ವಿಜಯಪುರ: ಯಲಗೂರು ಸರ್ಕಾರಿ ಶಾಲೆಯಲ್ಲಿ ಪ್ರತಿ ವರ್ಷದಂತೆ ಗಣೇಶ ಮೂರ್ತಿಯನ್ನು (Ganesh Chaturthi) ಕೂರಿಸಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಶಾಲೆಗೆ ಬೀಗ ಹಾಕಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ಶಾಲೆಯಲ್ಲಿ ಗಣೇಶನ ಮೂರ್ತಿಯನ್ನು ಕೂರಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯ ಎಫ್.ಆರ್. ದರ್ಗಾ ಅವರು ಈ ಬಾರಿ ಶಾಲೆಯಲ್ಲಿ ಗಣೇಶನನ್ನು ಕೂರಿಸುತ್ತಿಲ್ಲ ಎಂಬ ವಿಷಯ ಮಕ್ಕಳಿಂದ ಪಾಲಕರಿಗೆ ತಿಳಿದಿದೆ. ಈ ವಿಷಯವನ್ನು ಶಾಲೆಗೆ ಬಂದು ಪ್ರಶ್ನೆ ಮಾಡಿದಾಗ ಈ ಬಾರಿ ಆಚರಣೆ ಇಲ್ಲ ಎಂಬ ಉತ್ತರ ಬಂದಿದೆ. ಈ ಸಂಬಂಧ ಮುಖ್ಯ ಶಿಕ್ಷಕರು ಹಾಗೂ ಗ್ರಾಮಸ್ಥರ ಮಧ್ಯೆ ಕೆಲಕಾಲ ವಾಗ್ವಾದವಾಗಿದೆ. ಕೊನೆಗೆ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ಹೊರ ಆವರಣದಲ್ಲಿ ಮಕ್ಕಳು
ಶಾಲೆಗೆ ಬೀಗ ಹಾಕಿದ್ದರಿಂದ ಮಕ್ಕಳು ಹಾಗೂ ಶಿಕ್ಷಕರು ಹೊರ ಆವರಣದಲ್ಲಿ ಮರದ ಕೆಳಗೆ ಕುಳಿತುಕೊಳ್ಳಬೇಕಾಯಿತು. ಇತ್ತ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಮುಖ್ಯ ಶಿಕ್ಷಕರು ಒಪ್ಪದ ಕಾರಣ ಬಹಳಷ್ಟು ಸಮಯ ಗೊಂದಲದ ವಾತಾವರಣ ಮುಂದುವರಿದಿತ್ತು.
ಬಳಿಕ ಪೊಲೀಸರು ಮುಖ್ಯ ಶಿಕ್ಷಕರ ಮನವೊಲಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಗಣೇಶನ ಮೂರ್ತಿ ಕೂರಿಸಿ ಪೂಜೆ ನೆರವೇರಿಸಲಾಯಿತು.
ಇದನ್ನೂ ಓದಿ | Ganesh Chaturthi | ಗಣೇಶೋತ್ಸವ ಆಚರಿಸದ ಮುಖ್ಯ ಶಿಕ್ಷಕ; ಶಾಲೆಗೆ ಬೀಗ, ಪ್ರತಿಭಟನೆ