Site icon Vistara News

Karnataka Election: ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಸಿದ ಗಾಲಿ ಜನಾರ್ದನ ರೆಡ್ಡಿ; ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ

#image_title

ಕೊಪ್ಪಳ: ಮಾಜಿ ಸಚಿವ, ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರು ಮಂಗಳವಾರ ಗಂಗಾವತಿಯಲ್ಲಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಮನೆಯಲ್ಲಿ ಗೋಪೂಜೆ ಸಲ್ಲಿಸಿ, ಟೆಂಪಲ್ ರನ್ ಮಾಡಿದ ಮಾಡಿದ ಅವರು, ನಂತರ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು. ಪತ್ನಿ ಲಕ್ಷ್ಮಿ ಅರುಣ, ಮಗಳು ಬ್ರಹ್ಮಣಿ ಹಾಗೂ ಅಳಿಯ ರಾಜೀವರೆಡ್ಡಿಯೊಂದಿಗೆ ತಹಸೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ರೋಡ್ ಶೋದಲ್ಲಿ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ,, ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ‌ಪಕ್ಷ ಮಹತ್ವದ ಸ್ಥಾನ ಹೊಂದುತ್ತದೆ. 2028ಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದೇ ಬರುತ್ತದೆ. ಕೆಲವರು ಕುತಂತ್ರದಿಂದ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜಕೀಯ ಕುತಂತ್ರ ಮಾಡಿದವು. ಆದರೆ ಜನರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನ ಆರಿಸಿ ಕಳುಹಿಸಬೇಕು. ಮಹಾತ್ಮಗಾಂಧಿ ವೃತ್ತದಲ್ಲಿ ನೀಡಿದ ವಾಗ್ದಾನ ಈಡೇರಿಸುತ್ತೇನೆ. ಬರುವ ದಿನಗಳಲ್ಲಿ ಗಂಗಾವತಿಯಿಂದಲೇ ರಾಜ್ಯ ಆಡಳಿತ ನಡೆಸುವಂತಾಗುತ್ತದೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗಂಗಾವತಿ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಬಳ್ಳಾರಿಯ ಜನರಷ್ಟೇ ಪ್ರೀತಿಯಿಂದ ಗಂಗಾವತಿ ಜನ ಸ್ವಾಗತಿಸಿದ್ದಾರೆ. ನಾನು ಬಳ್ಳಾರಿ ಜನರನ್ನು ಮರೆಯುವಷ್ಟು ಪ್ರೀತಿಯನ್ನು ಇಲ್ಲಿನ ಜನರು ನೀಡಿದ್ದಾರೆ. ಬಿಜೆಪಿಯಲ್ಲಿ ತತ್ವ, ಸಿದ್ಧಾಂತ ಕೇವಲ ಮಾತಿನಲ್ಲಿ ಇದೆ. ಹಿಂದಿನ ನಾಯಕರ ತತ್ವ ಸಿದ್ಧಾಂತ ಈಗ ಬಿಜೆಪಿಯಲ್ಲಿ ಇಲ್ಲ. ಬಿಜೆಪಿ ಈಗ ಕೇವಲ ಬ್ಯುಸಿನೆಸ್ ಸೆಂಟರ್ ಆಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ | Mandya Politics: ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಸುಮಲತಾ ಕಣಕ್ಕೆ: ಏನೇನು ಲೆಕ್ಕಾಚಾರಗಳು?

ನನ್ನ ಕೊನೆಯುಸಿರು ಇರುವವರೆಗೆ ಗಂಗಾವತಿ ಜನರ ಋಣವನ್ನು ಮರೆಯುವುದಿಲ್ಲ. ನನಗೆ ಇಲ್ಲಿ ಯಾವುದೇ ಸ್ಪರ್ಧೆ ಕಾಣುತ್ತಿಲ್ಲ. ಇದು ದುರಹಂಕಾರದ ಮಾತಲ್ಲ. ಇಷ್ಟೊಂದು ಪ್ರೀತಿಯನ್ನು ಜನರು ತೋರಿಸುತ್ತಿದ್ದಾರೆ. ನನ್ನ ಪತ್ನಿ 30ನೇ ವರ್ಷದಿಂದ ಮನೆಯಿಂದ ಹೊರಗೆ ಕಾಲು ಇಟ್ಟಿರಲಿಲ್ಲ. ಅವಳಿ ಜಿಲ್ಲೆ ಜನರು ನಮ್ಮ ಮೇಲೆ ಇಟ್ಟಿರೋ ನಂಬಿಕೆ ಹಾಳು ಮಾಡಿಕೊಳ್ಳಬಾರದು ಎಂದು ಲಕ್ಷ್ಮಿ ಅರುಣ ಸ್ಪರ್ಧೆ ಮಾಡಿದ್ದಾರೆ ಎಂದರು.

ಶ್ರೀರಾಮುಲು ಧ್ವನಿಯನ್ನು ಅಡಗಿಸಿದ್ದಾರೆ. ಅವರು ಸ್ವತಃ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಳ್ಳಾರಿಗೆ ಬೇಕಿರುವ ಕನಸಿನ ಯೋಜನೆಗಳು ಜಾರಿಯಾಗುತ್ತಿಲ್ಲ. ಇದಕ್ಕೆ ಇಂದಿನ ಬದಲಾದ ಬಿಜೆಪಿಯೇ ಕಾರಣ ಎಂದು ಆರೋಪಿಸಿದ ಅವರು, 2010ರಲ್ಲೇ ನಾವು ನವಲಿ ಜಲಾಶಯದ ಕನಸು ಕಂಡಿದ್ದೆವು. ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇಲ್ಲಿನ ನಾಯಕರು ಈ ಭಾಗದ ಜನರ ಬಗ್ಗೆ ಮಾತನಾಡಿದರೆ ಅವರನ್ನು ಸಂಪೂರ್ಣ ತುಳಿದು ಹಾಕಲಿದ್ದಾರೆ ಎಂದು ಕಿಡಿಕಾರಿದರು.

ಟಿಕೆಟ್ ತಪ್ಪಲು ಬಿ.ಎಲ್.ಸಂತೋಷ ಕಾರಣ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್ ಅವರ ಕುಟುಂಬ ಜನ ಸಂಘದಿಂದ ಬೆಳೆದು ಬಂದಿದೆ. ಅಂತಹವರಿಗೆ ಈ ಗತಿಯಾದರೆ ಇನ್ನು ಸಾಮಾನ್ಯ ಕಾರ್ಯಕರ್ತರ ಪಾಡು ಏನು ಎಂದು ತಿಳಿಸಿದರು.

ಕೆಆರ್‌ಪಿಪಿ ನಾಯಕಿ ಲಕ್ಷ್ಮಿ ಅರುಣ ಮಾತನಾಡಿ, ಜನರು ರೆಡ್ಡಿ ಅವರನ್ನು ಮನೆ ಮಗನಂತೆ ಸ್ವಾಗತ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನ ಅವರಿಗೆ ಬೆಂಬಲ ನೀಡಿದ್ದಾರೆ. ಬಳ್ಳಾರಿಯಲ್ಲಿ ರೆಡ್ಡಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಭಾರಿ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಲು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಇಲ್ಲದೇ ನಾನು ನಾಮಪತ್ರ ಸಲ್ಲಿಸಿದ್ದೇನೆ. ಇದು ನಮಗೆ ಎಂದೂ ಮರೆಯದ ಕಹಿ ನೆನಪು ಎಂದು ಭಾವುಕರಾದರು.

ಇದನ್ನೂ ಓದಿ | Karnataka Election 2023 : ದೇವೇಗೌಡರ ಸಮ್ಮುಖದಲ್ಲಿ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ

ಇನ್ನು ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು ಎಂಬ ಚುನಾವಣಾ ಆಯೋಗದ ಸೂಚನೆ ಇದ್ದರೂ ಮೆರವಣಿಗೆಗೆ ಸಾಕಷ್ಟು ಮಕ್ಕಳನ್ನು ಕರೆತರಲಾಗಿತ್ತು. ಜತೆಗೆ ವಿಪರೀತ ಬಿಸಿಲಿನಿಂದಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಕುಡಿಯುವ ನೀರಿಗಾಗಿ ಮುಗಿಬಿದ್ದದ್ದು ಕಂಡುಬಂತು.

Exit mobile version