ರಾಮನಗರ: ರಾಮನಗರ ಜಿಲ್ಲೆಯಾದ್ಯಂತ ಜೂಜುಕೋರರು ಹೆಚ್ಚಾದ ಹಿನ್ನೆಲೆ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಕಳೆದ ಮೂರು ದಿನಗಳ ಹಿಂದೆ ಜೂಜು ಅಡ್ಡೆ ಮೇಲೆ ದಾಳಿ (Gambling Case) ನಡೆಸಿದಾಗ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದ. ನದಿಯಲ್ಲಿ ಈಜುಕೊಂಡು ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ಭಾವಿಸಿ ಪೊಲೀಸರು ವಾಪಸ್ ಬಂದಿದ್ದರು.
ಆದರೆ ಮೂರು ದಿನಗಳ ಬಳಿಕ ಕನಕಪುರ ತಾಲೂಕಿನ ತಿಗಳರಹಳ್ಳಿ ಅರ್ಕಾವತಿ ನದಿಯಲ್ಲಿ ಮೃತದೇಹವು ಪತ್ತೆ ಆಗಿದೆ. ಮರಿಸ್ವಾಮಿ (30) ಮೃತ ವ್ಯಕ್ತಿಯಾಗಿದ್ದಾನೆ. ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದಾಗ ಗಾಬರಿಗೊಂಡ ಮರಿಸ್ವಾಮಿ ಓಡಿಹೋಗಿದ್ದಾನೆ. ಈ ವೇಳೆ ಬೆನ್ನಟ್ಟಿದ ಪೊಲೀಸರು ಬಹುದೂರ ಹೋಗಿದ್ದಾರೆ.
ಇದನ್ನೂ ಓದಿ: Drowned in River : ಕೆರೆಯಲ್ಲಿ ಈಜಲು ಹೋದ ಬಾಲಕ ನೀರುಪಾಲು
ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮರಿಸ್ವಾಮಿ ನದಿಗೆ ಹಾರಿದ್ದಾನೆ. ನದಿಯಲ್ಲಿ ಈಜುಕೊಂಡು ಹೋದ ಹಿನ್ನೆಲೆ ಪೊಲೀಸರು ಸುಮ್ಮನಾಗಿದ್ದಾರೆ. ಆದರೆ ನದಿಯಲ್ಲಿ ಈಜಲು ಆಗದೆ ಕೊಂಚ ದೂರ ಹೋದ ಮರಿಸ್ವಾಮಿ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.
ಮೂರು ದಿನದ ಬಳಿಕ ಮೃತದೇಹವು ನದಿಯಲ್ಲಿ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ನೋಡಿದಾಗ ನದಿಯಲ್ಲಿ ಹಾರಿದವನು ಇವನೇ ಎಂದು ತಿಳಿದುಬಂದಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಪೊಲೀಸರ ವಿರುದ್ಧ ಮೃತ ಸಂಬಂಧಿಕರು ಆಕ್ರೋಶ ಹೊರಹಾಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ