Site icon Vistara News

‌ವಚನಾನಂದ ಶ್ರೀ-ಯತ್ನಾಳ್‌ ನಡುವೆ ಜೋಕರ್‌-ಬ್ರೋಕರ್‌ ವಾರ್‌: ಸ್ವಾಮೀಜಿ ಬಣ್ಣ ಬಯಲು ಮಾಡುವೆ ಎಂದ ಶಾಸಕ

vachananda swamiji and mla yatnal talk war over panchamasali reservation

ವಿಜಯಪುರ/ಗದಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನಡುವಿನ ವಾಕ್ಸಮರ ಮುಂದುವರಿದಿದೆ.

ಗದಗದಲ್ಲಿ ಆಯೋಜನೆಯಾಗಿದ್ದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಶ್ರೀ ವಚನಾನಂದ ಸ್ವಾಮೀಜಿ, ಕೆಲವರು ನಮ್ಮ ಬಗ್ಗೆ ವ್ಯಕ್ತಿಗತವಾಗಿ ಟೀಕೆ ಮಾಡುತ್ತಾರೆ. ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ ಎಂದರೆ ಅವರಿಗಿಂತ ನಾವು ಮುಂದೆ ಇದ್ದೇವೆ ಅಂತ ಅರ್ಥ. ಜೋಕರ್‌ಗಳು ಟೀಕೆ ಮಾಡುತ್ತಾರೆ ಎಂದರೆ ನಾವು ತಲೆಕೆಡಿಸಿಕೊಳ್ಳುವದಿಲ್ಲ. ಜೋಕರ್‌ಗಳಿಗೆ ಜೋಕ್ ಇಲ್ಲ ಅಂದ್ರೆ ಜಾಬ್ ಇಲ್ಲ ಎಂದು ಮತ್ತೊಮ್ಮೆ ಬಸನಗೌಡ ಯತ್ನಾಳರನ್ನು ಜೋಕರ್ ಎಂದು ಸ್ವಾಮೀಜಿ ಸಂಬೋಧಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಚಿವ ಮುರುಗೇಶ್ ನಿರಾಣಿ ಸಭೆ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿ, ಎಲ್ಲ ಸಮಾಜದಲ್ಲೂ ಒಳ್ಳೆಯವರು ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಹಾಗೆಂದು ಕೂಡಲಸಂಗಮ ಶ್ರೀಗಳಿಗೂ ನಮಗೂ ಯಾವ ಮುನಿಸಿಲ್ಲ. ಮೂರೂ ಪೀಠವನ್ನು ನಾವೆ ಮಾಡಿದ್ದೇವೆ. 80ಲಕ್ಷ ಜನರಿಗಾಗಿ ಇನ್ನೂ ಎರಡು ಪೀಠ ಮಾಡುತ್ತೇವೆ. ಕೂಡಲಸಂಗಮ ಶ್ರೀಗಳಂತೆ ಬೀದಿಗಿಳಿದು ಹೋರಾಟ ಮಾಡಲು ನಮಗಾಗುತ್ತಾ? ಎಂದರು.

ವಿಜಯಪುರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಹರಿಹರ ವಚನಾನಂದಶ್ರೀ ಬ್ರೋಕರ್ ಸ್ವಾಮಿ. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ರೂ. ವಸೂಲಿ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್‌ವೈ ಅವರಿಂದ ಹರಿಹರ ಶ್ರೀ 10 ಕೋಟಿ ರೂ. ತೆಗೆದುಕೊಂಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ‌. ಮಠದಲ್ಲಿ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ಮಾಡಿದ್ದಾರೆ. ಅದನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಹರಿಹರ ಶ್ರೀಗಳ ಬಣ್ಣ ಬಯಲು ಮಾಡುತ್ತೇನೆ‌ ಎಂದರು.

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ಮಾಡಿದ್ದಾಗಿ ಸಚಿವ ಮುರುಗೇಶ್‌ ನಿರಾಣಿ ಕುರಿತು ಪ್ರತಿಕ್ರಿಯಿಸಿ, ಯಾವ ಮಠ ಕಟ್ಟಿದ್ದಾರೆ, ಯಾಕೆ ಕಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಾರು ಮಠ ಕಟ್ಟಿದ್ದರು, ಯಾರು ಬೆನ್ನಿಗೆ ಚೂರಿ ಹಾಕಿದರು ಎಲ್ಲವೂ ಗೊತ್ತಿದೆ. ಯಾವ ಕಾರಣಕ್ಕೆ ಮಠ ಕಟ್ಟಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ಮಠ ಕಟ್ಟಿದ್ದು ಸಮಾಜದ ಉದ್ದಾರಕ್ಕಲ್ಲ, ಮಂತ್ರಿ ಸ್ಥಾನಕ್ಕಾಗಿ. ಮುಂದಿನ ದಿನಗಳಲ್ಲಿ ಜನರೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿ ಹೋರಾಟ ಸ್ವಾರ್ಥದ್ದು, ಒಕ್ಕಲಿಗರಿಗೆ ನನ್ನ ಬೆಂಬಲ: ಚೇತನ್‌ ಅಹಿಂಸಾ

Exit mobile version