Site icon Vistara News

Gambling Case: ತುಮಕೂರಲ್ಲಿ ಯುಗಾದಿಯಂದು ಜೂಜಾಟದಲ್ಲಿ ತೊಡಗಿದ್ದ 291 ಮಂದಿ ಬಂಧನ!

Gambling case

ತುಮಕೂರು: ಯುಗಾದಿ ಹಬ್ಬದಂದು ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ ವಿವಿಧೆಡೆ ಜೂಜಾಟಕ್ಕೆ ಸಂಬಂಧಿಸಿ 53 ಪ್ರಕರಣ ದಾಖಲಾಗಿದ್ದು, ಒಟ್ಟು 291 ಜನರನ್ನು ಬಂಧಿಸಿ, 3.21 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತುಮಕೂರು ನಗರ ಉಪವಿಭಾಗದಲ್ಲಿ 15 ಪ್ರಕರಣದಲ್ಲಿ 77 ಜನರ ಬಂಧನವಾಗಿದ್ದು, ತಿಪಟೂರು ಉಪವಿಭಾಗದಲ್ಲಿ 11 ಪ್ರಕರಣದಲ್ಲಿ 63 ಜನರು, ಶಿರಾ ಉಪವಿಭಾಗದಲ್ಲಿ 20 ಪ್ರಕರಣದಲ್ಲಿ 108 ಮಂದಿ, ಮಧುಗಿರಿ ಉಪವಿಭಾಗದಲ್ಲಿ 7 ಪ್ರಕರಣದಲ್ಲಿ 43 ಜನರನ್ನು ಬಂಧಿಸಲಾಗಿದೆ.

ತುಮಕೂರು ಎಸ್‌ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಂಧಿತರ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ | FedEx Scam: ಬೆಂಗಳೂರು ವಕೀಲೆಗೆ 15 ಲಕ್ಷ ರೂ. ವಂಚನೆ; ವೆಬ್‌ಕ್ಯಾಮ್‌ ಎದುರು ಬೆತ್ತಲೆ ನಿಂತಿದ್ದೇಕೆ?

ಮಂಡ್ಯದ ಬೀದಿಯಲ್ಲಿ ರೌಡಿಶೀಟರ್‌ ಕೊಚ್ಚಿ ಕೊಲೆ

ಮಂಡ್ಯ: ರೌಡಿಶೀಟರ್‌ (Rowdy Sheeter) ಒಬ್ಬಾತನನ್ನು ಬೀದಿಯಲ್ಲಿ ಮಧ್ಯ ರಾತ್ರಿ ಕೊಚ್ಚಿ ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ಮಂಡ್ಯ ನಗರದ ಸ್ವರ್ಣ ಸಂದ್ರದಲ್ಲಿ ಈ ಘಟನೆ ನಡೆದಿದ್ದು, ಹಳೆ ದ್ವೇಷದ (old vengeance) ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಅಕ್ಷಯ್ (24) ಹತ್ಯೆಯಾದ ಯುವಕ. ಈತನನ್ನು ಫೋನ್ ಮಾಡಿ ಕರೆಸಿಕೊಂಡು ನಡು ಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಲವು ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಅಕ್ಷಯ್ ವಿರುದ್ಧ ರೌಡಿಶೀಟರ್ ತೆರೆಯಲಾಗಿತ್ತು. ಈತನ ಜೊತೆಗೆ ಹಿಂದೆ ಇದ್ದ ಹಲವು ಸ್ನೇಹಿತರು ಇಂದು ಶತ್ರುಗಳಾಗಿದ್ದು, ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಿರುವ ಸಾಧ್ಯತೆ ಇದೆ. ಮಂಡ್ಯದ ಈಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ತೊಡಗಿದ್ದಾರೆ.

ಪತ್ನಿಯನ್ನು ಕೊಂದ, ತಾನೂ ನೇಣು ಹಾಕಿಕೊಂಡ

ಕೊಪ್ಪಳ: ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಪತಿ ಕೊಲೆಯ ನಂತರ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬರ್ಬರ ಘಟನೆ ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ನಡೆದಿದೆ.

ಬುಡಶೆಟ್ನಾಳದ ನಿಂಗಪ್ಪ (45) ಪತ್ನಿಯ ಕೊಲೆಗಡುಕ ಹಾಗೂ ಆತ್ಮಹತ್ಯೆ ಮಾಡಿಕೊಂಡಾತ. ಪತ್ನಿ ಲಕ್ಷ್ಮವ್ವ (40) ಗಂಡನಿಂದ ಕೊಲೆಯಾಗಿರುವವಳು. ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ನಿಂಗಪ್ಪ, ಪದೇ ಪದೆ ಮದ್ಯ ಸೇವಿಸಿ ಬಂದು ಪತ್ನಿಯ ಜೊತೆಗೆ ವಿನಾಕಾರಣ ಜಗಳ ತೆಗೆಯುತ್ತಿದ್ದ ಎಂದು ಆಸುಪಾಸಿನವರು ತಿಳಿಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದ್ದು, ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ | Snake Bite: ಚಿಕ್ಕೋಡಿ ಬಳಿ ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಸಾವು

ಬೈಕಿಗೆ ಟಾಟಾ ಏಸ್‌ ಡಿಕ್ಕಿ; ಇಬ್ಬರ ಸಾವು

ಬೆಂಗಳೂರು: ಬೆಂಗಳೂರಿನ ರಾಜಗೋಪಾಲನಗರ ಬಳಿಯ ಹೆಗ್ಗನಹಳ್ಳಿ ಬಳಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಾಟಾ ಏಸ್‌ ಡಿಕ್ಕಿಯಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಟಾಟಾ ಏಸ್‌ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ. ನಿನ್ನೆ ರಾತ್ರಿ 11 ಘಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version