ಬೆಂಗಳೂರು: ಗಾಂಧಿನಗರ ವಿಧಾನಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಪ್ತಗಿರಿ ಗೌಡ ವಿರುದ್ಧ ಕನಿಷ್ಠ ಮತಗಳಿಂದ ವಿಜಯ ಸಾಧಿಸಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ 2018ರಲ್ಲಿ 47,354 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ ಅವರು ವಿಜಯ ಸಾಧಿಸಿದ್ದರು. ಬಿಜೆಪಿ ಎ ಆರ್ ಸಪ್ತಗಿರಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.
ಹಲವು ಭಾಷಿಕರು ಇಲ್ಲಿ ನೆಲೆಸಿದ್ದು, ಉತ್ತರ ಭಾರತ ಮೂಲದ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರಾಗಿದ್ದು, ಅನ್ಯ ಭಾಷಿಕರೇ ಬಹುಸಂಖ್ಯಾತರಾಗಿದ್ದಾರೆ. ಬಹು ಭಾಷೆ, ಬಹು ಸಂಸ್ಕೃತಿ ವಿಶೇಷತೆ ಹೊಂದಿರುವ ಈ ಕ್ಷೇತ್ರದಲ್ಲಿ ತಮಿಳು ಭಾಷಿಕ ಮತದಾರರು ಅಭ್ಯರ್ಥಿಯ ಹಣೆಬರಹ ಬರೆಯುತ್ತಾರೆ. ಸದಾ ಜನನಿಬಿಡವಾದ ವಾಣಿಜ್ಯ ಕೇಂದ್ರವೂ ಇದಾಗಿದ್ದು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಹಾಗೂ ರೈಲ್ವೆ ಸ್ಟೇಷನ್ ಇರುವ ಮೆಜೆಸ್ಟಿಕ್ ಪ್ರದೇಶ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಇದನ್ನೂ ಓದಿವ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಕಾಗೇರಿ, ಕೆ.ಸುಧಾಕರ್ಗೆ ಸೋಲು
ದಿನೇಶ್ ಗುಂಡೂರಾವ್ ಅವರು 1999ರಿಂದ ಈ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿದ್ದಾರೆ. ಇಲ್ಲೇ ಗೆದ್ದು ಶಾಸಕ ಹಾಗೂ ಮಂತ್ರಿ ಸ್ಥಾನವನ್ನೂ ಪಡೆದುಕೊಂಡಿದ್ದಾರೆ. ಮೈಸೂರು ಕರ್ನಾಟಕ ಭಾಗವಾಗಿ 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಗಾಂಧಿ ನಗರದಿಂದ ಡಿ. ವೆಂಕಟೇಶ್ ಅವರು ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. 1957, 1962 ಹಾಗೂ 1967ರ ಚುನಾವಣೆಗಳಲ್ಲಿ ನಾಗರತ್ನಮ್ಮ ಹಿರೇಮಠ ಹ್ಯಾಟ್ರಿಕ್ ಸಾಧನೆ ಮಾಡಿದ್ದರು . 1972ರಲ್ಲಿ ಕೆ ಶ್ರೀರಾಮುಲು ಎಂಬುವವರು ಇಲ್ಲಿ ಕಾಂಗ್ರೆಸ್ ಗೆಲುವನ್ನು ಮುಂದುವರಿಸಿದರು. ಅಚ್ಚರಿಯೆಂದರೆ ಈ ಕ್ಷೇತ್ರದಲ್ಲಿ 1994ರಲ್ಲಿ ಎಡಿಎಎಂಕೆ ಪಕ್ಷವೂ ಒಂದು ಬಾರಿ ಗೆಲುವು ತನ್ನದಾಗಿಸಿಕೊಂಡಿತ್ತು.