ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈ ಹೆಸರಿನಲ್ಲೇ ಒಂದು ಪವರ್ ಇದೆ. ಅಪ್ಪು ನಮ್ಮನ್ನು ಅಗಲಿ ವರ್ಷವಾದರೂ, ಅವರ ಅಭಿಮಾನಿಗಳು ಅವರನ್ನು ಸ್ಮರಿಸಿದ ದಿನಗಳೇ ಇಲ್ಲ. ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ (Gandhada Gudi 2022) ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ.
ಸಿನಿಮಾ ನೋಡಿದವರಿಗೆ ಸಸಿ ವಿತರಣೆ
ರಾಯಚೂರಿನಲ್ಲಿ ಯೂತ್ ಬ್ರಿಗೇಡ್ ವತಿಯಿಂದ ಅಪ್ಪು ಸಿನಿಮಾ ಬಿಡುಗಡೆಗೆ ಅದ್ಧೂರಿ ಸಿದ್ಧತೆ ನಡೆದಿದ್ದು, ಪದ್ಮನಾಭ ಹಾಗೂ ಮಿರಜ್ ಸಿನೆಮಾಸ್‌ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಎರಡೂ ಕಡೆ ಬೆಳಗ್ಗೆ 10 ಗಂಟೆಗೆ ಮೊದಲ ಶೋ ಆರಂಭವಾಗಲಿದ್ದು, ಸಿನೆಮಾ ನೋಡಲು ಬರುವ ಅಭಿಮಾನಿಗಳಿಗೆಲ್ಲ ಸಸಿ ವಿತರಣೆ ಆಗಲಿದೆ. ಗಂಧದ ಗುಡಿ ಸಿನೆಮಾ ಪ್ರಕೃತಿಗೆ ಸಂಬಂಧಿಸಿದ ಕಾರಣಕ್ಕೆ ಸಸಿ ನೀಡಲು ಯೋಜನೆ ರೂಪಿಸಲಾಗಿದೆ.
ಕಾಫಿನಾಡ ಚಂದು ಗಂಧದ ಗುಡಿ ಪ್ರಚಾರ
ಪುನೀತ್ ಅಣ್ಣ, ಶಿವಣ್ಣನ ಅಭಿಮಾನಿ ಚಿಕ್ಕಮಗಳೂರಿನ ಕಾಫಿನಾಡ ಚಂದು ಕೂಡ ಗಂಧದಗುಡಿ ಚಿತ್ರವನ್ನು ವಿಶೇಷವಾಗಿ ಪ್ರಚಾರ ಮಾಡುತ್ತಿದ್ದಾರೆ. ಗಂಧದಗುಡಿ ಹೆಸರಿನಲ್ಲಿ ಹೇರ್ ಕಟಿಂಗ್ ಮಾಡಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಪುನೀತ್ ಅಣ್ಣನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಥಿಯೇಟರ್‌ನಲ್ಲಿ ರಾರಾಜಿಸುತ್ತಿರುವ ಪವರ್ ಕಟೌಟ್
ಸಕ್ಕರೆ ನಗರಿ ಮಂಡ್ಯದಲ್ಲಿ ಪವರ್ ಸ್ಟಾರ್ ಧೂಳ್ ಎಬ್ಬಿಸುತ್ತಿದ್ದು, ಮಹಾವೀರ ಚಿತ್ರ ಮಂದಿರದಲ್ಲಿ ಗಂಧದ ಗುಡಿ ತೆರೆ ಕಾಣುತ್ತಿದೆ. ಅಪ್ಪು ಅಭಿಮಾನಿಗಳು ಥಿಯೇಟರ್ ಮುಂಭಾಗ ಪವರ್ ಕಟೌಟ್, ಬ್ಯಾನರ್ ಮೂಲಕ ಪ್ರೇಕ್ಷರನ್ನು ಸ್ವಾಗತಿಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ಅಪ್ಪು ಜಾತ್ರೆ ಶುರುವಾಗಲಿದ್ದು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ವಿಜೃಂಭಣೆ ಶುರುವಾಗಲಿದೆ. ಅಭಿಮಾನಿಗಳಿಗಾಗಿ ಅನ್ನ ದಾಸೋಹದ ವ್ಯವಸ್ಥೆ ಇದೆ.
ಚಿತ್ರ ವೀಕ್ಷಣೆಗೆ ಬಂದವರಿಗೆ ಉಪಾಹಾರ
ಚಿತ್ರದುರ್ಗ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಗಂಧದಗುಡಿ ಚಿತ್ರ ಪ್ರದರ್ಶನವು ಬೆಳಗ್ಗೆ 6 ಗಂಟೆಗೆ ಮಾರ್ನಿಂಗ್ ಶೋ ಇರಲಿದೆ. ಚಿತ್ರಮಂದಿರದಲ್ಲಿ ಈಗಾಗಲೇ ಬ್ಯಾನರ್, ಕಟೌಟ್ ನಿರ್ಮಿಸುತ್ತಿದ್ದು, ಚಿತ್ರ ವೀಕ್ಷಣೆಗೆ ಬಂದವರಿಗೆ ಉಪಾಹಾರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಸಸಿ ನೀಡಲಾಗುತ್ತದೆ. ಥಿಯೇಟರ್‌ನ ಆವರಣದಲ್ಲಿ ಡಾನ್ಸ್ ಮೂಲಕ ರಂಜಿಸಲು ರಿಹರ್ಸಲ್ ಜೋರಾಗಿ ನಡೆಸಲಾಗಿದೆ.
ಫ್ರೀ ಹೇರ್ ಕಟ್ಟಿಂಗ್
ಅಪ್ಪು ಅಭಿನಯದ ಗಂಧದ ಗುಡಿ ಸಾಕ್ಷ್ಯಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಕೆಲವು ಕಡೆ ಸಲೂನ್‌ನಲ್ಲಿ ಗ್ರಾಹಕರಿಗೆ ಉಚಿತ ಹೇರ್ ಕಟಿಂಗ್ ಮಾಡಿ ಅಭಿಮಾನ ಮೆರೆಯಲಾಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆಜಿ ಟೆಂಪಲ್ ಗ್ರಾಮದ ಯುವಕ ಪವನ್, ಎರಡು ದಿನ ಉಚಿತ ಹೇರ್ ಕಟಿಂಗ್ ಸೇವೆ ನೀಡಿದ್ದಾರೆ. ಪ್ರತಿ ವರ್ಷ ಅಪ್ಪು ಪುಣ್ಯಸ್ಮರಣೆಯ ವೇಳೆ ಉಚಿತ ಹೇರ್ ಕಟಿಂಗ್ ಸೇವೆ ನೀಡುವುದಾಗಿ ಹೇಳಿದ್ದಾರೆ.
34 ಅಡಿ ಎತ್ತರದ ಅಪ್ಪು ಕಟ್‌ಔಟ್
ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ 34 ಅಡಿ ಎತ್ತರದ ಪುನೀತ್ ರಾಜ್‌ಕುಮಾರ್ ಕಟ್ ಔಟ್ ತಲೆಎತ್ತಿದೆ. ಗುರುವಾರದ ಪ್ರೀಮಿಯರ್ ಶೋ ಟಿಕೆಟ್ ಫುಲ್ ಸೋಲ್ಡ್ ಔಟ್ ಆಗಿದ್ದು, ಮೊದಲ ದಿನದ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮೊದಲ ದಿನ ಎರಡು ಚಿತ್ರಮಂದಿರದಿಂದ ಒಟ್ಟು 14 ಶೋ ನಡೆಯಲಿದೆ.
ಇದನ್ನೂ ಓದಿ | ಮೆಲ್ಬೋರ್ನ್ ಸ್ಟೇಡಿಯಮ್‌ನಲ್ಲಿ ಗಂಧದಗುಡಿಯ ಕಲರವ