ಗದಗ: ಎದುರಿಗೆ ಬರುತ್ತಿದ್ದ ಬಸ್‌ಗೆ ಸೈಡ್ ಕೊಡಲು ಹೋಗಿ ಮತ್ತೊಂದು ಸಾರಿಗೆ ಬಸ್ ಕಂದಕಕ್ಕೆ ಉರುಳಿದೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರು ಕ್ರಾಸ್ ಬಳಿ (Road Accident) ಘಟನೆ ನಡೆದಿದೆ.
ಏಕಾಏಕಿ ಬಸ್ ಕಂದಕ್ಕೆ ಉರುಳಿದ ಪರಿಣಾಮ ಸುಮಾರು 20 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಜೇಂದ್ರಗಡದಿಂದ ಗದಗ ಕಡೆಗೆ ಬಸ್ ಹೊರಟಿತ್ತು. ಇದೇ ವೇಳೆ ಗದಗನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ದಾರಿ ಬಿಡುವಾಗ ಆಯತಪ್ಪಿ ಕಂದಕಕ್ಕೆ ಬಿದ್ದಿದೆ.
ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಪ್ರಯಾಣಿಕರಿಗೆ ಮತ್ತೊಂದು ಬಸ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಯಿತು. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂದಕ್ಕೆ ಉರುಳಿದ್ದ ಬಸ್ ಅನ್ನು ಮೇಲಕ್ಕೆತ್ತುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: Newborn Baby: ಟಾಯ್ಲೆಟ್‌ನಲ್ಲಿ ನವಜಾತ ಶಿಶುವನ್ನು ಬಿಸಾಡಿ ಹೋದಳು ಪಾಪಿ ತಾಯಿ
ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ
ಕಾರು ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ. ವಿಜಯನಗರದ ಕೂಡ್ಲಿಗಿ ತಾಲೂಕಿನಲ್ಲಿ ಬೆಳಗಿನ ಜಾವ ಘಟನೆ ನಡೆದಿದೆ. ಮೊರಬ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದೆ.
ಬೆಳಗಿನ ಜಾವ ಕಾರಲ್ಲಿ ಬರುವಾಗ ರಸ್ತೆ ಕಾಣದೇ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿರಬಹುದು ಅಂದಾಜಿಸಲಾಗಿದೆ. ಮೃತರನ್ನು ರಾಜು (36), ಕರಣ್ (17) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಅಭಿಷೇಕ, ಅಪ್ಪು ಎಂಬುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ನಾಲ್ವರು ಬಾಗಲಕೋಟೆ ಜಿಲ್ಲೆಯ ಅಮೀನಗಡ ಗ್ರಾಮದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ತಮ್ಮೂರಿಗೆ ಹೋಗುತ್ತಿದ್ದದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ