Site icon Vistara News

Ganesh Chaturthi | ಗಣೇಶ ಪೂಜಾ ಮಂಟಪದಲ್ಲಿ ಸಾವರ್ಕರ್‌ ಹವಾ, ಭಾವಚಿತ್ರ, ಜೀವನಕಥೆ ಪುಸ್ತಕ ವಿತರಣೆ

sawarrkar tumkur

ಬೆಂಗಳೂರು: ರಾಜ್ಯಾದ್ಯಂತ ವಿನಾಯಕ ದಾಮೋದರ್‌ ಸಾವರ್ಕರ್‌ (ವಿ.ಡಿ. ಸಾವರ್ಕರ್‌) ಕುರಿತಂತೆ ವಾದ ವಿವಾದಗಳು ಎದ್ದಿರುವ ನಡುವೆಯೇ ಗಣೇಶೋತ್ಸವದಲ್ಲಿ ಸಾವರ್ಕರ್‌ ವಿಜೃಂಭಣೆ ಜೋರಾಗಿಯೇ ನಡೆದಿದೆ. ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್‌ ಅವರ ಭಾವಚಿತ್ರಗಳನ್ನು ಇಡಲಾಗಿದೆ, ಸಾವರ್ಕರ್‌ ಅವರ ಜೀವನ ಕಥೆ ಆಧರಿಸಿದ ಪುಸ್ತಕಗಳನ್ನೂ ವಿತರಿಸಲಾಗುತ್ತಿದೆ.

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಲವು ಕಡೆ ಸಾವರ್ಕರ್‌ ಅವರ ಭಾವಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಶಿವಮೊಗ್ಗದ ಟಿಪ್ಪು ನಗರದಲ್ಲಿ ಹಾಕಿದ್ದ ಸಾವರ್ಕರ್‌ ಫ್ಲೆಕ್ಸ್‌ನ್ನು ಅಲ್ಲಿನ ಮುಸ್ಲಿಮರು ತೆಗೆಯಲು ಯತ್ನಿಸಿದ್ದರಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಇದರ ನಡುವೆ ರಾಜ್ಯಾದ್ಯಂತ ಸಾವರ್ಕರ್‌ ಪರ ಮತ್ತು ವಿರುದ್ಧ ದೊಡ್ಡ ಮಟ್ಟದಲ್ಲಿ ವಾಕ್ಸಮರ ನಡೆದಿತ್ತು. ಈ ಹಂತದಲ್ಲಿ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಸಂಘ ಪರಿವಾರದವರು ಗಣೇಶೋತ್ಸವದ ವೇಳೆ ಸಾವರ್ಕರ್‌ ಫೋಟೊವನ್ನು ಇಡುವ ಬಗ್ಗೆ ಮಾತುಕತೆ ನಡೆಸಿದ್ದರು. ಶ್ರೀರಾಮ ಸೇನೆಯ ಸಂಚಾಲಕ ಪ್ರಮೋದ್‌ ಮುತಾಲಿಕ್‌, ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಗಣೇಶೋತ್ಸವದ ವೇಳೆ ಸಾವರ್ಕರ್‌ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರಚಾರ ಮಾಡಬೇಕು ಎಂದು ಕರೆ ನೀಡಿದ್ದರು.

ತುಮಕೂರಿನ ಗಣೇಶೋತ್ಸವ ಮಂಟಪದ ಹೊರಗಡೆ ಸಾವರ್ಕರ್‌ ಫ್ಲೆಕ್ಸ್‌

ತುಮಕೂರಿನಲ್ಲಿ ಕೇಸರಿ ಧ್ವಜದಲ್ಲಿ ಸಾವರ್ಕರ್‌
ತುಮಕೂರಿನ ನಾಗರಕಟ್ಟೆ ದೇವಸ್ಥಾನದ ಬಳಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರವಿರುವ ಕೇಸರಿ ಧ್ವಜ ಹಿಡಿದು ಸಂಭ್ರಮಿಸಿದರು. ಹಿಂದೂ ಮಹಾ ಗಣಪತಿ ಸಮಿತಿಯಿಂದ ನಡೆಯುವ ಈ ಉತ್ಸವದ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಭಾವಚಿತ್ರವನ್ನು ಹಾಕಲಾಗಿದೆ. ವೀರ ಸಾವರ್ಕರ್ ಕೀ ಜೈ, ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಅನ್ನೋ ಘೋಷಣೆಗಳನ್ನು ಕೂಗಲಾಯಿತು.

ಚಿತ್ರದುರ್ಗದಲ್ಲಿ ಗಣೇಶೋತ್ಸವ ಪ್ರವೇಶ ದ್ವಾರದಲ್ಲೇ ಸಾವರ್ಕರ್‌ ಚಿತ್ರ ಹಾಕಲಾಗಿದೆ.

ಚಿತ್ರದುರ್ಗದಲ್ಲಿ ಮಂಟಪಕ್ಕೆ ಸಾವರ್ಕರ್‌ ಹೆಸರು
ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ಗಣೇಶೋತ್ಸವದ ಮಂಟಪಕ್ಕೆ ‘ವೀರ ಸಾವರ್ಕರ್’ ಮಂಟಪʼ ಎಂದು ಹೆಸರು ಇಡಲಾಗಿದೆ. ಪ್ರವೇಶ ದ್ವಾರದ ಮೇಲೆ ವೀರ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗಿದೆ. ನಾಳೆಯಿಂದ ಸಾವರ್ಕರ್ ಜೀವನ ಬಿಂಬಿಸುವ ಭಾವಚಿತ್ರ ಪ್ರದರ್ಶನ, ಸಾವರ್ಕರ್ ಜೀವನದ ಬಗೆಗೆ ಉಪನ್ಯಾಸಗಳು ನಡೆಯಲಿವೆ ಎಂದು ಭಜರಂಗದಳ ವಿಭಾಗೀಯ ಸಂಚಾಲಕ ಪ್ರಭಂಜನ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ಮಂಟಪಗಳಿಗೆ ಫೋಟೊ ವಿತರಣೆ
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿ ನಾಯಕ ಮುರುಘೇಂದ್ರಗೌಡ ಪಾಟೀಲ್ ನೇತೃತ್ವದಲ್ಲಿ ವೀರ್ ಸಾವರ್ಕರ್ ಭಾವಚಿತ್ರ ವಿತರಣೆ ನಡೆಯಿತು. ಈ ಬಾರಿ ಗಣೇಶೋತ್ಸವವನ್ನು ವೀರ್ ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸಲು ಕರೆ ನೀಡಲಾಗಿದೆ. ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು 378 ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದ್ದು, ಗಣೇಶ ಪ್ರತಿಷ್ಠಾಪನೆಗೂ ಮುನ್ನವೇ ಮಂಟಪಗಳಿಗೆ ತೆರಳಿ ಸಾವರ್ಕರ್ ಭಾವಚಿತ್ರ ವಿತರಣೆ ಮಾಡಲಾಗಿದೆ.

ಬೆಂಗಳೂರಿನಲಿ ಶ್ರೀರಾಮಸೇನೆ ವತಿಯಿಂದ ಮನೆ ಮನೆಗೆ ಸಾವರ್ಕರ್‌ ಭಾವಚಿತ್ರಗಳನ್ನು ವಿತರಿಸಲಾಯಿತು.

ಬೆಂಗಳೂರಲ್ಲೂ ಸಾವರ್ಕರ್ ಗಣೇಶೋತ್ಸವ
ಬೆಂಗಳೂರಿನ ಹಲವು ಕಡೆ ಸಾವರ್ಕರ್‌ ಹೆಸರಿನಲ್ಲಿ ಗಣೇಶೋತ್ಸವ ನಡೆದಿದೆ. ನಾಗರಭಾವಿಯ ಮಲ್ಲತ್ತಹಳ್ಳಿಯಲ್ಲಿ ಗಣೇಶನ ಪೆಂಡಾಲ್ ನಲ್ಲಿ ಸಾವರ್ಕರ್, ಬಾಲಗಂಗಾಧರ ತಿಲಕರ ಫೋಟೊ ಇಟ್ಟು ಪೂಜೆ ಮಾಡಲಾಯಿತು. ಶ್ರೀರಾಮ ಸೇನೆ ನಗರಧ್ಯಕ್ಷ ಚಂದ್ರಶೇಖರ್ ಕೋಟೆ ನೇತೃತ್ವದಲ್ಲಿ ನಡೆಯುತ್ತಿರುವ ಸಾವರ್ಕರ್ ಗಣೇಶೋತ್ಸವದಲ್ಲಿ ಪೆಂಡಾಲ್ ಅಕ್ಕ ಪಕ್ಕ ಮನೆ ಗೋಡೆಗಳಿಗೂ ಸಾವರ್ಕರ್, ತಿಲಕರ ಫೋಟೊಗಳನ್ನು ವಿತರಿಸಲಾಯಿತು.

‌ಇದನ್ನೂ ಓದಿ| Ganesh Chaturthi| ಗಣೇಶನ ಮೇಲೆ ಭಕ್ತಿ, ಪುನೀತ್‌ ರಾಜ್‌ ಕುಮಾರ್‌ ಮೇಲೆ ಪ್ರೀತಿ

Exit mobile version