ ಒತ್ತಡಗಳನ್ನು ಸೃಷ್ಟಿ ಮಾಡಿದರು. ಜತೆಗಿದ್ದವರ ಸಹಕಾರದಿಂದ ಆಗಲೇ ಹೊರಗೆ ಬರಲು ಕಾಯುತ್ತಿದ್ದ ಮಗುವನ್ನು ಅತ್ಯಂತ ಜತನದಿಂದ ಹೊರತೆಗೆದು ಹೆರಿಗೆ ಮಾಡಿಸಿಯೇ ಬಿಟ್ಟರು.
ಆಂಬ್ಯುಲೆನ್ಸ್ ಆಸ್ಪತ್ರೆ ತಲುಪುವದಕ್ಕಿಂತ ಮುಂಚೆಯೇ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ತಂಗಿಯಂಥ ಸಲೀಮಾ ಅವರಿಗೆ ನೋವಿನಿಂದ ಮುಕ್ತಿ ನೀಡಿದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಕೃಷ್ಣ ಮತ್ತು ಕೃಷ್ಣಾ ಸಂಬಂಧವೇ ಮಹಾಭಾರತದ ಪಂಚಾಂಗ; ದ್ರೌಪದಿ ಕಟ್ಟಿದ ಸೆರಗಿನ ತುಂಡೇ ರಕ್ಷಾಬಂಧನ!
ತಾಯಿ ಸಲೀಮಾ ಹಾಗೂ ಪುಟ್ಟ ಹೆಣ್ಣು ಮಗುವನು ಗದಗ ನಗರದ ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ.
ರವಿ ಬಡಿಗೇರ ಮತ್ತು ಸಿಬ್ಬಂದಿಗಳ ಸಮಯಪ್ರಜ್ಞೆಗೆ ಕುಟುಂಬಸ್ಥರು ಕೈಮುಗಿದು ವಂದಿಸಿದ್ದಾರೆ. ರವಿ ಬಡಿಗೇರ ಅವರಿಗೆ ಕೂಡಾ ತುಂಬು ನೆಮ್ಮದಿ. ಸಲೀಮಾ ಅವರು ಥ್ಯಾಂಕ್ಸ್ ಅಣ್ಣ ಅಂದಾಗ ಅವರಿಗೆ ಹೃದಯ ತುಂಬಿ ಬಂದಿತ್ತು.