Site icon Vistara News

Ganesh Chaturthi| ಗಣೇಶನ ಮೇಲೆ ಭಕ್ತಿ, ಪುನೀತ್‌ ರಾಜ್‌ ಕುಮಾರ್‌ ಮೇಲೆ ಪ್ರೀತಿ

puneet Ilakal

ಬಾಗಲಕೋಟೆ: ಪುನೀತ್‌ ರಾಜ್‌ ಕುಮಾರ್‌ ಅವರು ನಿಧನರಾದ ಬಳಿಕ ಯಾವುದೇ ಹಬ್ಬ ಬಂದರೂ ಅವರ ನೆನಪು ಮರುಕಳಿಸುತ್ತದೆ. ಕಳೆದ ಬಾರಿ ಮೊಹರಮ್‌ ಹಬ್ಬದ ಮೆರವಣಿಗೆಯಲ್ಲಿ ಮುಸ್ಲಿಮರು ಪುನೀತ್‌ ಭಾವಚಿತ್ರವನ್ನು ಹಿಡಿದು ನಡೆದಿದ್ದರು, ಕುಣಿದಿದ್ದರು. ಇದೀಗ ಗಣೇಶೋತ್ಸವದಲ್ಲೂ ಅದೇ ರೀತಿ ಜನ ನಡೆದುಕೊಳ್ಳುತ್ತಿದ್ದಾರೆ. ಒಂದು ಕಡೆ ಗಣೇಶನ ಮೇಲೆ ಭಕ್ತಿ, ಇನ್ನೊಂದು ಕಡೆ ಪುನೀತ್‌ ರಾಜ್‌ ಕುಮಾರ್‌ ಮೇಲೆ ಪ್ರೀತಿ ಎರಡೂ ಜತೆಯಾಗಿ ಮುನ್ನಡೆಯುತ್ತಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ನಗರದಲ್ಲಿ ಗಣೇಶನ ಮೂರ್ತಿಯನ್ನು ಮೆರವಣಿಗೆಯಲ್ಲಿ ತರುವ ವೇಳೆ ಪುನೀತ್‌ ರಾಜ್‌ ಕುಮಾರ್‌ ಅವರ ಚಿತ್ರವನ್ನೂ ಜತೆಗಿಡಲಾಗಿದೆ. ಜತೆಗೆ ಹುಡುಗರೆಲ್ಲ ಪುನೀತ್‌ ಫೋಟೊವನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿರುವ ದೃಶ್ಯ ಗಮನ ಸೆಳೆದಿದೆ.

ಇಳಕಲ್‌ ಪಟ್ಟಣದಲ್ಲಿ ನಡೆದ ಗಣೇಶನ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪುನೀತ್‌ ರಾಜ್‌ ಕುಮಾರ್‌ ಚಿತ್ರ

ಇಳಕಲ್‌ನ ಶುಕ್ಲಾಂಬಿಕಾ ದೇವಿ ಮತ್ತು ಗಜಾನನ ಯುವಕ ಮಂಡಳಿ ವತಿಯಿಂದ 5.5 ಅಡಿ ಎತ್ತರದ ಗಂಧದ ಗುಡಿ ಗಣೇಶನನ್ನು ಇಳಕಲ್ ನಗರದ ಸರ್ಕಾರಿ ಆಸ್ಪತ್ರೆಯಿಂದ ಮೆರವಣಿಗೆಯಲ್ಲಿ ತರಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ದ್ವಾರಕಾ ಲಾಡ್ಜ್ ಬಳಿ ಪ್ರತಿಷ್ಠಾಪನೆ ಮಾಡಲಾಗಿದೆ.

ಚಿಕ್ಕಮಗಳೂರಿನಲ್ಲೂ ಪುನೀತ್‌ ಗಣೇಶ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಪುನೀತ್‌ ಮತ್ತು ಗಣೇಶ ಜತೆಗಿರುವ ಮೂರ್ತಿಗೆ ಭಾರಿ ಬೇಡಿಕೆ ಬಂದಿದೆ. ತರೀಕೆರೆ ಪಟ್ಟಣದ ಕುಂಬಾರ ಬೀದಿಯಲ್ಲಿ ಕಲಾವಿದ ಚಂದ್ರು ಹಾಗೂ ಪ್ರಸನ್ನ ಎಂಬವರು ಪುನೀತ್‌ ಅಭಿಮಾನಿಗಳಾಗಿದ್ದು, ಗಣೇಶ ಮತ್ತು ಪುನೀತ್‌ ಜತೆಗಿರುವ ಮೂರ್ತಿಯನ್ನು ನಿರ್ಮಿಸಿದ್ದಾರೆ. ಗಣೇಶ ಅಪ್ಪುವಿನ ಹೆಗಲ ಮೇಲೆ ಕೈ ಹಾಕಿದ ಈ ಮೂರ್ತಿಯನ್ನು ಮೋಹಿತ್ ಕುಮಾರ್ ಎಂಬುವರು ಹೇಳಿ ಮಾಡಿಸಿದ್ದಾರೆ. ೧೦ ಸಾವಿರ ರೂ. ಅಡ್ವಾನ್ಸ್‌ ಬೇರೆ ಕೊಟ್ಟಿದ್ದರು. ಇದನ್ನು ತಮಗೆ ಕೊಡಿ ಎಂದು ಬೇರೆಯವರು ಕೂಡಾ ಕೇಳಿದ್ದರಂತೆ. ಆದರೆ, ಒಂದೇ ಮೂರ್ತಿ ಮಾಡಿದ್ದರಿಂದ ಕೊಡಲು ಆಗಿಲ್ಲ.

ತರೀಕೆರೆ ಪಟ್ಟಣದ ಕುಂಬಾರಬೀದಿಯ ಪುಟ್ಟಣ್ಣ ಎಂಬ ಕಲಾವಿದ ಕೂಡ ಗಣಪತಿ ಜೊತೆ ಅಪ್ಪು ಇರುವ ಮೂರ್ತಿ ಕೂಡ ಮಾಡಿದ್ದು ಈ ಮೂರ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಗಣಪತಿಯ ಎಡೆಭಾಗದಲ್ಲಿ ಗೌರಿ ಇರುವಂತೆ ಸ್ಥಳ ಬಿಟ್ಟಿದ್ದು ಬಲಭಾಗದಲ್ಲಿ ಪುನೀತ್ ರಾಜ್ ಕುಮಾರ್ ಇರುವಂತೆ ಮೂರ್ತಿಯನ್ನ ರಚಿಸಿದ್ದಾರೆ.

Exit mobile version