ಬೆಂಗಳೂರು: ಪುನೀತ್ ರಾಜ್‌ಕುಮಾರ್ ಅಭಿನಯದ ʼಗಂಧದ ಗುಡಿʼ ಚಿತ್ರ ರಾಜ್ಯಾದ್ಯಂತ 250 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಲಕ್ಷಾಂತರ ಅಪ್ಪು ಅಭಿಮಾನಿಗಳು ತಡರಾತ್ರಿಯಿಂದಲೇ ಶೋ ನೋಡಲು ಮುಗಿಬಿದ್ದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿಯೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಪುನೀತ್ ಅಭಿನಯಿಸಿದ ಕೊನೆಯ ಚಿತ್ರ ಇದಾಗಿದ್ದು, ಹಲವು ಕಡೆ ಅಭಿಮಾನಿಗಳು ವಿನೂತನವಾಗಿ ಚಿತ್ರಕ್ಕೆ ಸ್ವಾಗತ ಕೋರಿದರು. ಅಭಿಮಾನಿಗಳಿಂದ ಕಂಠೀರವ ಮುಂಭಾಗದಲ್ಲಿ ನೆಚ್ಚಿನ ನಟ ಪುನೀತ್‌ರ 75 ಕಟೌಟ್ ನಿರ್ಮಿಸಲಾಗಿತ್ತು. ಪುನೀತ್ 1975ನೇ ಇಸವಿಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ 75 ಕಟೌಟ್ ನಿಲ್ಲಿಸಲಾಗಿದೆ. ಇದರಲ್ಲಿ ಅಪ್ಪು ಅಭಿನಯದ ಎಲ್ಲಾ ಸಿನಿಮಾಗಳ ಕಟೌಟ್ ಇದೆ. ಪುನೀತ್ ರಾಜ್‍ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ನವೆಂಬರ್ 1ರವರೆಗೂ ರಾಜರತ್ನನ ಕಟೌಟ್ಸ್ ರಾರಾಜಿಸಲಿವೆ. ಸಮಾಧಿ ವೀಕ್ಷಣೆಗೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಶೋ ಆರಂಭವಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಈಗಾಗಲೇ ಪ್ರೀಮಿಯರ್ ಶೋಗೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಇಂದಿನ ಟಿಕೇಟ್‌ಗಳು ಬಹುತೇಕ ಎಲ್ಲಾ ಕಡೆ ಸೋಲ್ಡ್ ಔಟ್ ಆಗಿವೆ. ಅಭಿಮಾನಿಗಳು ಥಿಯೇಟರ್ ಮುಂದೆ ಪಟಾಕಿ ಹೊಡೆದು, ಕ್ಯಾಂಡಲ್ ಹಚ್ಚಿ, ಗಂಧದ ಗುಡಿಗೆ ಪೋಸ್ಟರ್‌ರಿಗೆ ಕ್ಷೀರಾಭಿಷೇಕ ಮಾಡಿ, ತೆಂಗಿನ ಕಾಯಿ ಒಡೆದು ತಮ್ಮ ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದರು.
ರಾಜ್ಯದೆಲ್ಲೆಡೆ ಇದೇ ಚಿತ್ರಣ ಕಂಡುಬಂತು. ಹಲವು ಕಡೆ ಮೊದಲ ಶೋಗೆ ಬಂದ ಅಭಿಮಾನಿಗಳಿಗೆ ತಿಂಡಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಇದನ್ನೂ ಓದಿ | Puneeth Rajkumar | ʻಗಂಧದ ಗುಡಿʼ ಬಿಡುಗಡೆ ಹಿನ್ನೆಲೆ: ಹಲವೆಡೆ ಚಿತ್ರಮಂದಿರಗಳಿಗೆ ಸಿಂಗಾರ, ಅಪ್ಪು ಎಂದು ಜೈಕಾರ!