Site icon Vistara News

Rama Mandir : ಗದಗದ ಶಿವಾನಂದ ಮಠಕ್ಕೂ ಅಯೋಧ್ಯೆಗೂ ಸಂಬಂಧ; ಬಂದಿದೆ ಆಮಂತ್ರಣ!

Gadaga shivananda Matt

ಗದಗ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ (Sri Rama Janmabhumi) ಜನವರಿ 22ರಂದು ನಡೆಯಲಿರುವ ಶ್ರೀ ರಾಮ ಮಂದಿರದ (Sri Rama Mandir) ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಗದಗದ ಶಿವಾನಂದ ಮಠದ ಕಿರಿಯ ಶ್ರೀಗಳಾದ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿ (Sadashivananda Bharati swamiji) ಅವರಿಗೆ ಆಹ್ವಾನ ಬಂದಿದೆ. ಶ್ರೀಗಳು ಜನವರಿ 20ರಂದೇ ಅಯೋಧ್ಯೆಗೆ ಹೊರಡಲಿದ್ದಾರೆ. ಈ ನಡುವೆ ಅಯೋಧ್ಯೆ ರಾಮ ಮಂದಿರಕ್ಕೂ ಶಿವಾನಂದ ಮಠಕ್ಕೂ ಹಿಂದಿನಿಂದಲೇ ನಂಟು ಇದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಶಿವಾನಂದ ಮಠದ 3ನೇ ಜಗದ್ಗುರುಗಳಾದ ನಂದೀಶ್ವರ ಶ್ರೀಗಳು ರಾಮ ಜನ್ಮಭೂಮಿ ಮುಕ್ತಿ ಹೋರಾಟದಲ್ಲಿ ಭಾಗವಹಿಸಿದ್ದು, 1992ರಲ್ಲೇ ಅಯೋಧ್ಯೆಗೆ ಶಿವಾನಂದ ಮಠದಿಂದಲೂ ಇಟ್ಟಿಗೆ ರವಾನಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಅಂದು ಶ್ರೀಗಳ ಗದ್ದುಗೆ ಬಳಿ ಇಟ್ಟಿಗೆ ಇಟ್ಟು ಪೂಜೆ ಮಾಡಿ ಅಯೋಧ್ಯೆಗೆ ರವಾನೆ ಮಾಡಲಾಗಿತ್ತು. ಇದೀಗ ‌ ದೇವಸ್ಥಾನದ ಲೋಕಾರ್ಪಣೆ ನಡೆಯಲಿದೆ. ಇದರಲ್ಲಿ ಭಾವಿಯಾಗಲು ಖುಷಿಯಾಗುತ್ತಿದೆ ಎಂದು ಶಿವಾನಂದ ಮಠದ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳು ಹೇಳಿದ್ದಾರೆ.

ರಾಮ ಮಂದಿರ ಈ ದೇಶದ ಅಸ್ಮಿತೆ

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಬಹಳ ಸಂತೋಷದ ವಿಚಾರ ಎಂದು ಹೇಳಿದ ಅವರು, ಈ ವಿಚಾರದಲ್ಲಿ ರಾಜಕೀಯವನ್ನು ಎಳೆದು ತರುವುದು ಅವರವರ ಅನುಕೂಲಕ್ಕೆ ತಕ್ಕ ಅಭಿಪ್ರಾಯ ಎಂದರು. ರಾಜಕೀಯ ದೃಷ್ಟಿಕೋನದಿಂದ ನೋಡುವುದು ರಾಜಕಾರಣಿಗಳು. ಅವರಿಗೆ ಯಾವುದು ಅನುಕೂಲವೋ ಆ ದೃಷ್ಟಿಯಿಂದ ಅವರು ನೋಡುತ್ತಾರೆ ಎಂದು ಶ್ರೀಗಳು ಹೇಳಿದರು. ಆದರೆ, ನನ್ನ ಪ್ರಕಾರ ರಾಮ ಮಂದಿರ ಭಾರತದ ಅಸ್ಮಿತೆ ಎಂದರು.

ರಾಮ ಮಂದಿರ ವಿಚಾರದಲ್ಲಿ ದೊಡ್ಡ ಹೋರಾಟವೇ ನಡೆದಿದೆ. ದೇವಸ್ಥಾನಕ್ಕೆ ದೊಡ್ಡ ಇತಿಹಾಸವೇ ಇದೆ. ಅದೆಲ್ಲ ದಾಖಲೆಗಳನ್ನು ಆಧರಿಸಿಯೇ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಇದನ್ನೂ ಆಧರಿಸಿಯೇ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ದೇಶದಲ್ಲಿ ಹಳ್ಳಿ ಹಳ್ಳಿಯಲ್ಲೂ ರಾಮನ ದೇವಸ್ಥಾನ ಇದೆ. ವಿಶೇಷವಾಗಿ ನಮ್ಮ ಮಠಕ್ಕೆ ಇನ್ನೂ ಅಪರೂಪ ಸಂಬಂಧ ಇದೆ ಎಂದು ಶ್ರೀಗಳು ವಿವರಿಸಿದರು.

ಎಲ್ಲಿ ತಾಯಿ ಶಬರಿ ರಾಮನಿಗಾಗಿ ಕಾದಳೋ ಅದೇ ಜಾಗದಲ್ಲಿ ನಮ್ಮ ಮಠದ ಶಿವಾನಂದ ಶ್ರೀಗಳು ಅನುಷ್ಠಾನ ಮಾಡಿದ್ದರು. 10-11 ವರ್ಷಗಳ‌ ಕಾಲ ಶಬರಿ ಕೊಳ್ಳದಲ್ಲಿ ಅನುಷ್ಠಾನ ಮಾಡಿ ಶಿವಾನಂದ ಶ್ರೀಗಳು ಜಗಜ್ಜನನಿಯ ಸಾಕ್ಷಾತ್ಕಾರ ಮಾಡಿಕೊಂಡರು ಎಂದು ವಿವರಿಸಿದರು.

ಅಥಣಿ ತಾಲೂಕಿನಲ್ಲಿ ಉಮಾರಾಮೇಶ್ವರ ದೇವಸ್ಥಾನ ಇದೆ. ಇಲ್ಲಿಂದಲೇ ರಾಜ್ಯಕ್ಕೆ ರಾಮನ ಪ್ರಥಮ ಪಾದ ಸ್ಪರ್ಷ ಆಗಿದೆ. ರಾಜ್ಯದಿಂದ ವಾಪಸ್ ಹೋಗಿದ್ದು‌ ಮೊಳಕಾಲ್ಮುರು ಬಳಿಯ ಜಟಂಗಿರಾಮೇಶ್ವ ದೇವಸ್ಥಾನದಿಂದ ಅನ್ನೋ ಪ್ರತೀತಿ ಇದೆ ಎಂದು ಹೇಳಿದ ಅವರು, ಸಿದ್ದೇಶ್ವರ ಶ್ರೀಗಳು ವಿಜಯಪುರದ ಆಶ್ರಮದಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಬಗ್ಗೆ ಪ್ರವಚನ ಕೊಡಿಸಿದ್ದರು ಎಂದು ಸದಾಶಿವಾನಂದ ಭಾರತಿ ನೆನಪಿಸಿಕೊಂಡಿದ್ದಾರೆ.

Exit mobile version